Site icon Vistara News

Uttara Kannada News: ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಆತ್ಮಹತ್ಯೆ ಹೆಚ್ಚು: ನ್ಯಾ. ರೇಣುಕಾ ಡಿ ರಾಯ್ಕರ್

Uttara Kannada News Suicides on the rise due to use of social media says Senior Civil Judge Renuka D Roykar

ಕಾರವಾರ: ಯುವಜನತೆ ಹೆಚ್ಚಿನ ಅವಧಿಯಲ್ಲಿ ಸೋಷಿಯಲ್ ಮೀಡಿಯಾಗಳನ್ನು (Social Media) ಬಳಸುವುದರಿಂದ, ಯುವಜನತೆಯಲ್ಲಿ ಆತ್ಮಹತ್ಯೆ (Suicide) ಪ್ರಮಾಣ ಹೆಚ್ಚಳವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ ರಾಯ್ಕರ್ ಹೇಳಿದರು.

ಕಾರವಾರ ವೈದ್ಯಕಿಯ ವಿಜ್ಞಾನ ಸಂಸ್ಥೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ ಕಾರವಾರ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆ ಸೋಷಿಯಲ್ ಮೀಡಿಯಾಗಳಲ್ಲಿ ಅಪರಿಚಿತರೊಂದಿಗೆ ಸ್ನೇಹ ಮಾಡಿಕೊಂಡು, ತಮ್ಮ ಭಾವಚಿತ್ರಗಳನ್ನು ಹಂಚಿಕೊಳ್ಳುವುದು ಮತ್ತು ಅವರನ್ನು ಭೇಟಿ ಮಾಡಿ ವಂಚನೆಗೆ ಒಳಗಾಗುವ ಪ್ರಕರಣಗಳು ಹೆಚ್ಚುತ್ತಿದ್ದು, ವಂಚನೆಯಿಂದ ಖಿನ್ನತೆಗೆ ಒಳಗಾಗುವ ವಿದ್ಯಾರ್ಥಿಗಳು ಆತ್ಮಹತ್ಯಗೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಆನ್‌ಲೈನ್ ಮೂಲಕ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವಾಗ ಎಚ್ಚರದಿಂದಿರಬೇಕು ಎಂದರು.

ಇದನ್ನೂ ಓದಿ: Viral Video: ರೋಹಿತ್​ ಅವರನ್ನು ಮಗುವಿನಂತೆ ತಬ್ಬಿಕೊಂಡು ಸಂಭ್ರಮಿಸಿದ ಕೊಹ್ಲಿ

ದೈನಂದಿನ ಬದುಕಿನಲ್ಲಿ ಯಾವುದೇ ಕೆಲಸವನ್ನು ಒತ್ತಡದಿಂದ ನಿರ್ವಹಿಸದೇ ಅದನ್ನು ಸಂತೋಷದಿಂದ ಮಾಡಿ. ಜೀವನದ ಮುಂದಿನ ಭವಿಷ್ಯದ ಬಗ್ಗೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ, ಅತಿಯಾದ ನಿರೀಕ್ಷೆಗಳು ವಿಫಲಗೊಂಡಾಗ ಮನಸ್ಸಿನಲ್ಲಿ ನಿರಾಸೆ ಮೂಡಿ ಆತ್ಮಹತ್ಯೆಯ ಯೋಚನೆಗಳು ಬರುತ್ತವೆ. ನಿಮ್ಮ ಒಂಟಿತನವನ್ನು ಪ್ರೀತಿಸಿ, ಆತ್ಮಾವಲೋಕನ ಮಾಡಿಕೊಳ್ಳಿ. ನಮಗೆ ದೊರೆತಿರುವ ಮಾನವ ಜನ್ಮವನ್ನು ಸದುದ್ದೇಶಗಳಿಗೆ ಬಳಸಿಕೊಂಡು ಸಮಾಜಕ್ಕೆ ಸೇವೆ ಸಲ್ಲಿಸಿ ಎಂದರು.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್ ಮಾತನಾಡಿ, ಉತ್ತಮ ಹವ್ಯಾಸ ಮತ್ತು ಆರೋಗ್ಯಯುತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆತ್ಮಹತ್ಯೆಯ ಯೋಚನೆಗಳು ಮೂಡಲು ಸಾಧ್ಯವಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ, ಕ್ರಿಮ್ಸ್ ನ ಮಾನಸಿಕ ಆರೋಗ್ಯ ವಿಭಾಗದ ವಿಭಾಗೀಯ ಮುಖ್ಯಸ್ಥ ಡಾ.ವಿಜಯರಾಜ್ ಮಾತನಾಡಿ, ವಿಶ್ವದಲ್ಲಿ ಪ್ರತಿ 40 ಸೆಕೆಂಡ್‌ಗೊಮ್ಮೆ ಆತ್ಮಹತ್ಯೆಗಳು ನಡೆಯುತ್ತಿದ್ದು, ಪ್ರತಿ 3 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ. ವಿಶ್ವದಲ್ಲಿ ಪ್ರತೀ ವರ್ಷ 7-8 ಲಕ್ಷ ಜನ ಆತ್ಮಹತ್ಯೆಯಿಂದ ಸಾವಿಗೀಡಾಗುತಿದ್ದು, ಭಾರತದಲ್ಲಿ 1.30 ಲಕ್ಷ ಜನ ಸಾವಿಗೀಡಾಗುತ್ತಿದ್ದಾರೆ.

ಇದನ್ನೂ ಓದಿ: Uttara Kannada News: ಮುಡಗೇರಿ ಭೂಸ್ವಾದೀನ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ: ಶಾಸಕ ಸತೀಶ್ ಸೈಲ್

ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇ.90 ರಷ್ಟು ಮಂದಿಯನ್ನು ಗುರುತಿಸಲು ಸಾಧ್ಯವಿದ್ದು ಶೇ.10 ರಷ್ಟು ಮಾತ್ರ ತಕ್ಷಣದಲ್ಲಿ ಪ್ರಚೋದನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನಿರಾಸೆ, ಖಿನ್ನತೆ, ಒತ್ತಡ, ಆತಂಕದ ಲಕ್ಷಣಗಳು ಅತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತವೆ. ಪ್ರಾಥಮಿಕ ಹಂತದಲ್ಲಿಯೇ ಈ ಲಕ್ಷಣಗಳನ್ನು ತಕ್ಷಣ ಗುರುತಿಸಿ ವ್ಯಕ್ತಿಗೆ ಆತ್ಮ ಸಮಾಲೋಚನೆ, ಆತ್ಮ ವಿಶ್ವಾಸ ಮೂಡಿಸುವುದರಿಂದ ಸಾವಿಗೀಡಾಗುವುದನ್ನು ತಪ್ಪಿಸಲು ಸಾಧ್ಯವಿದೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ, ಆತ್ಮಹತ್ಯೆ ಯಾವುದೇ ಸಮಸ್ಯೆಗಳಿಗೆ ಅಂತಿಮ ಪರಿಹಾರವಲ್ಲ. ಕಲಿಕಾ ಹಂತದಲ್ಲಿಯೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ತಡೆ ಕುರಿತಂತೆ ಜಾಗೃತಿ ಮತ್ತು ಹಾಗೂ ಜೀವನ ಕೌಶಲ್ಯ ವಿಧಾನಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಟೆಲಿ ಮನಸ್ ಭಿತ್ತಿಪತ್ರದ ಬಿಡುಗಡೆ ಮಾಡಲಾಯಿತು. ಕ್ರಿಮ್ಸ್ ನ ನಿರ್ದೇಶಕ ಡಾ.ಗಜಾನನ ನಾಯಕ, ಕ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಳಕರ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಶಂಕರ ರಾವ್, ಡಾ.ಮಂಜುನಾಥ ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ.ಸೂರಜ ನಾಯಕ, ಕಾರಾಗೃಹ ಇಲಾಖೆಯ ಅಧೀಕ್ಷಕ ಈರಣ್ಣ ಬಿ ರಂಗಾಪುರ, ಪೊಲೀಸ್ ವೃತ್ತ ನಿರೀಕ್ಷಕಿ ಕೋಕಿಲಾ ಉಪಸ್ಥಿತರಿದ್ದರು.

ಇದನ್ನೂ ಓದಿ: Ujjwala Scheme: 75 ಲಕ್ಷ ಮನೆಗಳಿಗೆ ಉಚಿತ ಎಲ್‌ಪಿಜಿ ಕನೆಕ್ಷನ್;‌ 1,650 ಕೋಟಿ ರೂ. ನೀಡಿದ ಕೇಂದ್ರ

ಕ್ರಿಮ್ಸ್ ನ ಮಾನಸಿಕ ಆರೋಗ್ಯ ವಿಭಾಗದ ಮನೋರೋಗ ತಜ್ಞ ಡಾ.ಅಕ್ಷಯ ಪಾಟಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ತನುಜಾ ಹಿರೇಮಠ್ ನಿರೂಪಿಸಿದರು.

Exit mobile version