Site icon Vistara News

Uttara Kannada News: ಕಾರವಾರ ನಗರಸಭೆ ತೆರಿಗೆ ಸಂಗ್ರಹಕ್ಕೆ ವೇಗ: ಡಿಸಿ

Uttara Kannada DC Gangubai Manakar statement

ಕಾರವಾರ: ಕಾರವಾರ ನಗರಸಭೆಯ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಜಿಲ್ಲಾಧಿಕಾರಿ ಅವರ ದಿಟ್ಟ ನಿರ್ಧಾರಗಳಿಂದ, ನಗರಸಭೆಯಲ್ಲಿ ಬಾಕಿ ಇದ್ದ ತೆರಿಗೆ ವಸೂಲಿ ಕಾರ್ಯಕ್ಕೆ ವೇಗ ದೊರೆತಿದೆ. ಪ್ರಸ್ತುತ ಸಾಲಿನಲ್ಲಿ ಇದುವರೆಗೆ 309.93 ಲಕ್ಷ ರೂ. ತೆರಿಗೆ ವಸೂಲಿಯಾಗಿದ್ದು, ಇದು ವಾರ್ಷಿಕ ಗುರಿಯ ಶೇ.53 ರಷ್ಟು ಸಾಧನೆ ಆಗಿದೆ. ಅಲ್ಲದೇ ತೆರಿಗೆ ಸಂಗ್ರಹ ಉತ್ತಮವಾದ ಹಿನ್ನಲೆಯಲ್ಲಿ ಈ ಹಿಂದೆ 2021-22 ರಿಂದ ಬಾಕಿ ಇದ್ದ ಗುತ್ತಿಗೆದಾರರ 12.51 ಕೋಟಿ ಮೊತ್ತದಲ್ಲಿ 2.55 ಕೋಟಿ ರೂ ಗಳ ಬಿಲ್ ಅನ್ನು ಪಾವತಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ (Uttara Kannada News) ತಿಳಿಸಿದ್ದಾರೆ.

ಕಾರವಾರ ನಗರಸಭೆಯಲ್ಲಿ 2021-22 ರಲ್ಲಿ ಅಧಿಕಾರಿಗಳು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ, ಕಾರವಾರ ನಗರ ವ್ಯಾಪ್ತಿಯಲ್ಲಿ 263 ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಿರ್ವಹಿಸಿದ್ದ ಗುತ್ತಿಗೆದಾರರಿಗೆ ಅವರ ವೆಚ್ಚದ ಬಿಲ್ 12.51 ಕೋಟಿ ರೂ ಮೊತ್ತವನ್ನು ಪಾವತಿಸುವಲ್ಲಿ ತೀವ್ರ ತೊಂದರೆಯಾಗಿತ್ತು. ಅಲ್ಲದೇ ಪೂರ್ಣ ಪ್ರಮಾಣದ ತೆರಿಗೆ ವಸೂಲಾತಿ ನಡೆಯದೇ ಇದ್ದುದರಿಂದ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಸಹ ಅಡಚಣೆಯಾಗಿತ್ತು.

ಇದನ್ನೂ ಓದಿ: PGCET 2024: ಪಿಜಿಸಿಇಟಿ 2024ಕ್ಕೆ ಮೇ 27ರಿಂದ ಅರ್ಜಿ ಸಲ್ಲಿಕೆ ಆರಂಭ; ಪರೀಕ್ಷೆ ಯಾವಾಗ, ಇಲ್ಲಿದೆ ವೇಳಾಪಟ್ಟಿ

2023ರ ಆಗಸ್ಟ್ ತಿಂಗಳಲ್ಲಿ ನಗರಸಭೆಯ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಜಿಲ್ಲಾಧಿಕಾರಿಗಳ ಸೂಚನೆಯಂತೆ, ಶೇ.100 ರಷ್ಟು ಪೂರ್ಣ ಪ್ರಮಾಣದ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿದ್ದು, ನಗರಸಭೆಯ ಎಲ್ಲಾ ತೆರಿಗೆ ವಸೂಲಿಗಾರರಿಗೆ ತಮ್ಮ ವ್ಯಾಪ್ತಿಯಲ್ಲಿ ಬಾಕಿ ಇರುವ ತೆರಿಗೆಯನ್ನು ಸಂಪೂರ್ಣವಾಗಿ ವಸೂಲಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಮಾತ್ರವಲ್ಲದೇ, ಪ್ರತೀ ತಿಂಗಳು ತೆರಿಗೆ ವಸೂಲಿ ಮಾಡಲು ಗುರಿ ನಿಗಧಿಪಡಿಸಿದ ಕಾರಣ ತೆರಿಗೆ ಸಂಗ್ರಹದಲ್ಲಿ ಗಣನೀಯ ಪ್ರಗತಿ ಸಾಧ್ಯವಾಗಿದೆ.

ನಗರಸಭೆಯ ತೆರಿಗೆ ವಸೂಲಿ ಉತ್ತಮಗೊಂಡರೂ ಸಹ, ಗುತ್ತಿಗೆದಾರರ ಹಳೆಯ ಬಾಕಿಯ ಮೊತ್ತ ಪಾವತಿಸಲು ಸಾಧ್ಯವಾಗಿರಲಿಲ್ಲ. ತೆರಿಗೆ ವಸೂಲಿ ಮೊತ್ತದಿಂದಲೇ ನಗರಸಭೆಯ ಅಭಿವೃಧ್ದಿ ಕಾರ್ಯಗಳು, ಸಿಬ್ಬಂದಿಯ ವೇತನ ಮತ್ತಿತರ ವೆಚ್ಚಗಳನ್ನು ಪಾವತಿಸಬೇಕಾದ್ದರಿಂದ, ತೆರಿಗೆ ಸಂಗ್ರಹದ ಮೊತ್ತದಲ್ಲಿ ನಗರಸಭೆಯ ಆಡಳಿತ ವೆಚ್ಚ ಪಾವತಿ ಮತ್ತು ಹಳೆಯ ಬಾಕಿ ಬಿಲ್ ಮೊತ್ತವನ್ನು ಪಾವತಿಸಲು ಶೇಕಡಾವಾರು ಪ್ರಮಾಣವನ್ನು ನಿರ್ಣಯಿಸಿ, ಗುತ್ತಿಗೆದಾರರ ಬಾಕಿ ಇರುವ ಮೊತ್ತವನ್ನು ಹಂತ ಹಂತವಾಗಿ ಪಾವತಿ ಮಾಡಲು ಯೋಜನೆ ರೂಪಿಸಿದ್ದು, ಅದರಂತೆ 2023-24 ರಲ್ಲಿ 27 ಮಂದಿ ಗುತ್ತಿಗೆದಾರರಿಗೆ 1.8 ಕೋಟಿ ಹಾಗೂ ಪ್ರಸ್ತುತ ಸಾಲಿನಲ್ಲಿ 40 ಗುತ್ತಿಗೆದಾರರಿಗೆ 1.47 ಕೋಟಿ ರೂ ಸೇರಿದಂತೆ ಇದುವರೆಗೆ 67 ಗುತ್ತಿಗೆದಾರರಿಗೆ 2.55 ಕೋಟಿ ರೂ ಗಳನ್ನು ಪಾವತಿಸಲಾಗಿದೆ.

ನಗರಸಭೆಯಲ್ಲಿ ನಿಗದಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ನಡೆಯದ ಕಾರಣ, ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ಅಡಚಣೆಯಾಗುತ್ತಿರುವ ಬಗ್ಗೆ ತಿಳಿದುಬಂದಿತ್ತು. ಈ ಕುರಿತಂತೆ ನಗರಸಭೆಯ ಸಭೆಯಲ್ಲಿ ಎಲ್ಲಾ ಬಿಲ್ ಕಲೆಕ್ಟರ್‌ಗಳಿಗೆ, ತೆರಿಗೆ ನೀಡದೇ ಇರುವವರಿಗೆ ನೋಟಿಸ್ ನೀಡಿ, ನಿಗಧಿತ ತೆರಿಗೆ ಸಂಗ್ರಹ ಮಾಡುವಂತೆ ನಿಗಧಿತ ಗುರಿ ನೀಡಲಾಗಿದೆ. ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಹೆಚ್ಚಳವಾಗಿದ್ದು, ಈ ಹಿಂದೆ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಿದ್ದರೂ ಸಹ, ಅಧಿಕಾರಿಗಳ ತಪ್ಪು ನಿರ್ಣಯಗಳಿಂದ ವೆಚ್ಚ ಪಾವತಿಯಾಗದೇ ತೊಂದರೆಗೊಳಗಾಗಿದ್ದ ಗುತ್ತಿಗೆದಾರರಿಗೆ ಹಂತ ಹಂತವಾಗಿ ಮೊತ್ತವನ್ನು ಪಾವತಿ ಮಾಡಲಾಗುತ್ತಿದೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

ತೆರಿಗೆ ಸಂಗ್ರಹದಲ್ಲಿ ನಿರ್ಲಕ್ಷ್ಯ ತೋರಿರುವ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಕಾರವಾರ ನಗರಸಭೆ ಆಡಳಿತಾಧಿಕಾರಿಯಾಗಿರುವ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version