Site icon Vistara News

Uttara Kannada News: ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಉಪಯೋಗಕ್ಕೆ ವಿಶೇಷ ಕಿಟ್

Heavy rain in Uttara Kannada district district NDRF team for rescue says DC Gangubai Manakar

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada News) ಲೋಕಸಭಾ ಸಾರ್ವತ್ರಿಕ ಚುನಾವಣೆಯಂದು ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮತಗಟ್ಟೆ ಸಿಬ್ಬಂದಿ ತಮ್ಮ ಮನೆ ತೊರೆದು ಶಾಲೆಗಳಲ್ಲಿರುವ ಮತಗಟ್ಟೆಗಳಲ್ಲಿ ತಂಗುವ ಸಮಯದಲ್ಲಿ ದೈನಂದಿನ ಬಳಕೆಗೆ ಬಳಸುವ ಅಗತ್ಯ ವಸ್ತುಗಳ ಯಾವುದೇ ಕೊರತೆಯಾಗದಂತೆ ಇದೇ ಮೊದಲ ಬಾರಿಗೆ ವಿಶೇಷ ಕಿಟ್‌ನ್ನು ಜಿಲ್ಲಾಡಳಿತ ಸಿದ್ದಪಡಿಸುತ್ತಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಮತದಾನದ ದಿನಕ್ಕೂ ಒಂದು ದಿನ ದಿನ ಮುಂಚೆ, ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪರಿಕರಗಳೊಂದಿಗೆ ತೆರಳುವ ಮತಗಟ್ಟೆ ಸಿಬ್ಬಂದಿಗೆ, ಮರುದಿನ ಬೆಳಗ್ಗೆ ತಮ್ಮ ದೈನಂದಿನ ಸಿದ್ದತೆಗಳಿಗೆ ತೊಂದರೆಯಾಗದಂತೆ, ಎಲ್ಲಾ ಸಿಬ್ಬಂದಿಗೆ ಪ್ರತ್ಯೇಕವಾಗಿ ಸಿದ್ದಪಡಿಸಿದ ಕಿಟ್ ನಲ್ಲಿ ಟೂತ್ ಪೇಸ್ಟ್, ಹಲ್ಲುಜ್ಜುವ ಬ್ರಷ್, ಸ್ನಾನ ಮಾಡಲು ಸೋಪು, ಬಾಚಣಿಕೆ ಮುಂತಾದ ಅತ್ಯಗತ್ಯ ವಸ್ತುಗಳ ಕಿಟ್‌ಗಳನ್ನು ಒದಗಿಸುವ ಮೂಲಕ, ಸಿಬ್ಬಂದಿ ಅತ್ಯಂತ ಉತ್ಸಾಹದಿಂದ ಮತದಾನದ ಕರ್ತವ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಿಟ್ ಮಾತ್ರವಲ್ಲದೇ ಸಿಬ್ಬಂದಿಗಳ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸುತ್ತಿರುವ ಜಿಲ್ಲಾಡಳಿತ ಮತಗಟ್ಟೆಗಳಿಗೆ ತೆರಳುವ ಎಲ್ಲಾ ಸಿಬ್ಬಂದಿಗೆ ಶುದ್ದ ಕುಡಿಯವ ನೀರಿನ ವ್ಯವಸ್ಥೆ ಒದಗಿಸುತ್ತಿದ್ದು, ಸಿಬ್ಬಂದಿಗಳಿಗಾಗಿಯೇ 30 ಲೀ. ನ ಶುದ್ದ ನೀರಿನ ಕ್ಯಾನ್‌ಗಳನ್ನು ಪ್ರತಿಯೊಂದು ಮತಗಟ್ಟೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದೆ.

ಇದನ್ನೂ ಓದಿ: Karnataka Weather : ಕರಾವಳಿ ಸೇರಿದಂತೆ ಒಳನಾಡಿನಲ್ಲಿ ಬಿಸಿ ಗಾಳಿ ಎಚ್ಚರಿಕೆ

ಮತಗಟ್ಟೆಯಲ್ಲಿ ತಂಗುವ ಸಿಬ್ಬಂದಿಗೆ ಯಾವುದೇ ಕೊರತೆಯಾಗದಂತೆ ಶಾಲೆಯಲ್ಲಿರುವ ಶೌಚಾಲಯಗಳಲ್ಲಿ ಸ್ವಚ್ಚತೆ ಮತ್ತು ಸಮರ್ಪಕ ನೀರಿನ ಸೌಲಭ್ಯ ಇರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಸಿಬ್ಬಂದಿಗೆ ಕಾಲಕಾಲಕ್ಕೆ ಶುದ್ದ ಮತ್ತು ರುಚಿಕರ ಆಹಾರ ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಶಾಲೆಗಳಲ್ಲಿನ ಬಿಸಿಯೂಟ ತಯಾರಕರ ಮೂಲಕ ಆಹಾರ ಸಿದ್ದಪಡಿಸಿ, ಸರಬರಾಜು ಮಾಡಲು ವ್ಯವಸ್ಥೆಗಳನ್ನು ಕೈಗೊಂಡಿದೆ.

ಸಿಬ್ಬಂದಿಗಳಿಗೆ ವೈವಿಧ್ಯಮಯವಾದ ರುಚಿಕರ ಊಟ ಮತ್ತು ಉಪಹಾರ ನೀಡುವ ಸಲುವಾಗಿ ಜಿಲ್ಲಾಧಿಕಾರಿಗಳೇ ವಿಶೇಷ ಮುತುವರ್ಜಿ ವಹಿಸಿದ್ದು, ಎಲ್ಲಾ ಸಿಬ್ಬಂದಿಗಳು ಮೆಚ್ಚುವಂತೆ ತಾವೇ ಪ್ರತ್ಯೇಕ ಮೆನು ನೀಡುವುದಾಗಿ ತಿಳಿಸಿದ್ದಾರೆ. ಆಹಾರ ತಯಾರಿಕೆಯ ಬೇಕಾದ ಗುಣಮಟ್ಟದ ಪದಾರ್ಥಗಳನ್ನು ಹೊರಗಿನಿಂದಲೇ ಖರೀದಿಸಿ ನೀಡಲಾಗುತ್ತಿದ್ದು, ಇದಕ್ಕಾಗಿ ಬಿಸಿಯೂಟ ಯೋಜನೆಯ ಪದಾರ್ಥಗಳನ್ನು ಬಳಸಿಕೊಳ್ಳದೇ ಇರಲು ನಿರ್ಧರಿಸಲಾಗಿದೆ. ಸಿಬ್ಬಂದಿಗಳಿಗೆ ಮೊದಲ ದಿನ ಮಧ್ಯಾಹ್ನ ಮತ್ತು ರಾತ್ರಿಯ ಭೋಜನ, ಮರುದಿನ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ.

ಮಹಿಳಾ ಮತಗಟ್ಟೆ ಅಧಿಕಾರಿಗಳು ಹೆಚ್ಚಿರುವ ಕಡೆಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜಿಸಲು ಯೋಜನೆ ರೂಪಿಸಿದೆ. ಮಹಿಳಾ ಸಿಬ್ಬಂದಿಗಳು ಅತ್ಯಂತ ಅನಿವಾರ್ಯ ಕಾರಣಗಳಿಂದ ಮತಗಟ್ಟೆಗಳಲ್ಲಿ ತಂಗಲು ಸಾಧ್ಯವಾಗದೆ ಇದ್ದಲ್ಲಿ, ಮರುದಿನ ಬೆಳಗ್ಗೆ ಅಣಕು ಮತದಾನ ನಡೆಯುವುದಕ್ಕಿಂತ ಮುಂಚೆ ಮತಗಟ್ಟೆಯಲ್ಲಿನ ತಮ್ಮ ಕರ್ತವ್ಯಕ್ಕೆ ಹಾಜರಾಗುವ ಷರತ್ತಿಗೆ ಒಳಪಟ್ಟು ವಿಶೇಷ ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Ugadi 2024: ಯುಗಾದಿಗೆ ಏನ್‌ ವಿಶೇಷ? ಇಲ್ಲಿದೆ ನಿಮಗಾಗಿ ಸ್ಪೆಷಲ್‌ ಮೆನು!

ಚುನಾವಣೆಯಲ್ಲಿ ಮತದಾನ ದಿನವು ಅತ್ಯಂತ ಪ್ರಮುಖವಾದುದು, ಮತದಾನ ಕಾರ್ಯವು ಸುಗಮವಾಗಿ ನಡೆಯಲು ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಪಾತ್ರ ಅತ್ಯಂತ ಅವಶ್ಯಕ. ಸಿಬ್ಬಂದಿಗಳು ತಮ್ಮ ಕರ್ತವ್ಯಗಳನ್ನು ಹೆಚ್ಚಿನ ಉತ್ಸಾಹದಿಂದ ನಿರ್ವಹಿಸಲು ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರತಿಯೊಂದು ಮತಗಟ್ಟೆ ಸಿಬ್ಬಂದಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ಅವರು ಚುನಾವಣಾ ಕರ್ತವ್ಯದಲ್ಲಿ ಸಂತಸದಿಂದ ಭಾಗವಹಿಸಬೇಕು ಎನ್ನುವ ಉದ್ದೇಶದಿಂದ ಅಗತ್ಯ ವಸ್ತುಗಳ ವಿಶೇಷ ಕಿಟ್ ಹಾಗೂ ಶುದ್ಧ ಮತ್ತು ರುಚಿಕರ ಆಹಾರ ಸರಬರಾಜು ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.

Exit mobile version