Site icon Vistara News

Uttara Kannada News: ಕಾರವಾರ ಬಳಿ ಹೆದ್ದಾರಿ ಸುರಂಗ ಮಾರ್ಗ ಶೀಘ್ರದಲ್ಲೇ ಸಂಚಾರಕ್ಕೆ ಲಭ್ಯವಾಗುವ ಸಾಧ್ಯತೆ

National Highway tunnel near Karwar likely to resume soon

ಕಾರವಾರ: ಮಳೆಗಾಲದಲ್ಲಿ ನೀರು ಸೋರಿಕೆಯಿಂದಾಗಿ ಬಂದ್ ಆಗಿದ್ದ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ (National Highway) 66ಕ್ಕೆ ನಿರ್ಮಿಸಲಾಗಿರುವ ಹೆದ್ದಾರಿ ಸುರಂಗ ಮಾರ್ಗ (Tunnel) ಶೀಘ್ರದಲ್ಲೇ ಓಡಾಟಕ್ಕೆ ಲಭ್ಯವಾಗುವ ಲಕ್ಷಣಗಳು ಕಂಡುಬಂದಿದೆ. ಟನಲ್ ಮಾರ್ಗ ವಾಹನ ಸವಾರರಿಗೆ ಸುರಕ್ಷಿತವಾಗಿದೆ ಎನ್ನುವುದನ್ನು ಐಆರ್‌ಬಿ ಕಂಪನಿ ಮನವರಿಕೆ ಮಾಡಿದ ಬೆನ್ನಲ್ಲೇ ಟನಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ (Green Signal) ಸಿಕ್ಕಿರುವ ಸಾಧ್ಯತೆಗಳಿವೆ.

ಕಳೆದ ಎರಡು ತಿಂಗಳಿನಿಂದ ಬಂದ್ ಆಗಿರುವ ಟನಲ್ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಿಕೊಡುವಂತೆ ಸಾಕಷ್ಟು ಒತ್ತಡಗಳು ಕೇಳಿಬಂದಿದ್ದವು. ಈ ಬೆನ್ನಲ್ಲೇ ಇದೀಗ ಹೆದ್ದಾರಿ ಅಗಲೀಕರಣ ಗುತ್ತಿಗೆ ಕಂಪನಿ ಐಆರ್‌ಬಿ ಮಂಗಳವಾರ ಟನಲ್ ಎದುರು ಹಾಕಲಾಗಿದ್ದ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಿದ್ದು ಕೇವಲ ಬ್ಯಾರಿಕೇಡ್‌ಗಳನ್ನು ಮಾತ್ರ ಉಳಿಸಿರುವುದು ಯಾವುದೇ ಕ್ಷಣದಲ್ಲಿ ಹೆದ್ದಾರಿ ಟನಲ್ ಮಾರ್ಗದಲ್ಲಿ ಸಂಚಾರ ಆರಂಭವಾಗುವ ಮುನ್ಸೂಚನೆ ನೀಡಿದೆ.

ಜುಲೈ 8 ರಂದು ವಿಸ್ತಾರ ನ್ಯೂಸ್‌ನ ವೆಬ್‌ಸೈಟ್‌ನಲ್ಲಿ ಟನಲ್ ಸೋರಿಕೆಯಾಗುತ್ತಿರುವ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಸ್ಥಳೀಯ ಶಾಸಕ ಸತೀಶ ಸೈಲ್ ಟನಲ್ ಅವ್ಯವಸ್ಥೆ ಹಿನ್ನೆಲೆಯಲ್ಲಿ ಸಂಚಾರ ಬಂದ್ ಮಾಡಿ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ಸೂಚನೆ ನೀಡಿದ್ದರು. ಇದಾದ ಬಳಿಕ ತಿಂಗಳು ಕಳೆದರೂ ಟನಲ್ ಸಂಚಾರ ಆರಂಭವಾಗದ್ದರಿಂದ ಕಾರವಾರದಿಂದ ಬಿಣಗಾ ಭಾಗಕ್ಕೆ ಸುಮಾರು 4 ಕಿ.ಮೀ ಹೆಚ್ಚುವರಿಯಾಗಿ ಸುತ್ತುವರಿದು ತೆರಳುವಂತಾಗಿದ್ದು ಪ್ರತಿನಿತ್ಯ ಪ್ರಯಾಣಿಸುವ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿತ್ತು. ಅಲ್ಲದೇ ಟನಲ್ ಸುಸ್ಥಿತಿಯಲ್ಲಿದ್ದರೂ ಸಹ ಸಂಚಾರ ಆರಂಭಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ: Benefits Of Ajwain: ಅಜವಾನವೆಂಬ ಘಾಟುಮದ್ದಿನ ಬಗ್ಗೆ ನಿಮಗೆ ಗೊತ್ತಿದೆಯೆ?

ಈಗಾಗಲೇ ಪುಣೆಯ ಟೆಕ್ನಾಲಜಿ ಯುನಿವರ್ಸಿಟಿ ಟನಲ್‌ನ್ನು ಪರಿಶೀಲಿಸಿ ಸುರಂಗ ಮಾರ್ಗ ಸುರಕ್ಷಿತವಾಗಿದೆ ಎಂದು ವರದಿ ಸಲ್ಲಿಸಿದೆ ಎನ್ನಲಾಗಿದ್ದು ಆದರೂ ಸಂಚಾರ ಆರಂಭಿಸದಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ವಾರದೊಳಗಾಗಿ ಟನಲ್ ಸಂಚಾರ ಆರಂಭಿಸದಿದ್ದಲ್ಲಿ ಸೆ.29 ರಂದು ಒತ್ತಾಯಪೂರ್ವಕವಾಗಿ ಟನಲ್‌ನ್ನು ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಜಿಲ್ಲಾಡಳಿತಕ್ಕೆ ಟನಲ್‌ನ ಫಿಟ್ನೆಸ್ ಕುರಿತ ವರದಿ ತಲುಪಿದೆ ಎನ್ನಲಾಗಿದ್ದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸುರಂಗ ಮಾರ್ಗ ತೆರೆಯಲು ಜಿಲ್ಲಾಡಳಿತಕ್ಕೆ ಸೂಚನೆ‌ ನೀಡಿದ್ದಾರೆ ಎನ್ನಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಸಹ ಟನಲ್ ಸುರಕ್ಷಿತವಾಗಿದೆ ಎನ್ನುವ ಭರವಸೆಯನ್ನು ಐಆರ್‌ಬಿ ಕಂಪನಿ ನೀಡಿದಲ್ಲಿ, ಜಿಲ್ಲಾಡಳಿತದ ಅನುಮತಿ ಪಡೆದು ಸುರಂಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಿ ಎಂದು ತಿಳಿಸಿದ್ದಾರೆ. ಫಿಟ್ನೆಸ್ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿಗಳಿಗೇ ಸಲ್ಲಿಕೆ ಮಾಡಿದರೂ ಸಹ ಯಾವುದೇ ಆಕ್ಷೇಪ ಇಲ್ಲವಾಗಿದ್ದು, ಜನರ ಜೀವದ ಸುರಕ್ಷತೆ ಕುರಿತು ಭರವಸೆ ನೀಡಿದಲ್ಲಿ ಸಂಚಾರ ಆರಂಭಿಸಬಹುದು ಎಂದು ಜನತಾದರ್ಶನದ ವೇಳೆ ಮಾಧ್ಯಮಗಳಿಗೆ ತಿಳಿಸಿದ್ದರು.

ಇದನ್ನೂ ಓದಿ: Namma Metro : ಮೆಟ್ರೋಗೆ ಚೀನಾದಿಂದ ಬರಲಿದೆ 12 ಬೋಗಿ; 2024ಕ್ಕೆ ಚಾಲಕ ರಹಿತ ಓಡಾಟ

ಈ ನಿಟ್ಟಿನಲ್ಲಿ ಟನಲ್‌ನ ಸಂಚಾರ ಆರಂಭಿಸಲು ಸಿದ್ಧತೆ ಮಾಡಿಕೊಂಡಿರುವ ಐಆರ್‌ಬಿ ಇದೀಗ ಜೆಸಿಬಿ ಮೂಲಕ ಎರಡೂ ಟನಲ್‌ಗಳ ಎದುರು ಹಾಕಿದ್ದ ಜೆಲ್ಲಿ ಕಲ್ಲುಗಳನ್ನು ತೆರವುಗೊಳಿಸಿ ರಸ್ತೆಯನ್ನು ಸ್ವಚ್ಛಗೊಳಿಸಿದೆ. ಸದ್ಯ ಬ್ಯಾರಿಕೇಡ್‌ಗಳನ್ನು ಮಾತ್ರ ಟನಲ್ ಎದುರು ಇರಿಸಿದ್ದು ಯಾವುದೇ ಕ್ಷಣದಲ್ಲಿ ಹೆದ್ದಾರಿ ಸುರಂಗ ಮಾರ್ಗ ಸಂಚಾರಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ.

Exit mobile version