ಕಾರವಾರ: ಶಿಕ್ಷಕರು ಮಕ್ಕಳ ಅಂಕ ಗಳಿಕೆಗೆ ಮಾತ್ರವಲ್ಲದೇ ಅವರ ಸಂವಹನ ಕೌಶಲ್ಯ (Communication skills), ಭಾಷಾ ಪ್ರಾವೀಣ್ಯತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ (Uttara Kannada News) ಹೇಳಿದರು.
ಮಂಗಳವಾರ ಕುಮಟಾ ಪ್ರವಾಸ ಕೈಗೊಂಡಿದ್ದ ಅವರು ಪಟ್ಟಣದಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ವೃತ್ತಿ ಬದುಕಿನಲ್ಲಿ ಹೇಗೆ ವರ್ತಿಸಬೇಕು, ಸಮಾಜದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಕಲಿಕಾ ಹಂತದಲ್ಲಿಯೇ ತಿಳಿಸಿಕೊಡಬೇಕು. ಕೇವಲ 100 ಪ್ರತಿಶತ ಅಂಕ ಗಳಿಕೆ ಮಾತ್ರವಲ್ಲದೇ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಪೂರ್ವದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಡಾ.ಎ.ವಿ. ಬಾಳಿಗಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿರುವ ಭದ್ರತಾ ಕೊಠಡಿಗೆ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ, ಕೀ ಮ್ಯಾಪ್ ವೀಕ್ಷಿಸಿ, ಅಧಿಕಾರಿಗಳಿಗೆ ಅಗತ್ಯ ಬದಲಾವಣೆಗಳನ್ನು ಸೂಚಿಸಿದರು.
ಇದನ್ನೂ ಓದಿ: Karnataka Weather : ಇನ್ನೆರಡು ದಿನ ಬಿಸಿಲು ರಣ ರಣ; ಜನ ಹೈರಾಣ!
ಬಳಿಕ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಗೆ ಭೇಟಿ ನೀಡಿ, ಪರಿಶೀಲಿಸಿದರು. ಇದೇ ವೇಳೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿ, ಸ್ವಯಂ ಉದ್ಯೋಗ ಕಂಡುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.
ನಂತರ ಮೆಟ್ರಿಕ್ ನಂತರದ ಬಾಲಕರ ವಸತಿ ಶಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಮಾತನಾಡಿ, ಕುಂದುಕೊರತೆಗಳನ್ನು ಆಲಿಸಿದರು. ಆಹಾರ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.
ಇದನ್ನೂ ಓದಿ: ಆನ್‌ಲೈನ್ ಷೇರ್ ಟ್ರೇಡಿಂಗ್ ವಂಚನೆ: 1.92 ಕೋಟಿ ರೂ. ಮೋಸ ಹೋದ ಮಹಿಳೆ! ಸುರಕ್ಷಿತ ಹೂಡಿಕೆ ಹೇಗೆ?
ಈ ಸಂದರ್ಭದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ (ಅಭಿವೃದ್ಧಿ) ನಾರಾಯಣ ಜಿ ನಾಯಕ, ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಎಲ್.ಭಟ್, ಡಯಟ್ ಉಪನಿರ್ದೇಶಕಿ (ಆಡಳಿತ) ಲತಾ ನಾಯಕ, ತಾ.ಪಂ. ಸಹಾಯಕ ನಿರ್ದೇಶಕರು ಸೇರಿದಂತೆ ಇನ್ನಿತರೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.