Site icon Vistara News

Uttara Kannada News: ಯಲ್ಲಾಪುರದಲ್ಲಿ ವಿಜ್ಞಾನ ಶಿಕ್ಷಕರ ಕಾರ್ಯಾಗಾರಕ್ಕೆ ಚಾಲನೆ

Science teachers workshop in Yallapur

ಯಲ್ಲಾಪುರ: ಮನುಷ್ಯನ ಜೀವನದಲ್ಲಿ ವಿಜ್ಞಾನದ (Science) ಸಂವಹನ ಅತ್ಯಂತ ಪ್ರಮುಖವಾದದ್ದು ಹಾಗೂ ಆ ಸಂವಹನವನ್ನು ಪರಿಣಾಮಕಾರಿಯಾಗಿ ವರ್ಗ ಕೋಣೆಯಲ್ಲಿ ತಲುಪಿಸುವುದೇ ವಿಜ್ಞಾನ ಶಿಕ್ಷಕರ ಆದ್ಯ ಕರ್ತವ್ಯ ಎಂದು ಡಿಡಿಪಿಐ ಕಚೇರಿಯ ವಿಜ್ಞಾನ ಪರಿವೀಕ್ಷಕ ಎಂ.ಕೆ. ಮೊಗೆರ್ ಅಭಿಪ್ರಾಯಪಟ್ಟರು.

ಪಟ್ಟಣದ ಹೋಲಿ ರೋಜರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು ಹಾಗೂ ವಿಕಾಸನ ಕೇಂದ್ರ ಬೆಳಗಾವಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಯಲ್ಲಾಪುರ ಮುಂಡಗೋಡ ಹಳಿಯಾಳ ಜೋಯಿಡಾ ತಾಲೂಕುಗಳ ವಿಜ್ಞಾನ ಶಿಕ್ಷಕರಿಗಾಗಿ ಆಯೋಜಿಸಿದ್ದ ಮೂರು ದಿನಗಳ ʼಕಡಿಮೆ ವೆಚ್ಚದ ಶಿಕ್ಷಣ ಪರಿಕರಗಳ ತಯಾರಿಕೆ ಮೂಲಕ ವಿಜ್ಞಾನ ಸಂವಹನ ಕಾರ್ಯಾಗಾರʼ ವನ್ನು ಪ್ರಯೋಗದ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.

ಕೇವಲ ಉದ್ಯೋಗಕ್ಕಾಗಿ ವಿಜ್ಞಾನವನ್ನು ಅಧ್ಯಯನ ಮಾಡದೆ, ಆವಿಷ್ಕಾರಗಳನ್ನು ರೂಪಿಸುವ ಅಧ್ಯಯನ ಮಾಡುವಂತಹ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಹಾಗೂ ವಿಜ್ಞಾನದ ಮೂಲ ತತ್ವಗಳನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕ. ವರ್ಗ ಕೋಣೆಯಲ್ಲಿ ವಿಜ್ಞಾನದ ಮಾದರಿಗಳೊಂದಿಗೆ ಪಾಠವನ್ನು ಮಾಡಿದಾಗ ಅದರ ಫಲ ಶ್ರುತಿ ಉತ್ತಮವಾಗಿರುತ್ತದೆ. ಜತೆಗೆ ಕಡಿಮೆ ಗುಣಮಟ್ಟದಲ್ಲಿರುವ ವಿದ್ಯಾರ್ಥಿಗಳ ಫಲಿತಾಂಶ ಸುಧಾರಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Corona Virus News: ಮಂಗಳವಾರ 74 ಮಂದಿಗೆ ಕೊರೊನಾ, ಇಬ್ಬರ ಸಾವು

ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಡಯಟ್‌ನ ಪ್ರಾಚಾರ್ಯ ಎಂ.ಎಸ್. ಹೆಗಡೆ ಮಾತನಾಡಿ, ಮೂಲ ವಿಜ್ಞಾನವನ್ನು ಹೆಚ್ಚು ಆಸಕ್ತಿದಾಯಕಗೊಳಿಸಿ, ಅದನ್ನು ಅಧ್ಯಯನ ಮಾಡುವುದರ ಕಡೆಗೆ ಮಕ್ಕಳನ್ನು ತೆಗೆದುಕೊಂಡು ಹೋಗಬೇಕು. ಪರಿಕರಗಳ ಜತೆಗೆ ಪಾಠಗಳು ನಡೆದರೆ ಅದನ್ನು ಮಕ್ಕಳು ಆನಂದಿಸುತ್ತಾರೆ ಹಾಗೂ ಜೀವನದಲ್ಲಿ ಅದನ್ನು ಅಳವಡಿಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯಲ್ಲಾಪುರ ವಿಜ್ಞಾನ ಬಳಗದ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಜಯ ನಾಯಕ, ಮುಖ್ಯಾಧ್ಯಾಪಕಿ ತನುಜಾ ನಾಯ್ಕ, ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ಗೋಪಾಲ್ ಹೆಗಡೆ, ಡಯಟ್‌ನ ಉಪನ್ಯಾಸಕರಾದ ಪ್ರಶಾಂತ್ ವರ್ಣೇಕರ್ ಹಾಗೂ ನಾವುಡ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಾಲ್ಕು ತಾಲೂಕುಗಳ ಸುಮಾರು 80ಕ್ಕೂ ಅಧಿಕ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತಾ ಸಿಬ್ಬಂದಿ ನೇಮಿಸಿ; ಸಿಎಂಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ

ಕಾರ್ಯಕ್ರಮದ ಕುರಿತು ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಮೀಸಾಳೆ ಮತ್ತು ಕಾರ್ಯಕ್ರಮದ ಸಂಯೋಜಕ ಸಂಜಯ್ ಮುಗುದುಮ್ ಬೆಳಗಾವಿ ಅವರು ಮಾಹಿತಿ ನೀಡಿದರು.

Exit mobile version