ಕಾರವಾರ: ಉತ್ತರ ಕನ್ನಡ ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿದಿನ ಸಂಗ್ರಹವಾಗುವ ಘನ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ನಗರಪ್ರದೇಶಗಳಲ್ಲಿ ನೈರ್ಮಲ್ಯ ಮತ್ತು ಸಾರ್ವಜನಿರ ಆರೋಗ್ಯ ಕಾಪಾಡುವ ಉದ್ದೇಶದಿಂದ ಜಿಲ್ಲೆಯ (Uttara Kannada News) ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1368.81 ಲಕ್ಷ ರೂ ಗಳ ವೆಚ್ಚದಲ್ಲಿ 12 ಎಂ.ಆರ್.ಎಫ್. (Materials Recovery Facility ) ಕೇಂದ್ರಗಳನ್ನು ಆರಂಭಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಪ್ರಸ್ತುತ ಜಿಲ್ಲೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಾದ, ಕಾರವಾರದಲ್ಲಿನ 31 ವಾರ್ಡ್, ದಾಂಡೇಲಿಯ 31, ಶಿರಸಿಯ 31, ಭಟ್ಕಳದ 23, ಕುಮಟಾದ 23, ಅಂಕೋಲದ 23, ಹಳಿಯಾಳದ 23, ಹೊನ್ನಾವರದ 20, ಸಿದ್ದಾಪುರದ 15, ಯಲ್ಲಾಪುರದ 19, ಮುಂಡಗೋಡ 19 ಮತ್ತು ಜಾಲಿಯ 20 ಸೇರಿದಂತೆ ಒಟ್ಟು 298 ವಾರ್ಡ್‌ಗಳಿಂದ ಪ್ರತಿ ದಿನ 125.6 ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ 43.96 ಟನ್ ಘನ ತ್ಯಾಜ್ಯವನ್ನು ಸಂಗ್ರಹವಾಗಿದೆ. ಈ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ, ಪರಿಸರದಲ್ಲಿ ನೈರ್ಮಲ್ಯ ಕಾಪಾಡುವುದು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ.
ಇದನ್ನೂ ಓದಿ: Samsung Galaxy: ಸ್ಯಾಮ್‌ಸಂಗ್‌ನಿಂದ 2 ಹೊಸ ಫೋಲ್ಡೆಬಲ್ ಫೋನ್ ಬಿಡುಗಡೆ; ವಿಶೇಷತೆ ಏನೇನು?
ಈ ಸಮಸ್ಯೆಗೆ ಎಂ.ಆರ್.ಎಫ್ ಕೇಂದ್ರಗಳ ಸ್ಥಾಪನೆಯಿಂದ ಸೂಕ್ತ ಪರಿಹಾರ ದೊರೆಯಲಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಸಂಗ್ರಹಿಸಲಾದ ಒಣ ತ್ಯಾಜ್ಯವನ್ನು ಈ ಎಂ.ಆರ್.ಎಫ್ ಕೇಂದ್ರದಲ್ಲಿ ತೂಕ ಮಾಡಿ ಶೇಖರಣಾ ವಿಭಾಗದಲ್ಲಿ ಶೇಖರಿಸಲಾಗುತ್ತದೆ. ನಂತರ ಈ ತ್ಯಾಜ್ಯವನ್ನು ಕನ್ವೆಯರ್ ಬೆಲ್ಟ್ ಸಹಾಯದಿಂದ ಹಲವು ವಿಭಾಗವಾಗಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡಿಸಿದ ತ್ಯಾಜ್ಯವನ್ನು ಬೈಲಿಂಗ್ ಯಂತ್ರದ ಸಹಾಯದಿಂದ ಬೈಲ್ ಮಾಡಿ, ಬೈಲ್ ಮಾಡಿದ ತ್ಯಾಜ್ಯದಲ್ಲಿ ಪುನರ್ ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅಧಿಕೃತ ರಿಸೈಕಲಿಂಗ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಪುನರ್‌ಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯವನ್ನು ಕೋ ಪ್ರೋಸೆಸಿಂಗ್ ಉದ್ದೇಶಕ್ಕೆ ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಿಸುವ ಮೂಲಕ ಅತ್ಯಂತ ವೈಜ್ಞಾನಿಕವಾಗಿ ಘನತ್ಯಾಜ್ಯದ ವಿಲೇವಾರಿ ಸಾಧ್ಯವಾಗಲಿದೆ.
ಪ್ರಸ್ತುತ ಘನ ತ್ಯಾಜ್ಯ ವಿಲೇವಾರಿಗೆ ಅಳವಡಿಸಿಕೊಂಡಿರುವ ವಿಧಾನದಿಂದ ಶೇ.5 ರಿಂದ 10 ಘನತ್ಯಾಜ್ಯವನ್ನು ಮಾತ್ರ ಸ್ಥಳೀಯ ಸ್ಕ್ರ್ಯಾಪ್ ವ್ಯಾಪಾರಿಗಳಿಗೆ ನೀಡಲಾಗುತ್ತಿದ್ದು, ಉಳಿದ ಶೇಕಡಾವಾರು ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಪ್ರಮುಖ ಸಮಸ್ಯೆಯಾಗಿದೆ. ಆದರೆ ಎಂ.ಆರ್.ಎಫ್ ಕೇಂದ್ರಗಳಲ್ಲಿ ಅಳವಡಿಕೊಳ್ಳಲಾಗುವ ಅತ್ಯಂತ ವೈಜ್ಞಾನಿಕ ವಿಧಾನಗಳಿಂದ ಶೇ.70 ರಿಂದ 80 ರಷ್ಟು ಘನ ತ್ಯಾಜ್ಯವನ್ನು ಈಗಾಗಲೇ ನೋಂದಣಿಯಾಗಿರುವ ಮಾರಾಟಗಾರರಿಗೆ ಸ್ಪರ್ಧಾತ್ಮಕ ದರದಲ್ಲಿ ನೇರವಾಗಿ ಮಾರಾಟ ಮಾಡಬಹುದಾಗಿದೆ. ಅಲ್ಲದೇ ಪರಿಸರಕ್ಕೆ ಅತ್ಯಂತ ಮಾರಕವಾಗಿರುವ ಪ್ಲಾಸ್ಟಿಕ್ ಸಮಸ್ಯೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ಮೂಲನೆ ಮಾಡುವುದರೊಂದಿಗೆ, ಇಲ್ಲಿನ ಆದಾಯವು ನಗರ ಸ್ಥಳೀಯ ಸಂಸ್ಥೆಗಳಿಗೆ ಲಾಭದಾಯಕ ಆದಾಯದ ಪ್ರಮುಖ ಮೂಲ ಚಟುವಟಿಕೆಯಾಗಲಿದೆ.
ಎಂ.ಆರ್.ಎಫ್ ಕೇಂದ್ರಗಳ ಆರಂಭದಿಂದಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಡಿಮೆ ಮಾನವ ಸಂಪನ್ಮೂಲದ ಬಳಕೆಯಿಂದ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣಾ ಸೇವೆ ಒದಗಿಸುವುದರ ಜತೆಗೆ, ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ದಕ್ಷತೆಯಿಂದ ಜಾರಿಗೊಳಿಸಲು ಅನುಕೂಲವಾಗಲಿದೆ. ಅಲ್ಲದೇ ತ್ಯಾಜ್ಯದಿಂದ ಅತೀ ಹೆಚ್ಚಿನ ಸಂಪನ್ಮೂಲವನ್ನು ಪಡೆಯಲು ಮತ್ತು ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ತಡೆಗಟ್ಟಿ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಾಗಲಿದೆ.
ಇದನ್ನೂ ಓದಿ: Bengaluru News: ಭವಿಷ್ಯಕ್ಕೆ ಬೇಕಾಗಿರುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಎನ್‌ಎಸ್‌ಡಿಸಿ, ವಿಟಿಯು ನಡುವೆ ಸಹಭಾಗಿತ್ವ
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೀವ್ರ ಸಮಸ್ಯೆಯಾಗಿರುವ ಘನ ತ್ಯಾಜ್ಯ ವಿಲೇವಾರಿಯ ಸಮಸ್ಯೆಗೆ ಎಂ.ಆರ್.ಎಫ್ ಕೇಂದ್ರಗಳ ಆರಂಭದಿಂದ ಸೂಕ್ತ ಪರಿಹಾರ ದೊರೆಯಲಿದೆ. ಈ ಕೇಂದ್ರಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳಲಾಗುತ್ತದೆ. ಅತ್ಯಂತ ಪರಿಸರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಈ ಕೇಂದ್ರಗಳ ಸ್ಥಾಪನೆಯಿಂದ ತ್ಯಾಜ್ಯ ವಿಲೇವಾರಿಯ ಜತೆಗೆ ಆದಾಯ ವೃದ್ಧಿ ಮತ್ತು ಸ್ಥಳೀಯರಿಗೆ ಈ ಕೇಂದ್ರದಲ್ಲಿ ಉದ್ಯೋಗವಕಾಶ ಕೂಡಾ ದೊರೆಯಲಿದೆ. ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯಲ್ಲಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ದೊರೆತಿದೆ ಎಂದು ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಸ್ಟೆಲ್ಲಾ ವರ್ಗಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.