ಯಲ್ಲಾಪುರ: ತಾಲೂಕಿನ ಕೋಳಿಕೇರಿ ಗ್ರಾಮದಲ್ಲಿ ಮಂಗಳವಾರ ಬಸ್ ನಿಲುಗಡೆಗೆ ಆಗ್ರಹಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ, ಪ್ರತಿಭಟನೆ (Protest) ನಡೆಸಿದರು.
ಕೋಳಿಕೇರಿ ಸುತ್ತಮುತ್ತ 7-8 ಗ್ರಾಮಗಳಿದ್ದು, ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, 250ಕ್ಕೂ ಹೆಚ್ಚು ಜನ ಕೆಲಸ ಕಾರ್ಯಗಳಿಗಾಗಿ ಯಲ್ಲಾಪುರ ಹಾಗೂ ಹುಬ್ಬಳ್ಳಿ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ. ಕೋಳಿಕೇರಿ ಗ್ರಾಮದಲ್ಲಿ ಬಸ್ ನಿಲ್ಲಿಸುವ ಅವಕಾಶ ಇದ್ದಾಗಲೂ ಕೂಡ ಬಸ್ಸುಗಳು ನಿಲ್ಲುತ್ತಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಬಸ್ಸುಗಳನ್ನು ನಿಲ್ಲಿಸುವಂತೆ ಗ್ರಾಮಸ್ಥರು ಹಲವಾರು ಬಾರಿ ಮನವಿಗಳನ್ನು ನೀಡಿದ ನಂತರವೂ ಕೂಡ ಯಾವುದೇ ಬಸ್ಸುಗಳು ನಿಲ್ಲಿಸದೆ ಇರುವ ಹಿನ್ನಲೆಯಲ್ಲಿ ಮಂಗಳವಾರ ಹೆದ್ದಾರಿಯಲ್ಲಿ ಸಂಚರಿಸುವ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಕೋಳಿಕೇರಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಸುಮಾರು ಎಂಟಕ್ಕೂ ಹೆಚ್ಚು ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿದ ಹಿನ್ನಲೆಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಯಿತು.
ಇದನ್ನೂ ಓದಿ: Operation Tiger : ಮಹಿಳೆ ಸಹಿತ ಇಬ್ಬರ ಬಲಿ ಪಡೆದ ನರಹಂತಕ ಹುಲಿ ಕೊನೆಗೂ ಸೆರೆ; ಹೇಗಿತ್ತು ಆಪರೇಷನ್?
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿಪಿಐ ರಂಗನಾಥ ನೀಲಮ್ಮನವರ್, ಪ್ರತಿಭಟನಾಕಾರರು ಹಾಗೂ ಕೆಎಸ್‌ಆರ್ಟಿಸಿ ಅಧಿಕಾರಿಗಳ ಮಧ್ಯೆ ಮಾತುಕತೆ ನಡೆಸಿ, ಕೋಳಿಕೇರಿಯಲ್ಲಿ ನಿಲ್ಲಲು ಅವಕಾಶ ಇರುವ ಬಸ್ಸುಗಳನ್ನು ನಿಲ್ಲಿಸಬೇಕು. ಇಂದಿನಿಂದ ಕೆಲವು ದಿನದ ಮಟ್ಟಿಗೆ ಕೆಎಸ್‌ಆರ್ಟಿಸಿಗೆ ಸಂಬಂಧಪಟ್ಟ ಸಿಬ್ಬಂದಿ ಅಥವಾ ಅಧಿಕಾರಿಯನ್ನು ಕೋಳಿಕೇರಿಯಲ್ಲಿ ನಿಯೋಜಿಸಿ ಯಾವ ಬಸ್ಸುಗಳನ್ನು ನಿಲ್ಲಿಸುವುದಿಲ್ಲ ಅಂತಹ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೆ ಪ್ರತಿಭಟನಾಕಾರರ ಮನವೊಲಿಸಿ, ಬೇರೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್‌ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು. ಪೊಲೀಸ್ ನಿರೀಕ್ಷಕರ ವಿನಂತಿಯ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಪಂ ಉಪಾಧ್ಯಕ್ಷ ನಾಗೇಶ ಗಾವಡೆ ಮಾತನಾಡಿ, ಸ್ಥಳೀಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ಸುಗಳನ್ನು ಕೋಳಿಕೇರಿಯಲ್ಲಿ ನಿಲ್ಲಿಸಬೇಕು. ಮುಂದೆ ಮತ್ತೆ ಯಥಾ ಸ್ಥಿತಿ ಮುಂದುವರೆದರೆ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಇದನ್ನೂ ಓದಿ:Congress Karnataka : ನಿಗಮ-ಮಂಡಳಿ ಲಿಸ್ಟ್ ಡೆಲ್ಲಿಗೆ ರವಾನೆ; ಶಾಸಕರಿಗೆ ಮಾತ್ರ ಅವಕಾಶವೆಂದ ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಕಣ್ಣಿಗೇರಿ ಗ್ರಾ.ಪಂ ಸದಸ್ಯೆ ಲಕ್ಷ್ಮೀ ವಸಂತ ಪಾಟೀಲ, ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಗೌರವಾಧ್ಯಕ್ಷ ಜಾನ್ ಬಿಳಕೀಕರ, ಕೋಳಿಕೇರಿ ಸ.ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘು ಅಣ್ಣಪ್ಪ ಮರಾಠಿ, ಬಿ.ಜೆ.ಪಿ. ಕೋಳಿಕೇರಿ ಬೂತ್ ಅಧ್ಯಕ್ಷ ನಾಗರಾಜ ಮಾರುತಿ ಪಾಟೀಲ್, ಉನ್ನತಿ ಗೌಳಿ ಕ್ರೆಡಿಟ್ ಕೋ.ಆಪ್ ಅಧ್ಯಕ್ಷ ಮಾಕೂ ಕೋಕರೆ, ತಾಪಂ ಮಾಜಿ ಅಧ್ಯಕ್ಷ ರವಿ ಕೈಟ್ಕರ್, ಗ್ರಾಪಂ ಸದಸ್ಯ ವಾಸುದೇವ್ ಮಪ್ಸೇಕರ್, ಕಾಂಗ್ರೆಸ್ ಮುಖಂಡ ಲಾರೆನ್ಸ್ ಸಿದ್ದಿ, ಸೇರಿದಂತೆ 100 ಕ್ಕೂ ಹೆಚ್ಚು ಗ್ರಾಮಸ್ಥರು ಇದ್ದರು.