ಕಾರವಾರ: ಜಿಲ್ಲೆಯ ಸಾರ್ವಜನಿಕರು ಸರ್ಕಾರದ (Government) ವಿವಿಧ ಸೌಲಭ್ಯಗಳನ್ನು (Facilities) ಕೋರಿ ಇಲಾಖೆಗಳಿಗೆ ಸಲ್ಲಿಸುವ ಅರ್ಜಿಗಳಿಗೆ ಸಂಬಂಧಿಸಿದ ಕಡತಗಳನ್ನು ಅಧಿಕಾರಿಗಳು ನಿಗದಿತ ಕಾಲಾವಧಿಯೊಳಗೆ ವಿಲೇವಾರಿ ಮಾಡಿ, ಸಾರ್ವಜನಿಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಕಾಲದಲ್ಲಿ ದೊರಕುವಂತೆ ಮಾಡಲು ಕ್ರಮ ಕೈಗೊಳ್ಳಬೇಕು, ಅನಗತ್ಯವಾಗಿ ಕಡತಗಳನ್ನು ವಿಳಂಬವಾಗಿ ವಿಲೇವಾರಿ ಮಾಡುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಮಂಡಿಸಲಾದ ಹಿಂದುಳಿದ ವರ್ಗಗಳ ಇಲಾಖೆಯ ಕಡತಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಇದನ್ನೂ ಓದಿ: Money Guide: ಹೋಮ್‌ಲೋನ್ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ
ಇತ್ತೀಚೆಗೆ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಖುದ್ದು ಭೇಟಿ ನೀಡಿ ಕಡತಗಳ ವಿಲೇವಾರಿ ಕುರಿತಂತೆ ಪರಿಶೀಲನೆ ನಡೆಸಿದ್ದ ಜಿಲ್ಲಾಧಿಕಾರಿಗಳು, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಬಾಕಿ ಇದ್ದ ಕಡತಗಳನ್ನು ಪರಿಶೀಲಿಸಿ ಅವುಗಳನ್ನು ಕೂಡಲೇ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಶುಕ್ರವಾರ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಮಂಡಿಸಲಾದ ಹಿಂದುಳಿದ ವರ್ಗಗಳ ಇಲಾಖೆಯ ಸಿಂಧುತ್ವ ಪ್ರಮಾಣ ಪತ್ರದ ಕಡತಗಳು ಸೇರಿದಂತೆ ವಿವಿಧ ಒಟ್ಟು 126 ಕಡತಗಳನ್ನು ಡಿಸಿ ಗಂಗೂಬಾಯಿ ಮಾನಕರ್ ವಿಲೇವಾರಿ ಮಾಡಿದರು.
ಎಲ್ಲ ಇಲಾಖೆಗಳಿಗೆ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಪೂರಕ ದಾಖಲೆಗಳು ಇಲ್ಲದಿದ್ದಲ್ಲಿ ಈ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಿ, ಅಗತ್ಯ ಪೂರಕ ದಾಖಲೆಗಳನ್ನು ಪಡೆದುಕೊಂಡು ಕಡತಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ ಎಲ್ಲಾ ಇಲಾಖೆಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ದುರುದ್ದೇಶಪೂರ್ವಕವಾಗಿ ಕಡತಗಳ ವಿಲೇವಾರಿಗೆ ವಿಳಂಬ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ದ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Kangana Ranaut: ಲೋಕಸಭೆ ಚುನಾವಣೆಯಲ್ಲಿ ಕಂಗನಾ ರಣಾವತ್ ಸ್ಪರ್ಧೆ; ಯಾವ ಪಕ್ಷ?
ವಿವಿಧ ಇಲಾಖೆಗಳಿಂದ ತಮಗೆ ಸಲ್ಲಿಕೆಯಾಗುವ ಕಡತಗಳನ್ನು ತಮ್ಮ ಹಂತದಲ್ಲಿ ಕೂಡಲೇ ವಿಲೇವಾರಿ ಮಾಡುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಉದ್ದೇಶದಿಂದ ಕೂಡಿರುವ, ಅತ್ಯಂತ ತುರ್ತಾಗಿ ವಿಲೇವಾರಿಯಾಗಬೇಕಾದ ಕಡತಗಳಿದ್ದಲ್ಲಿ, ಅವುಗಳಿಗೆ ಯಾವುದೇ ಸಂದರ್ಭದಲ್ಲಿಯೂ ವಿಳಂಬಕ್ಕೆ ಆಸ್ಪದ ನೀಡದೇ, ಅಧಿಕಾರಿಗಳು ತಮ್ಮನ್ನು ನೇರವಾಗಿ ಸಂಪರ್ಕಿಸಿ, ಕಡತಗಳಿಗೆ ಅನುಮೋದನೆ ಪಡೆಯುವಂತೆ ಅವರು ತಿಳಿಸಿದ್ದಾರೆ.