ಕಾರವಾರ: ನನ್ನ ನೆಲದ ಮಣ್ಣು (Soil) ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿನ ಹೆಮ್ಮೆಯ ಭಾವನೆ, ಈ ಭಾವನೆಯ ಮೂಲಕ ದೇಶದ ಪ್ರಜೆಗಳನ್ನು ಒಂದುಗೂಡಿಸಿ, ಐಕ್ಯತೆ ಮೂಡಿಸಲು ನನ್ನ ದೇಶ ನನ್ನ ಮಣ್ಣು ಅಭಿಯಾನ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಂಚೆ ಇಲಾಖೆ, ನಗರಸಭೆ, ಎನ್‌ಸಿಸಿ, ಎನ್‌ಎಸ್ಎಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನೆಹರು ಯುವ ಕೇಂದ್ರ ಕಾರವಾರ (ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ) ಇವರ ಸಹಯೋಗದಲ್ಲಿ ಶುಕ್ರವಾರ ಕಾರವಾರ ನಗರಸಭೆ ಮುಂಭಾಗದಲ್ಲಿ ನಡೆದ ನನ್ನ ದೇಶ, ನನ್ನ ಮಣ್ಣು ಮತ್ತು ಅಮೃತ ಕಳಶ ಯಾತ್ರೆಗೆ ಹಸಿರು ನಿಶಾನೆ ತೋರಿಸಿ, ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ತನ್ನ ನೆಲದ ಮಣ್ಣಿನ ಬಗ್ಗೆ ಪ್ರೀತಿ, ಅಭಿಮಾನದ ಭಾವನೆ ಸದಾ ಇರುತ್ತದೆ, ಈ ಭಾವನೆಯ ಮೂಲಕ ದೇಶದ ಜನರಲ್ಲಿ ಐಕ್ಯತೆ ಮೂಡಿಸುವ ಉದ್ದೇಶದಿಂದ ಪ್ರಧಾನ ಮಂತ್ರಿಗಳು ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕರೆ ನೀಡಿರುವ ನನ್ನ ದೇಶ, ನನ್ನ ಮಣ್ಣು ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ, ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಪವಿತ್ರ ಸ್ಥಳಗಳಿಂದ ಮಣ್ಣನ್ನು ಕಳಸಗಳಲ್ಲಿ ಸಂಗ್ರಹಿಸಲಾಗಿದ್ದು ಇದನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದ್ದು ಅಲ್ಲಿಂದ ಅದು ದೆಹಲಿಗೆ ತಲುಪಲಿದೆ ಎಂದರು.
ಇದನ್ನೂ ಓದಿ: Viral Video: ಹಗಲು-ರಾತ್ರಿ ಉಂಟಾಗುವುದು ಹೇಗೆ ಗೊತ್ತೆ? ಈ ವಿಡಿಯೊ ನೋಡಿ
ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ್ ಮಾತನಾಡಿ, ನಿರಂತರವಾಗಿ ಸುಮಾರು ಎರಡು ತಿಂಗಳಿಂದ ನನ್ನ ದೇಶ ನನ್ನ ಮಣ್ಣು ಕಾರ್ಯಕ್ರಮವನ್ನು ಗ್ರಾಮ ಮಟ್ಟದಿಂದ ಪ್ರಾರಂಭಿಸಿ ಪಂಚಾಯತ್, ಹೋಬಳಿ ಮಟ್ಟದಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ನಗರ ಸಭೆಯ ಪೌರಯುಕ್ತ ಚಂದ್ರಮೌಳಿ ಮಾತನಾಡಿ, ದೇಶದ ಐಕ್ಯತೆ ಮತ್ತು ಸಂಸ್ಕೃತಿಯನ್ನು ವಿಶ್ವಕ್ಕೆ ತೋರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರತಿ ಹಳ್ಳಿಯಿಂದ ಸಂಗ್ರಹಿಸಿದ ಮಣ್ಣು ವೀರ ಯೋಧರ ಸ್ಮರಣೆಗೆ ದೆಹಲಿಯ ಅಮೃತವಾಟಿಕಾ ಉದ್ಯಾನವನದಲ್ಲಿ ಸದ್ಬಳಕೆ ಆಗುತ್ತದೆ. ನಮ್ಮ ದೇಶಕ್ಕಾಗಿ ಹೋರಾಡಿದ ಸೈನಿಕರು ಮತ್ತು ಹೋರಾಟಗಾರರನ್ನು ಸ್ಮರಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ್ ಕಾಂದೂ, ನೆಹರು ಯುವ ಕೇಂದ್ರದ ಸಹಾಯಕ ನಿರ್ದೇಶಕ ಯಶವಂತ ಯಾದವ್, ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾ ನಾಯ್ಕ, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಮನೋಜ್ ಬಾಂದೇಕರ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Karnataka Weather : ಮಾಯವಾದ ಮಳೆ ಹನಿ; ಇನ್ನೆರಡು ದಿನ ಧಗಧಗ
ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಸಂಗ್ರಹಿದ ಮಣ್ಣನ್ನು ಅಮೃತ ಕಳಶದಲ್ಲಿ ಹಾಕಿ ಅದನ್ನು ದೆಹಲಿಗೆ ಕಳುಹಿಸಲು ಹಸ್ತಾಂತರ ಮಾಡಲಾಯಿತು.