ಕಾರವಾರ: ಸಕಾಲ ಯೋಜನೆ (Sakala Yojan) ಅಡಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಗದಿಪಡಿಸಿದ ಅವಧಿಗೂ ಮುಂಚೆಯೇ ತ್ವರಿತವಾಗಿ ಇತ್ಯರ್ಥಪಡಿಸಿ, ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಉತ್ತರ ಕನ್ನಡ ಜಿಲ್ಲೆ (Uttara Kannada News) ಇಡೀ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ಜನವರಿ 2024 ರ ತಿಂಗಳಲ್ಲಿ ಸಕಾಲ ಯೋಜನೆಯಡಿಯಲ್ಲಿ ಸ್ವೀಕರಿಸಿದ ಒಟ್ಟು 58,318 ಅರ್ಜಿಗಳನ್ನು, ವಿಲೇವಾರಿಗೆ ನಿಗದಿಪಡಿಸಿದ್ದ ಕಾಲಮಿತಿಗೂ ಮುಂಚಿತವಾಗಿ ಅರ್ಜಿಗಳನ್ನು ಯಶಸ್ವಿಯಾಗಿ ಕ್ಷಿಪ್ರಗತಿಯಲ್ಲಿ ವಿಲೇವಾರಿ ಮಾಡಲಾಗಿದೆ. ಜನವರಿಯಲ್ಲಿ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ 3879, ಭಟ್ಕಳ 3873, ದಾಂಡೇಲಿ 2426, ಹಳಿಯಾಳ 3472, ಹೊನ್ನಾವರ 8108, ಕಾರವಾರ 9152, ಕುಮಟಾ 4626, ಮುಂಡಗೋಡು 4545, ಸಿದ್ದಾಪುರ 4114, ಶಿರಸಿ 8216, ಜೋಯಿಡಾ 1347 ಹಾಗೂ ಯಲ್ಲಾಪುರದಲ್ಲಿ 4560 ಸಕಾಲ ಯೋಜನೆಯಡಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಇದನ್ನೂ ಓದಿ: Hampi Utsav 2024: ಹಂಪಿ ಉತ್ಸವ; ಗಮನ ಸೆಳೆದ ಸಾವಯವ, ಸಿರಿಧಾನ್ಯಗಳ ವಸ್ತು ಪ್ರದರ್ಶನ
ಜಿಲ್ಲೆಯ ತಾಲೂಕುಗಳ ನಡುವಿನ ಸಕಾಲ ಅರ್ಜಿಗಳ ರ‍್ಯಾಕಿಂಗ್‌ನಲ್ಲಿ ಮುಂಡಗೋಡು ಪ್ರಥಮ, ಸಿದ್ದಾಪುರ ದ್ವಿತೀಯ, ಹೊನ್ನಾವರ ತೃತೀಯ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಹಳಿಯಾಳ, ಯಲ್ಲಾಪುರ, ಕುಮಟಾ, ದಾಂಡೇಲಿ, ಅಂಕೋಲಾ, ಕಾರವಾರ, ಜೋಯಿಡಾ, ಶಿರಸಿ ಮತ್ತು ಭಟ್ಕಳ ತಾಲೂಕುಗಳಿದ್ದು, ಎಲ್ಲಾ ತಾಲೂಕುಗಳಲ್ಲಿ ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ.
ಸಾರ್ವಜನಿಕರು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ತಮಗೆ ಅಗತ್ಯವಿರುವ ಸೇವೆಗಳನ್ನು ಪಡೆಯಲು ಸಲ್ಲಿಸುವ ಎಲ್ಲಾ ಅರ್ಜಿಗಳನ್ನು ಸಕಾಲ ಯೋಜನೆಯ ವ್ಯಾಪ್ತಿಯೊಳಗೆ ತೆಗೆದುಕೊಳ್ಳುತ್ತಿದ್ದು, ಸಾರ್ವಜನಿಕರು ನೇರವಾಗಿ ಸಲ್ಲಿಸುವ ಅರ್ಜಿಗಳನ್ನೂ ಸಹ ಸಕಾಲ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಇತ್ಯರ್ಥಪಡಿಸಲಾಗುತ್ತಿದೆ. ಯಾವುದೇ ಅರ್ಜಿಗಳು ಸಕಾಲದಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಅವರು ಕೋರಿರುವ ಸೇವೆಗಳು ನಿರ್ದಿಷ್ಟ ಅವಧಿಗಿಂತ ಮುಂಚಿತವಾಗಿಯೇ ಅವರಿಗೆ ಲಭ್ಯವಾಗುತ್ತಿವೆ. ರಾಜ್ಯದಲ್ಲಿ ಸಕಾಲ ಯೋಜನೆಯಲ್ಲಿ ಸರ್ಕಾರದ 100 ವಿವಿಧ ಇಲಾಖೆ ಮತ್ತು ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 1181 ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ.
ಇದನ್ನೂ ಓದಿ: Karnataka Weather: ಈ ಜಿಲ್ಲೆಗಳಲ್ಲಿ ಇರಲಿದೆ ಭಾರಿ ಚಳಿ; ಬೆಂಗಳೂರಲ್ಲಿ ಹೇಗಿದೆ ವಾತಾವರಣ?
ಸಕಾಲ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕಾಲಮಿತಿಗಿಂತ ಮುಂಚಿತವಾಗಿಯೇ ವಿಲೇವಾರಿ ಮಾಡುವಲ್ಲಿ ನಮ್ಮ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಮುತುವರ್ಜಿವಹಿಸಿ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ತ್ವರಿತವಾಗಿ ತಮ್ಮ ಇಲಾಖೆಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಸ್ವೀಕೃತವಾಗುವ ಸಾರ್ವಜನಿಕರ ಅರ್ಜಿಗಳನ್ನು ಸಕಾಲ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡು ಅಗತ್ಯ ಸೇವೆಗಳನ್ನು ಒದಗಿಸುವಂತೆ ನಿರ್ದೇಶನಗಳನ್ನು ನೀಡಲಾಗಿದೆ. ಅರ್ಜಿಗಳ ವಿಲೇವಾರಿ ಕುರಿತಂತೆ ಪ್ರತಿ ದಿನ ಪರಿಶೀಲನೆ ಹಾಗೂ ಪ್ರತೀ ವಾರ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಸಕಾಲ ಯೋಜನೆಯ ಒಟ್ಟು ರ‍್ಯಾಕಿಂಗ್‌ನಲ್ಲಿ ಜಿಲ್ಲೆಯು ರಾಜ್ಯದಲ್ಲಿ ಮೊದಲನೇ ಸ್ಥಾನ ಪಡೆಯುವ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.