Site icon Vistara News

Uttara Kannada News: ಯಲ್ಲಾಪುರದಲ್ಲಿ ಪ್ರಾಂಶುಪಾಲರ ವರ್ಗಾವಣೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಮೌನ ಪ್ರತಿಭಟನೆ

Silent protest by students demanding transfer of principal in Yallapura

ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ (Principal) ವರ್ಗಾವಣೆಗೆ ಆಗ್ರಹಿಸಿ, ವಿದ್ಯಾರ್ಥಿಗಳು ಶನಿವಾರ ಮೌನ ಪ್ರತಿಭಟನೆ (Silent Protest) ನಡೆಸಿದರು.

ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಭಾರಿ ಪ್ರಾಂಶುಪಾಲೆ ಭವ್ಯಾ ಸಿ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ಕುರಿತು ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ದಿನೇಶ ಗೌಡ, ಪ್ರಾಂಶುಪಾಲರು ಅನವಶ್ಯಕವಾಗಿ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದು, ವಿದ್ಯಾರ್ಥಿಗಳ ಇಷ್ಟದ ವಿಷಯವನ್ನು ಆಯ್ಕೆಮಾಡಿಕೊಳ್ಳುವ ಅಧಿಕಾರವನ್ನು ಕಿತ್ತುಕೊಂಡಿರುತ್ತಾರೆ. ವಿದ್ಯಾರ್ಥಿಗಳು ಶೌಚಾಲಯದಲ್ಲಿರುವಾಗ ತೆರಳಿ ನಿಂದಿಸಿದ್ದಲ್ಲದೇ, ಮುಜುಗರ ಉಂಟುಮಾಡಿರುತ್ತಾರೆ. ಗ್ರಂಥಾಲಯದ ಪುಸ್ತಕಗಳಿಗೆ ದಂಡ ವಸೂಲಿ ಮಾಡಿ, ಅದಕ್ಕೆ ಸಮರ್ಪಕವಾದ ರಸೀದಿಯನ್ನು ಸಹ ನೀಡಿರುವುದಿಲ್ಲ. ಅಲ್ಲದೇ ಇತರೆ ಉಪನ್ಯಾಸಕರ ವಿರುದ್ಧ ಒತ್ತಾಯಪೂರ್ವಕವಾಗಿ ದೂರು ಬರೆಸಿಕೊಂಡಿದ್ದು, ದೂರು ಪತ್ರಕ್ಕೆ ಸಹಿ ಹಾಕದಿದ್ದಲ್ಲಿ ಕಾಲೇಜಿನಿಂದ ಹೊರಹಾಕುವುದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಿದರು. ಈ ರೀತಿಯ ಸರ್ವಾಧಿಕಾರಿ ವರ್ತನೆಯನ್ನು ನಾವೆಲ್ಲ ಖಂಡಿಸುತ್ತಿದ್ದು, ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಪ್ರಾಂಶುಪಾಲರ ವರ್ಗಾವಣೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀರ್ವಗೊಳಿಸುವುದಾಗಿ ತಿಳಿಸಿದರು.

ಇದನ್ನೂ ಓದಿ: JOB NEWS: 184 ಎಂಜಿನಿಯರ್‌ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಪ್ರಭಾರಿ ಪ್ರಾಂಶುಪಾಲೆ ಭವ್ಯಾ ಸಿ., ಈ ಎಲ್ಲಾ ಆರೋಪಗಳು ಶುದ್ಧ ಸುಳ್ಳು. ಈ ರೀತಿಯ ಆರೋಪಗಳು ದಿನಕ್ಕೊಂದು ರೂಪ ಪಡೆಯುತ್ತಿದೆ. ಕೆಲವರು ನನ್ನ ಮೇಲಿನ ದ್ವೇಷ ಸಾಧಿಸಿಕೊಳ್ಳಲು ಈ ರೀತಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕಾಲೇಜಿನಲ್ಲಿ ಶಿಸ್ತುಪಾಲನೆಗಾಗಿ ನಾನು ಕೆಲವೊಮ್ಮೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ಏನೇ ಕ್ರಮ ಕೈಗೊಂಡರೂ ಸಹ ಅದನ್ನು ನ್ಯಾಯಬದ್ಧವಾಗಿಯೇ ಮಾಡಿರುತ್ತೇನೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಆಗಬಾರದೆಂದು ಕಾಲೇಜಿನಲ್ಲಿ ಲಭ್ಯವಿರುವ ಉಪನ್ಯಾಸಕರಿಗೆ ಅನುಗುಣವಾಗಿ ವಿಷಯದ ಆಯ್ಕೆಯನ್ನು ಸೂಚಿಸಿದ್ದೇನೆ.

ಕಾಲೇಜಿನಲ್ಲಿ ತರಗತಿಗಳು ಟೈಮ್‌ ಟೇಬಲ್‌ ಪ್ರಕಾರ ನಡೆಯುವಂತೆ ನೋಡಿಕೊಳ್ಳುತ್ತಿದ್ದೇನೆ. ಕಾಲೇಜಿಗೆ ಬರದ ಅನೇಕ ವಿದ್ಯಾರ್ಥಿಗಳು ನಿತ್ಯ ತರಗತಿಗೆ ಹಾಜರಾಗುವಂತೆ ನೋಡಿಕೊಳ್ಳುತ್ತಿದ್ದೇನೆ. ಇವೆಲ್ಲವುಗಳ ಹೊರತಾಗಿ ಈವರೆಗೂ ಯಾವುದೇ ವಿದ್ಯಾರ್ಥಿಗಳು ನನ್ನ ಬಳಿ ಮನವಿಯನ್ನು ಸಲ್ಲಿಸಿಲ್ಲ. ಏಕಾಏಕಿ ಪ್ರತಿಭಟನೆ ನಡೆಸಿ, ಇಲ್ಲಸಲ್ಲದ ಆರೋಪ ಮಾಡಿರುವುದು ಬೇಸರ ತಂದಿದೆ ಎಂದು ತಿಳಿಸಿದರು.‌

ಇದನ್ನೂ ಓದಿ: Seabird Naval Base : ಸೀಬರ್ಡ್‌ ಯೋಜನೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತಾರತಮ್ಯ ನಿವಾರಿಸಲು ಸಿಎಂ ಸೂಚನೆ

ಸ್ಥಳಕ್ಕಾಗಮಿಸಿದ ಪಿಎಸ್‌ಐ ರವಿ ಗುಡ್ಡಿ, ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಮನವಿಯನ್ನು ತಹಶೀಲ್ದಾರರಿಗೆ ಸಲ್ಲಿಸಿ, ಕ್ರಮ ಕೈಗೊಳ್ಳಲು ಸಮಯಾವಕಾಶ ನೀಡುವಂತೆ ಮನವೊಲಿಸಿದರು. ನಂತರ ವಿದ್ಯಾರ್ಥಿಗಳೆಲ್ಲ ಸೇರಿ ತಹಶೀಲ್ದಾರರ ಮೂಲಕ ಪ್ರಾಂಶುಪಾಲರ ವರ್ಗಾವಣೆ ಮಾಡುವಂತೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

Exit mobile version