ಕಾರವಾರ: ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಉನ್ನತ ಸಾಧನೆಗಳನ್ನು ಮಾಡುವ ಗುರಿಗಳನ್ನು ಹೊಂದಬೇಕು ಹಾಗೂ ಆ ಗುರಿ ಸಾಧನೆಯ ಹಾದಿಯಲ್ಲಿ ಯಾವುದೇ ಅಡೆ ತಡೆಗಳು ಬಂದರೂ ಎದೆಗುಂದದೇ , ತಮ್ಮ ನಿರೀಕ್ಷಿತ ಗುರಿ ತಲುಪುವವರೆಗೂ ಪ್ರಯತ್ನ ಮುಂದುವರೆಸಬೇಕು ಎಂದು ಡಿಸಿ ಗಂಗೂಬಾಯಿ ಮಾನಕರ್ (Uttara Kannada News) ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನಗದು ಬಹುಮಾನ ಮತ್ತು ಸನ್ಮಾನ ನೆರವೇರಿಸಿ, ಬಳಿಕ ಅವರು ಮಾತನಾಡಿದರು.
ಇದನ್ನೂ ಓದಿ: Karnataka Weather : ಬೆಂಗಳೂರಲ್ಲಿ ಮಳೆ ಮುನಿಸು; ಕರಾವಳಿ, ಮಲೆನಾಡಲ್ಲಿ ಬಿರುಗಾಳಿ ಎಚ್ಚರಿಕೆ
ಜಿಲ್ಲೆಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸೇರಿದಂತೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಕೌಟುಂಬಿಕ ಆರ್ಥಿಕ ಸಮಸ್ಯೆಗಳಿದ್ದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಹಲವು ಯೋಜನೆಗಳ ಮೂಲಕ ಅಗತ್ಯ ನೆರವು ಒದಗಿಸಲು ಜಿಲ್ಲಾಡಳಿತದಿಂದ ಬದ್ಧವಾಗಿದೆ ಎಂದರು.
ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ದ್ವಿತೀಯ ಪಿಯುಸಿ ಯಲ್ಲಿ ಕಳೆದ ಬಾರಿಗಿಂತ ಶೇಕಡಾವಾರು ಉತ್ತೀರ್ಣ ಪ್ರಮಾಣ ಅಧಿಕವಾಗಿದೆ. ಜಿಲ್ಲೆಯ ಈ ಫಲಿತಾಂಶಕ್ಕೆ ಕಾರಣವಾದ ವಿದ್ಯಾರ್ಥಿಗಳು, ಪೋಷಕರು ಮತ್ತು ಅಧ್ಯಾಪಕ ವೃಂದಕ್ಕೆ ಆಭಿನಂದನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ರೂ.10000, ದ್ವಿತೀಯ ಸ್ಥಾನ ಪಡೆದವರಿಗೆ ರೂ.5000 ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ರೂ. 2500 ಗಳ ನಗದು ಬಹುಮಾನ ವೈಯಕ್ತಿಕವಾಗಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಎಲ್ಲಾ ವಿದ್ಯಾರ್ಥಿಗಳಿಗೆ ಫಲ ತಾಂಬೂಲ ನೀಡಿ ಹಾಗೂ ಶಾಲು ಹೊದಿಸಿ ಸನ್ಮಾನಿಸಿದರು.
ಕಲಾ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದ, ಅಂಕಿತ ಸತೀಶ್ ಹೆಗಡೆ, ದಿವ್ಯ ಎಸ್ ಗುಣೇಕರ್, ಝೈಬಾ ಎಂ ಮಿರ್ಚಿವಾಲೆ, ವಾಣಿಜ್ಯ ವಿಭಾಗದ ಧ್ಯಾನ್ ರಾಮಚಂದ್ರ ಭಟ್, ಅಮಿತ್ ಎಂ ಹೆಗಡೆ, ರಮ್ಯಾ ಹೆಗಡೆ, ವಿಜ್ಞಾನ ವಿಭಾಗದ ಸಿಂಚನ ಗಣಪತಿ ಹೆಗಡೆ, ಶ್ರಾವ್ಯಾ ಶ್ರೀಧರ ಭಟ್, ಯಶಸ್ವಿನಿ ಎಸ್ ಹೆಗಡೆ, ಸನ್ಮತಿ ಹೆಗಡೆ ಅವರನ್ನು ಡಿಸಿ ನಗದು ಬಹುಮಾನ ನೀಡಿ, ಸನ್ಮಾನಿಸಿದರು.
ಇದನ್ನೂ ಓದಿ: Shivamogga Summer Tour: ಜೋಗ ಮಾತ್ರವಲ್ಲ, ಶಿವಮೊಗ್ಗ ಜಿಲ್ಲೆಯಲ್ಲಿ ನೀವು ನೋಡಲೇಬೇಕಾದ ಪ್ರವಾಸಿ ತಾಣಗಳು ಹಲವು!
ಈ ವೇಳೆ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸತೀಶ್ ನಾಯ್ಕ್, ಇತರರು ಉಪಸ್ಥಿತರಿದ್ದರು.