Site icon Vistara News

Uttara kannada News: ಏಕಾಏಕಿ ಲಿಂಗದಬೈಲ್‌ನ ಸಿದ್ದಿ ಟ್ರೈಬಲ್‌ ಹೋಮ್‌ ಸ್ಟೇ ಹೆಸರಿನ ಬದಲಾವಣೆ: ರಾಜೇಶ್ವರಿ ಕೃಷ್ಣ ಸಿದ್ದಿ ಆರೋಪ

Sudden change of name of Lingadabile Siddi Tribal Home Stay Rajeshwari Krishna Siddi allegation

ಯಲ್ಲಾಪುರ: ತಾಲೂಕಿನ ಲಿಂಗದಬೈಲ್‌ನಲ್ಲಿ ಸಿದ್ದಿ ಸಮುದಾಯದ ಹೆಸರಿನಲ್ಲಿ ನಿರ್ಮಾಣವಾಗುತ್ತಿದ್ದ ಟ್ರೈಬಲ್ ಹೋಮ್‌ ಸ್ಟೇ ಹೆಸರನ್ನು ಏಕಾಏಕಿ ಬದಲಿಸಿ, ಡಮಾಮಿ ಸಮುದಾಯ ಪ್ರವಾಸೋದ್ಯಮ (Tourism) ಆಗಿ ಬದಲಿಸಲಾಗಿದೆ. ಸರ್ಕಾರದ ಯೋಜನೆಯಾದ ಸಿದ್ದಿ ಸಮುದಾಯದ ಹೆಸರಿನಲ್ಲಿ ಬೇರೆ ರೀತಿಯ ಹೋಂ ಸ್ಟೇ ನಿರ್ಮಾಣವಾಗುತ್ತಿದೆ ಎಂದು ಟ್ರೈಬಲ್ ಹೋಮ್‌ ಸ್ಟೇ ಕಮಿಟಿ ಮಾಜಿ ಅಧ್ಯಕ್ಷೆ ರಾಜೇಶ್ವರಿ ಕೃಷ್ಣ ಸಿದ್ದಿ ಆರೋಪಿಸಿದರು.

ಶುಕ್ರವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪ್ರಿಯಾಂಗ ಎಂ. ಅವರು ಸಿದ್ದಿ ಜನಾಂಗದ ಕಲೆ-ಜೀವನ ಶೈಲಿಯನ್ನು ಹೊರಜಗತ್ತಿಗೆ ತೋರುವ ಉದ್ದೇಶದಿಂದ ಹಾಗೂ ಸಿದ್ದಿ ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಸಿದ್ದಿ ಜನಾಂಗ ಇರುವ ಯಲ್ಲಾಪುರದಲ್ಲಿ 69 ಲಕ್ಷ ಮೊತ್ತದಲ್ಲಿ ಬುಡಕಟ್ಟು ಹೋಮ್‌ ಸ್ಟೇ ನಿರ್ಮಾಣಕ್ಕೆ ಸರ್ಕಾರದ ಯೋಜನೆಯಡಿ ಅನುಮೋದನೆ ನೀಡಿದ್ದರು.

ಇದನ್ನೂ ಓದಿ: Stock Market: 440 ಅಂಕ ಜಿಗಿದ ಸೆನ್ಸೆಕ್ಸ್, ನಿಫ್ಟಿ 156 ಪಾಯಿಂಟ್ ಏರಿಕೆ

ಶಾಶ್ವತವಾಗಿ ಹೋಮ್‌ ಸ್ಟೇ ನಮ್ಮ ಸಮುದಾಯಕ್ಕೆ ಉಳಿಯುವ ಉದ್ದೇಶದಿಂದ ತಾಲೂಕಿನ ಕೆಳಾಸೆ, ಲಿಂಗದಬೈಲ್ ಹಾಗೂ ಅರಬೈಲ್‌ನಲ್ಲಿ ಜಾಗದ ಪರಿಶೀಲನೆ ನಡೆಸಲಾಗಿತ್ತು. ಓರ್ವರು 15 ಲಕ್ಷ ಮೊತ್ತಕ್ಕೆ 20 ಗುಂಟೆ ಜಾಗವನ್ನು ನೀಡಲು ಸಿದ್ಧರಿದ್ದಾಗಲೂ, ಅಧಿಕಾರಿಗಳು ಹೋಮ್‌ ಸ್ಟೇ ನಿರ್ಮಾಣದ ಮೇಲುಸ್ತುವಾರಿಯನ್ನು ಕೇರಳದ ಕಬಿನಿ ರೆಸಾರ್ಟ್‌ ಅವರಿಗೆ ವಹಿಸಿ, ಅವರು ತೋರಿದ ಜಾಗದಲ್ಲಿ ಹೋಮ್‌ ಸ್ಟೇ ನಿರ್ಮಿಸುವಂತೆ ಸೂಚಿಸಿದ್ದರು.

ಅಂದಿನಿಂದ 2 ವರ್ಷಗಳ ಕಾಲ ನಮ್ಮ ಸಮಯ ಹಾಗೂ ಶ್ರಮದಿಂದ ಹೋಮ್‌ ಸ್ಟೇ ನಿರ್ವಹಣೆಯ ಕುರಿತು ಅನೇಕ ಬಾರಿ, ಅವರು ಹೇಳಿದ ಜಾಗಕ್ಕೆ ತೆರಳಿ ತರಬೇತಿಯನ್ನು ಪಡೆದಿದ್ದೇವೆ. ಗುಡಿಸಲು ರೀತಿಯಲ್ಲಿ ನಿರ್ಮಿಸಬೇಕಾಗಿದ್ದ ಕಟ್ಟಡಗಳನ್ನು ಬೇರೆಯ ಶೈಲಿಯಲ್ಲಿಯೇ ನಿರ್ಮಿಸಿ, ನಮ್ಮ ಸಿದ್ದಿ ಸಮುದಾಯದವರನ್ನು ಕೇವಲ ಕೆಲಸಕ್ಕಾಗಿ ಇರಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: Jio AirFiber: ಜಿಯೋ ಏರ್‌ಫೈಬರ್‌ ಹೊಸ ಬೂಸ್ಟರ್ ಪ್ಲ್ಯಾನ್‌ಗಳು ಲಾಂಚ್‌!

ಡಿಸೆಂಬರ್‌ ತಿಂಗಳಿಂದ ನನ್ನನ್ನು ಹಾಗೂ ಇದರ ಕುರಿತು ಪ್ರಶ್ನಿಸಿದ ಹಲವರನ್ನು ಕಮಿಟಿಯಿಂದ ಕೈಬಿಡಲಾಗಿದ್ದು, ಅಲ್ಲಿಯವರೆಗೆ ಇದ್ದ ಸಿದ್ದಿ ಬುಡಕಟ್ಟು ಹೋಮ್‌ ಸ್ಟೇ ಹೆಸರನ್ನು ಬದಲಾಯಿಸಿ, ಇದಕ್ಕೆ ಸಂಬಂಧಿಸಿದ ಬ್ಯಾಂಕ್‌ ಖಾತೆಯನ್ನು ಸಹ ಬದಲಾಯಿಸಿದ್ದಾರೆ ಎಂದು ಆರೋಪಿಸಿದ ಅವರು, ಆದರೆ ನಮಗೆ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಇಲಾಖೆಯ ಅಧಿಕಾರಿಗಳು ನೀಡುತ್ತಿಲ್ಲ ಎಂದು ದೂರಿದ ಅವರು, ಈ ಕುರಿತು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರ ಗಮನಕ್ಕೂ ತರಲಾಗಿದೆ ಎಂದರು.

ಹೋಮ್‌ ಸ್ಟೇ ನಾಳೆ ಉದ್ಘಾಟನೆಗೊಳ್ಳಲಿದ್ದು, ಈ ಸಂದರ್ಭದಲ್ಲಿ ನಮ್ಮ ಸಮುದಾಯದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಮುದಾಯದ ಎಲ್ಲರೂ ಪ್ರತಿಭಟನೆಗೆ ಪಾಲ್ಗೊಂಡು ಬೆಂಬಲಿಸಬೇಕಾಗಿ ಅವರು ಕೋರಿದರು.

ಇದನ್ನೂ ಓದಿ: Job Alert: ಪದವಿ ಪೂರೈಸಿದವರಿಗೆ ಉದ್ಯೋಗಾವಕಾಶ; ಮ್ಯಾನೇಜರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಈ ಸಂದರ್ಭದಲ್ಲಿ ಇಡಗುಂದಿ ಗ್ರಾಂ.ಪಂ. ಸದಸ್ಯ ಗೋಪಾಲ ಸಿದ್ದಿ, ಆನಗೊಡ ಗ್ರಾ. ಪಂ. ಉಪಾಧ್ಯಕ್ಷೆ ಕುಸುಮಾ ಸಿದ್ದಿ, ಸಾಮಾಜಿಕ ಕಾರ್ಯಕರ್ತರಾದ ಅನಂತ ಸಿದ್ದಿ, ಸೀತಾ ಸಿದ್ದಿ, ಗಣಪತಿ ಸಿದ್ದಿ, ಪ್ರವಾಸೋಧ್ಯಮ ಕಮಿಟಿ ಸದಸ್ಯೆ ಅನಿತಾ ಸಿದ್ದಿ, ಮೀನಾಕ್ಷಿ ಸಿದ್ದಿ, ದೇವಕಿ ಸಿದ್ದಿ, ಮಹಾದೇವಿ ಸಿದ್ದಿ ಉಪಸ್ಥಿತರಿದ್ದರು.

Exit mobile version