Site icon Vistara News

Uttara Kannada News: ಕಾರವಾರದ ಎನ್.ಕೆ. ಬೈಲು ಸಂತ್ರಸ್ತರಿಗೆ ತಕ್ಷಣ ಪರಿಹಾರಕ್ಕೆ ಸೂಚನೆ

NK Bailu victims to get relief soon says Incharge secretary Ritesh Kumar Singh

ಕಾರವಾರ: ಸೀ ಬರ್ಡ್ ನೌಕಾನೆಲೆ ಉದ್ದೇಶಕ್ಕಾಗಿ ಎನ್.ಕೆ. ಬೈಲು(ನೆಲ್ಲೂರು ಕಂಚಿನಬೈಲು)ನಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿರುವ 58.11 ಎಕರೆಗೆ ಸಂಬಂಧಿಸಿದಂತೆ, ಸಂತ್ರಸ್ತರಿಗೆ ಇದುವರೆಗೆ ಪರಿಹಾರ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಈ ಎಲ್ಲಾ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ದೊರಕಿಸಲು ತಾವೇ ದೆಹಲಿಯ ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ (Uttara Kannada News) ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ, ಸೀಬರ್ಡ್ ಯೋಜನೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎನ್.ಕೆ. ಬೈಲುನಲ್ಲಿ ಸೀ ಬರ್ಡ್ ನೌಕಾನೆಲೆ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ 58.11 ಎಕರೆಗೆ ಸಂಬಂಧಿಸಿದಂತೆ, ಈ ಭೂಮಿಯ ಸಂತ್ರಸ್ತರಿಗೆ ಇದುವರೆಗೂ ಪರಿಹಾರ ದೊರೆತಿಲ್ಲ. ಅಲ್ಲದೇ ಈ ಭೂಮಿಯಲ್ಲಿ ಯಾವುದೇ ಕೃಷಿ ಚಟುವಟಿಕೆ ಮಾಡಲು ಸಹ ಅನುಮತಿ ನೀಡುತ್ತಿಲ್ಲ. ಈ ಭೂಮಿಗೆ ಈಗಾಗಲೇ 18 ಕೋಟಿ 91 ಲಕ್ಷ ರೂ.ಗಳ ಪರಿಹಾರದ ಮೊತ್ತವನ್ನು ಬಿಡುಗಡೆಗೊಳಿಸುವಂತೆ ಬೆಂಗಳೂರಿನ ಡಿಫೆನ್ಸ್ ಎಸ್ಟೇಟ್ ಅಧಿಕಾರಿಗಳೊಂದಿಗೆ ಹಲವು ಪತ್ರ ಬರೆದರೂ ಸಹ ಯಾವುದೇ ಪ್ರಗತಿಯಾಗಿಲ್ಲ ಎಂದರು.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

ಈ ವಿಷಯದ ಕುರಿತಂತೆ ಬೆಂಗಳೂರಿನಲ್ಲಿರುವ ಡಿಫೆನ್ಸ್ ಎಸ್ಟೇಟ್ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಈ ಕುರಿತಂತೆ ಪ್ರಸ್ತಾವನೆಯು ದೆಹಲಿಯ ರಕ್ಷಣಾ ಸಚಿವಾಲದಯಲ್ಲಿ ಬಾಕಿ ಇರುವ ಬಗ್ಗೆ ತಿಳಿದು, ರಕ್ಷಣಾ ಇಲಾಖೆಯೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳನ್ನು ಪ್ರತಿಯನ್ನು ತಮಗೆ ನೀಡುವಂತೆ ಹಾಗೂ ಈ ಪ್ರಕರಣದ ಬಗ್ಗೆ ತಾವೇ ಖುದ್ದು ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲಿ ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ನೌಕಾನೆಲೆಯ ಕಾರಣದಿಂದ ಭೂಮಿ ಕಳೆದುಕೊಂಡಿರುವ 158 ಕುಟುಂಬಗಳಲ್ಲಿ ವಿವಿಧ ಕಾರಣಗಳಿಂದ ಇದುವರೆಗೆ ಪರಿಹಾರ ದೊರೆಯದ ಕುಟುಂಬಗಳಿಗೆ ಸಂಬಂದಿಸಿದಂತೆ 1 ತಿಂಗಳ ಒಳಗೆ ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ, ಪರಿಹರ ದೊರೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಮುದಗಾದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಅಣೆಕಟ್ಟುನಿಂದಾಗಿ ಮಳೆಗಾಲದಲ್ಲಿ ನೌಕಾನೆಲೆಯೊಳಗೆ ನೀರು ನುಗ್ಗುತ್ತಿರುವ ಬಗ್ಗೆ ರಕ್ಷಣಾ ಇಲಾಖೆಯಿಂದ ಬರುತ್ತಿರುವ ದೂರುಗಳ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕೋಸ್ಟಲ್‌ ಗಾರ್ಡ್ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಿಗೆ ವಾಹನಗಳ ಸಂಚಾರಕ್ಕೆ ರಸ್ತೆ ಸಂಪರ್ಕದ ಸಮಸ್ಯೆಯಿರುವ ಬಗ್ಗೆ ನಡೆದ ಚರ್ಚೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಬ್ಲಾಕ್ ಸ್ಟಾಟ್‌ಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅಪಘಾತಗಳನ್ನು ನಿಯಂತ್ರಿಸುವಂತೆ ಮತ್ತು ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುವಂತೆ ಐ.ಆರ್.ಬಿ. ಎಂಜಿನಿಯರ್‌ಗಳಿಗೆ ಸೂಚಿಸಿದರು.

ಇದನ್ನೂ ಓದಿ: Airtel Price Hike: ಜಿಯೋ ನಂತರ ಏರ್‌ಟೆಲ್‌ ಡೇಟಾ ಬಳಕೆದಾರರ ಜೇಬಿಗೂ ಕತ್ತರಿ; 21% ದರ ಏರಿಕೆ

ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಉಪ ವಿಭಾಗಾಧಿಕಾರಿಗಳಾದ ಕನಿಷ್ಠ. ಕಲ್ಯಾಣಿ ಕಾಂಬ್ಳೆ, ನೌಕಾದಳ ಮತ್ತು ಕೋಸ್ಟ್ ಗಾರ್ಡ್‌ನ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Exit mobile version