Site icon Vistara News

Uttara Kannada News: ಕರ್ತವ್ಯದಲ್ಲಿ ಲೋಪ, ದುರ್ನಡತೆ ಕಂಡು ಬಂದಲ್ಲಿ ಕಠಿಣ ಕ್ರಮ: ನ್ಯಾ. ಕೆ.ಎನ್.ಫಣೀಂದ್ರ

Public Grievance Receipt by upa Lokayukta Justice KN Phanindra

ಕಾರವಾರ: ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಕೆಲಸಗಳಲ್ಲಿ ಕರ್ತವ್ಯ ಲೋಪ ಮತ್ತು ದುರ್ನಡತೆ ತೋರಿದಲ್ಲಿ ಅಂಥವರ ವಿರುದ್ಧ ಲೋಕಾಯಕ್ತ (Lokayukta) ಸಂಸ್ಥೆಯು ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಎಚ್ಚರಿಕೆ (Uttara Kannada News) ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶನಿವಾರ ನಡೆದ, ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸರ್ಕಾರಿ ಕಚೇರಿಗಳಿಗೆ ಸಲ್ಲಿಸಿದಾಗ ಅವುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು, ತಮ್ಮ ಕಚೇರಿ ವ್ಯಾಪ್ತಿಗೆ ಒಳಪಡದ ಅರ್ಜಿಯಾಗಿದ್ದಲ್ಲಿ ಅದನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಿ ಈ ಬಗ್ಗೆ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಬೇಕು. ಕಾನೂನು ವ್ಯಾಪ್ತಿಯಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಇದನ್ನೂ ಓದಿ: Karnataka Weather : ಬೇಸಿಗೆ ಆರಂಭದಲ್ಲೇ 40ರ ಗಡಿದಾಟಲಿದ್ಯಾ ಗರಿಷ್ಠ ತಾಪಮಾನ!

ಸರ್ಕಾರಿ ನೌಕರರು ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುವುದು, ಸ್ವಜನ ಪಕ್ಷಪಾತ, ದುರ್ನಡತೆ, ಅಶಿಸ್ತು, ಕಳಪೆ ಕಾಮಗಾರಿಗಳು ಮತ್ತು ದುರುದ್ದೇಶ ಪೀಡಿತ ಕರ್ತವ್ಯ ಲೋಪದಲ್ಲಿ ತೊಡಗಿದ್ದಲ್ಲಿ ಅಂತಹವರ ವಿರುದ್ದ ಲೋಕಾಯುಕ್ತ ಕಾಯ್ದೆಯಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರು ಸರ್ಕಾರಿ ನೌಕರರ ವಿರುದ್ಧ ದೂರುಗಳನ್ನು ಸೂಕ್ತ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕು. ಲೋಕಾಯುಕ್ತ ವ್ಯಾಪ್ತಿಗೆ ಒಳಪಡುವ ದೂರುಗಳನ್ನು ಮಾತ್ರ ಲೋಕಾಯುಕ್ತ ಸಂಸ್ಥೆ ವಿಚಾರಣೆ ನಡೆಸಲಿದ್ದು, ಖಾಸಗಿ ದೂರುಗಳು ಮತ್ತು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ದೂರುಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತ ಸಂಸ್ಥೆಗಿಲ್ಲ. ಪ್ರಾಮಾಣಿಕ ಅಧಿಕಾರಿಗಳ ವಿರುದ್ದ ಸುಳ್ಳು ದೂರು ಸಲ್ಲಿಸುವವರ ವಿರುದ್ಧವೂ ಕ್ರಮ ಕೈಗೊಳ್ಳುವ ಅಧಿಕಾರ ಸಂಸ್ಥೆಗಿದೆ ಎಂದರು.

ಇದನ್ನೂ ಓದಿ: Lewis Hamilton: ಕನ್ನಡ ಮಾತನಾಡಿ ಕನ್ನಡಿಗರ ಮನಗೆದ್ದ ಫಾರ್ಮುಲಾ-1 ಲೋಕದ ಸಾಮ್ರಾಟ ಲೂಯಿಸ್‌ ಹ್ಯಾಮಿಲ್ಟನ್‌

ತಾವು ಉಪ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸುತ್ತಿದ್ದು, ಲೋಕಾಯುಕ್ತ ಸಂಸ್ಥೆಯ ಕಾರ್ಯವ್ಯಾಪ್ತಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯು 13ನೇ ಜಿಲ್ಲಾ ಭೇಟಿ ಆಗಿದ್ದು, ಈ ವರೆಗೆ ಭೇಟಿ ನೀಡಿರುವ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಭೇಟಿಯ ನಂತರ ನೌಕರರ ಕಾರ್ಯ ವಿಧಾನಗಳಲ್ಲಿ ಹಲವು ಸುಧಾರಣಾ ಕ್ರಮಗಳು ಆಗಿವೆ. ಸಾರ್ವಜನಿಕರು ಸಲ್ಲಿಸಿರುವ ಅಹವಾಲುಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಪರಿಹಾರ ಒದಗಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಲೋಕಾಯುಕ್ತ ಉಪ ನಿಬಂಧಕರಾದ ರಾಜಶೇಖರ್, ಚನ್ನಕೇಶವ ರೆಡ್ಡಿ, ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರೇಣುಕಾ ರಾಯ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್ ಸ್ವಾಗತಿಸಿದರು.

ಇದನ್ನೂ ಓದಿ: IPL 2024: ಐಪಿಎಲ್​ ಆರಂಭಕ್ಕೂ ಮುನ್ನವೇ ಹೈದರಾಬಾದ್​ಗೆ​ ಆತಂಕ; ಬೌಲಿಂಗ್​ ಕೋಚ್ ಅಲಭ್ಯ!​

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

Exit mobile version