Site icon Vistara News

Uttara Kannada News: ಎನ್‌ಎಚ್‌ 66ರ ಸುರಂಗ ಮಾರ್ಗ ಬಂದ್‌; ಎಂಎಲ್‌ಸಿ ಗಣಪತಿ ಉಳ್ವೇಕರ್ ಖಂಡನೆ

MLC Ganapathy Ulvekar latest statement

ಕಾರವಾರ: ಆಡಳಿತ ಪಕ್ಷದ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು ಹಾಗೂ ಐಆರ್‌ಬಿ ಕಂಪನಿಯ ನಡುವಿನ ಮುಸುಕಿನ ಗುದ್ದಾಟದಿಂದ ಸಾರ್ವಜನಿಕರಿಗೆ (Public) ರಾಷ್ಟ್ರೀಯ ಹೆದ್ದಾರಿ 66ಕ್ಕೆ (NH 66) ನಿರ್ಮಿಸಿರುವ ಸುರಂಗ (Tunnel) ಉಪಯೋಗಕ್ಕೆ ಸಿಗದಿರುವುದನ್ನು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಖಂಡಿಸಿದ್ದಾರೆ.

ಕಳೆದ ಸುಮಾರು ಮೂರು ತಿಂಗಳಿನಿಂದ ಸುರಂಗ ಮಾರ್ಗದಲ್ಲಿನ ಸಂಚಾರವನ್ನು ಬಂದ್ ಮಾಡಿಸಿರುವುದರಿಂದ ಪ್ರತಿನಿತ್ಯ ಕಾರವಾರಕ್ಕೆ ಸಂಚರಿಸುವ ಸ್ಥಳೀಯರಿಗೆ ತೊಂದರೆಯಾಗುತ್ತಿರುವ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ಸುರಂಗದಲ್ಲಿ ನೀರು ಸೋರಿಕೆಯಾಗುತ್ತಿದ್ದ ಕಾರಣಕ್ಕೆ ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಿ ದೃಢತೆಯ ಪ್ರಮಾಣಪತ್ರ ನೀಡುವಂತೆ ಗುತ್ತಿಗೆ ಕಂಪನಿಗೆ ಸೂಚಿಸಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ ಆಡಳಿತ ಪಕ್ಷದ ಸ್ಥಳೀಯ ಶಾಸಕ ಸತೀಶ್ ಸೈಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ಎಸ್ ವೈದ್ಯ ಅವರು ಈ ಸುರಂಗವನ್ನು ಸಾರ್ವಜನಿಕರ ಉಪಯೋಗಕ್ಕೆ ತೆರವುಗೊಳಿಸದೇ, ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ತೆಗೆದುಕೊಂಡಿದ್ದು, ಸುರಕ್ಷತಾ ಕಾರಣದಿಂದಾಗಿ ಸುರಂಗವನ್ನು ಮುಚ್ಚಿದ್ದಾರೆ ಎಂಬ ಸಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Weather Report : 20 ಜಿಲ್ಲೆಗಳಲ್ಲಿ ಮಳೆರಾಯನಿಗೆ ಬಿಡುವೇ ಇಲ್ಲ!

ಈ ಭಾಗದಿಂದ ಪ್ರತಿದಿನ ಸಾವಿರಾರು ಸ್ಥಳೀಯ ನಿವಾಸಿಗಳು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಸಂಚರಿಸುತ್ತಿದ್ದು, ಸುರಂಗವನ್ನು ಮುಚ್ಚಿರುವುದರಿಂದ ಎಲ್ಲ ವಾಹನ ಸವಾರರೂ 3 ರಿಂದ 4 ಕಿ.ಮೀ ಹೆಚ್ಚುವರಿಯಾಗಿ ಸುತ್ತಿಕೊಂಡು ತೆರಳಬೇಕಾಗಿದೆ. ತಾವೇ ಉದ್ಘಾಟಿಸಿದ ಸುರಂಗವನ್ನು ಸ್ಥಳೀಯ ಶಾಸಕರು ಈಗ ಸುರಕ್ಷತೆಯ ದೃಷ್ಟಿಯಿಂದ ಸರಿ ಇಲ್ಲ ಎಂದು ಹೇಳುತ್ತಿರುವುದು ಕೇವಲ ಸುರಕ್ಷತೆಯ ದೃಷ್ಟಿಗಾಗಿಯೇ ಅಥವಾ ಅದರ ಹಿಂದೆ ಬೇರಾವುದಾದರೂ ಬೇಡಿಕೆ ಅಥವಾ ಹುನ್ನಾರ ಅಡಗಿದೆಯೋ ಎಂಬುದನ್ನು ಜನರಿಗೆ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಭಾಗದ ಜನಪ್ರತಿನಿಧಿಯಾಗಿ ಪ್ರತಿದಿನ ಸಾರ್ವಜನಿಕರಿಂದ ಈ ಬಗ್ಗೆ ನನಗೆ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಮುಚ್ಚಿರುವ ಸುರಂಗವನ್ನು ತಕ್ಷಣ ಸಾರ್ವಜನಿಕರ ಉಪಯೋಗಕ್ಕಾಗಿ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಒಂದು ವಾರದೊಳಗಾಗಿ ಈ ಸುರಂಗವನ್ನು ಮತ್ತೆ ಸಾರ್ವಜನಿಕರ ಉಪಯೋಗಕ್ಕಾಗಿ ತೆರವುಗೊಳಿಸಬೇಕು. ಜಿಲ್ಲಾಧಿಕಾರಿಗಳು ಯಾವುದೇ ರಾಜಕಾರಣಿಗಳ ಒತ್ತಡ ಅಥವಾ ಬೆದರಿಕೆಗೆ ಮಣಿಯದೇ, ದಿಟ್ಟವಾದ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ನಾನು ಒತ್ತಾಯಿಸುತ್ತೇನೆ ಎಂದು ಗಣಪತಿ ಉಳ್ವೇಕರ್ ತಿಳಿಸಿದ್ದಾರೆ.

ಮುಂದಿನ ಒಂದು ವಾರದ ಒಳಗಾಗಿ ಮುಚ್ಚಿರುವ ಈ ಸುರಂಗವನ್ನು ತೆರವುಗೊಳಿಸದಿದ್ದರೆ ಸೆಪ್ಟೆಂಬರ್ 29ರಂದು ತಾವೇ ಮುಂದೆ ನಿಂತು ಸಾರ್ವಜನಿಕರ ಸಹಕಾರದಿಂದ ಈ ಸುರಂಗ ಮಾರ್ಗವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ತೆರವುಗೊಳಿಸುತ್ತೇನೆ. ಆಗ ಯಾವುದಾದರೂ ಕಾನೂನು ಮತ್ತು ಸುವ್ಯಸ್ಥೆಯ ಸಮಸ್ಯೆ ಉಂಟಾದರೆ ಅದಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರೇ ಹೊಣೆ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Mysore Dasara 2023: ಬರ ಹಿನ್ನೆಲೆ ಸರಳವಾಗಿ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ

ಸ್ಥಳೀಯ ಆಡಳಿತ ಹಾಗೂ ಐಆರ್‌ಬಿ ಮತ್ತು ಜನಪ್ರತಿನಿಧಿಗಳು ತಕ್ಷಣ ಕ್ರಮಕೈಗೊಂಡು ಮುಚ್ಚಿರುವ ಸುರಂಗ ಮಾರ್ಗವನ್ನು ಈ ವಾರದಲ್ಲಿ ತೆರವುಗೊಳಿಸಲೇಬೇಕು ಎಂದು ಗಣಪತಿ ಉಳ್ವೇಕರ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Exit mobile version