Site icon Vistara News

Uttara Kannada News: ಜಿಲ್ಲೆಯ ಮರಳು ಸಮಸ್ಯೆಗೆ ಶೀಘ್ರ ಪರಿಹಾರ ಕೈಗೊಳ್ಳಿ: ಡಿಸಿ ಗಂಗೂಬಾಯಿ ಮಾನಕರ್

Take quick solution to the sand problem in the district says DC Gangubai Manakar

ಕಾರವಾರ: ಜಿಲ್ಲೆಯಲ್ಲಿ ಕಂಡುಬರುತ್ತಿರುವ ಮರಳು ಸಮಸ್ಯೆಯನ್ನು (Sand Problem) ಪರಿಹರಿಸಲು ಆದಷ್ಟು ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಂಡು, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ, ಸಾಕಷ್ಟು ಪ್ರಮಾಣದಲ್ಲಿ ಮರಳು ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ (Uttara Kannada News) ಜಿಲ್ಲಾ ಮರಳು ಸಮಿತಿ ಸಭೆಯ ಸದಸ್ಯರಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರಾವಳಿಯ ಇತರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ತೀವ್ರವಾಗಿದೆ. ಜಿಲ್ಲೆಯಲ್ಲಿ ಎಂ ಸ್ಯಾಂಡ್ ಲಭ್ಯತೆ ಕೂಡಾ ಇಲ್ಲ. ಆದ್ದರಿಂದ ಮರಳಿಗೆ ಹೆಚ್ಚಿನ ಬೇಡಿಕೆ ಇದೆ. ಮರಳು ತೆಗೆಯಲು ಮತ್ತು ಸಾಗಾಟ ಮಾಡಲು ಅನುಮತಿ ನೀಡದೇ ಇರುವುದರಿಂದ ಜಿಲ್ಲೆಯಲ್ಲಿ ಅನಧೀಕೃತ ಮರಳುಗಾರಿಕೆ ನಡೆಯುತ್ತಿದೆ. ಈಗಾಗಲೇ ಗುರುತಿಸಲಾಗಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಿದ್ದಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯಲಿದ್ದು, ಈ ಕುರಿತು ಸಾಧಕ ಬಾಧಕಗಳ ಬಗ್ಗೆ ಸಮಿತಿಯ ಸದಸ್ಯರು ಕೂಲಂಕುಷವಾಗಿ ಚರ್ಚಿಸಿ ಶೀಘ್ರದಲ್ಲಿ ತಮ್ಮ ಅಭಿಪ್ರಾಯ ತಿಳಿಸುವಂತೆ ಜಿಲ್ಲಾಧಿಕಾರಿ ಹೇಳಿದರು.

ಇದನ್ನೂ ಓದಿ: Hampi Utsav 2024: ಹಂಪಿ ಉತ್ಸವ; ಗಮನ ಸೆಳೆದ ಸಾವಯವ, ಸಿರಿಧಾನ್ಯಗಳ ವಸ್ತು ಪ್ರದರ್ಶನ

ಜಿಲ್ಲೆಯಲ್ಲಿ ಈಗಾಗಲೇ ಮೀನುಗಾರಿಕಾ ದೋಣಿಗಳು ಮತ್ತು ಸ್ಥಳೀಯ ದೋಣಿಗಳ ಸಂಚಾರಕ್ಕೆ ಅಡ್ಡಿಪಡಿಸುವ ಒಟ್ಟು 20 ಮರಳು ದಿಬ್ಬಗಳನ್ನು ಗುರುತಿಸಲಾಗಿದೆ. ಸದರಿ ಮರಳು ದಿಬ್ಬಗಳನ್ನು ತೆರವುಗೊಳಿಸುವ ಕುರಿತಂತೆ ಸಿಆರ್‌ಝಡ್ ಕ್ಲಿಯರೆನ್ಸ್ ಪಡೆಯಲು ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ 19 ಮರಳು ದಿಬ್ಬ ತೆರವುಗೊಳಿಸಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಅನುಮತಿ ಮತ್ತು ಷರತ್ತುಗಳನ್ನು ವಿಧಿಸಿದೆ. ಈ ಬಗ್ಗೆ ಕಾನೂನಾನ್ಮಕವಾಗಿ ಪರಿಶೀಲಿಸಿ, ಜಿಲ್ಲೆಯ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಶೀಘ್ರದಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಸಮಿತಿಯ ಸದಸ್ಯರುಗಳಿಗೆ ಅವರು ತಿಳಿಸಿದರು.

ಕಾರವಾರ ತಾಲೂಕಿನ ಕಾಳಿ ನದಿಯ ಸಿ.ಆರ್.ಝೆಡ್ ನದಿಪಾತ್ರದಲ್ಲಿ 6, ಅಂಕೋಲಾದ ಗಂಗಾವಳಿ ನದಿ ಪಾತ್ರದಲ್ಲಿ 2, ಕುಮಟಾದ ಅಘನಾಶಿನಿ ನದಿ ಪಾತ್ರದಲ್ಲಿ 4, ಹೊನ್ನಾವರದ ಶರಾವತಿ ನದಿ ಪಾತ್ರದಲ್ಲಿ 7 ಸೇರಿದಂತೆ ಒಟ್ಟು 19 ಮರಳು ದಿಬ್ಬಗಳಲ್ಲಿ 12,44,878.46 ಮೆ.ಟನ್ ಮರಳು ತೆರವುಗೊಳಿಸಬಹುದಾಗಿದ್ದು, ಈ ಬಗ್ಗೆ ನ್ಯಾಯಾಲಯದ ಆದೇಶಗಳು ಮೀರದಂತೆ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.

ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಸಾಗಾಟವನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಚೆಕ್ ಪೋಸ್ಟ್‌ಗಳಲ್ಲಿ ಸಿಸಿಟಿವಿಗಳ ಅಳವಡಿಕೆ ಮತ್ತು ಪರಿಶೀಲನೆ ವ್ಯವಸ್ಥಿತವಾಗಿ ನಡೆಯಬೇಕು ಎಂದರು.

ಇದನ್ನೂ ಓದಿ: Tele ICU: ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು: ದಿನೇಶ್ ಗುಂಡೂರಾವ್

ಸಭೆಯಲ್ಲಿ ಸಿ.ಆರ್.ಝಡ್‌ನ ಪ್ರಾದೇಶಿಕ ನಿರ್ದೇಶಕ ಡಿ.ಎಫ್.ಓ. ಪ್ರಶಾಂತ್, ಕಾರವಾರ ಡಿ.ಎಫ್.ಓ. ರವಿಶಂಕರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಾ, ಜಿಲ್ಲಾ ಪರಿಸರ ಅಧಿಕಾರಿ ಸಂತೋಷ್ ಹಾಗೂ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

Exit mobile version