Site icon Vistara News

Uttara Kannada News: ಮಾನವೀಯ ದೃಷ್ಟಿಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಶಿವರಾಮ ಹೆಬ್ಬಾರ್ ಸೂಚನೆ

MLA Shivaram Hebbar spoke in Taluk level janaspandana programme yallapur

ಯಲ್ಲಾಪುರ: ಶಾಸಕಾಂಗ ಮತ್ತು ಕಾರ್ಯಾಂಗ ಒಂದು ರಥದ ಎರಡು ಗಾಲಿಯಿದ್ದಂತೆ. ನಾವೆಷ್ಟೇ ವೇಗವಾಗಿ ಮುನ್ನಡೆದರೂ, ಅಧಿಕಾರಿಗಳು ಅದನ್ನು ಅಷ್ಟೇ ವೇಗವಾಗಿ ಜಾರಿಗೆ ತರದಿದ್ದರೆ, ಅಭಿವೃದ್ಧಿ ಸಾಧಿಸಲು ಸಾಧ್ಯವಾಗದು ಎಂದು ಶಾಸಕ ಶಿವರಾಮ ಹೆಬ್ಬಾರ್ (Uttara Kannada News) ಹೇಳಿದರು.

ಪಟ್ಟಣದ ಗಾಂಧಿ ಕುಟೀರದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು. ನೀವು ಮಾಡುವ ಕೆಲಸದಿಂದ ಬಡವರ ಕಷ್ಟ ದೂರವಾಗುವುದಿದ್ದರೆ, ಅದಕ್ಕಾಗಿ ಕಾನೂನಿನ ತೊಡಕನ್ನು ಮಧ್ಯ ತಾರದಿರಿ. ಕಷ್ಟವನ್ನು ಅರಿತವರು ಮಾತ್ರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮುಗಿಸಿ ಎಂದು ತಿಳಿಸಿದರು.

ಇದನ್ನೂ ಓದಿ: Eshwar Khandre: ಚಾರಣಪಥಗಳ ಆನ್‌ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ; ಸಚಿವ ಈಶ್ವರ ಖಂಡ್ರೆ

ಸಭೆಯುದ್ದಕ್ಕೂ ಹೆಸ್ಕಾಂ ಹಾಗೂ ಕೆಎಸ್‌ಆರ್‌ಟಿಸಿ ಚರ್ಚೆಯ ವಿಷಯವಾಗಿತ್ತು. ಹೆಸ್ಕಾಂ ಗ್ರಾಮೀಣ ಭಾಗದಲ್ಲಿ ಕರೆಂಟ್‌ ಕಣ್ಣಾಮುಚ್ಚಾಲೆಯಾಡುತ್ತಿದೆ. ಕಳಚೆ ಭಾಗದಲ್ಲಿ ಭೂಕುಸಿತದ ನಂತರ 3 ಕಿಮೀ ಹೊಸದಾಗಿ ಲೈನ್‌ ಎಳೆಯಲಾಗಿದ್ದು, ಈವರೆಗೂ ಸಹ ಅದರಿಂದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ಯು.ಕೆ. ನೇಚರ್‌ ಸ್ಟೇ ಮಾಲಿಕ ನಿರಂಜನ ಹೆಗಡೆ, ಪ್ರವಾಸೋದ್ಯಮವನ್ನು ಬೆಳೆಸಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿರುವ ಹೋಂ ಸ್ಟೇಗಳಿಗೆ ವಿದ್ಯುತ್‌ ವ್ಯತ್ಯಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪಟ್ಟಣ ಪ್ರದೇಶದಲ್ಲಿ ಕರೆಂಟ್‌ ಇದ್ದರೂ, ಗ್ರಾಮೀಣ ಭಾಗದಲ್ಲಿ ಸಂಜೆ ಹೋದರೆ ಬೆಳಗ್ಗಿನವರೆಗೂ ಬರುವುದಿಲ್ಲ. ಇದರಿಂದ ನಾವು ಉದ್ಯಮ ನಡೆಸುವುದು ಕಷ್ಟಸಾಧ್ಯವಾಗಿದೆ ಎಂದು ಆರೋಪಿಸಿದರು.

ಆನಗೋಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲ ಮನೆಗಳ ಮೇಲೆ ವಿದ್ಯುತ್‌ ತಂತಿ ಹಾದುಹೋಗುತ್ತಿದ್ದು, ಇದನ್ನು ತೆರವುಗೊಳಿಸುವಂತೆ ಪಂಚಾಯಿತಿ ಉಪಾಧ್ಯಕ್ಷೆ ಕೋರಿದರು. ತಾಲೂಕಿನಲ್ಲಿ ವಿದ್ಯುತ್‌ ಸಂಪರ್ಕಕ್ಕಾಗಿ ಕೋಟ್ಯಾಂತರ ರೂ.ಗಳನ್ನು ವ್ಯಯಿಸಲಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮರ್ಪಕ ಸಂಪರ್ಕ ಒದಗಿಸಿ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಸೂಚಿಸಿದರು.

ಇನ್ನು ಗ್ರಾಮೀಣ ಭಾಗದಲ್ಲಿ ಬಸ್‌ ಸೌಲಭ್ಯ ಸಮರ್ಪಕವಾಗಿಲ್ಲದಿದ್ದು, ಇದರಿಂದ ಪಟ್ಟಣಕ್ಕೆ ಬರುವ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೆಚ್ಚುವರಿ ಬಸ್‌ಗಳನ್ನು ಬಿಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ಇದನ್ನೂ ಓದಿ: Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

ಇದೇ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಕುಟುಂಬಸ್ಥರು, ಇಲ್ಲಿನ ಸಿಬ್ಬಂದಿಗೆ ವಸತಿ ವ್ಯವಸ್ಥೆ ಇಲ್ಲದಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಬಹುತೇಕರು ಉತ್ತರ ಕರ್ನಾಟಕ ಭಾಗದಿಂದ ಆಗಮಿಸಿರುತ್ತಾರೆ. ಬಾಡಿಗೆ ಮನೆ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಸಿಬ್ಬಂದಿಗಳಿಗಾಗಿ ವಸತಿ ಸಮುಚ್ಛಯ ನಿರ್ಮಾಣ ಮಾಡಿಕೊಡುವಂತೆ ಅವರು ತಮ್ಮ ಅಹವಾಲು ಸಲ್ಲಿಸಿದರು.

ತಾಲೂಕಿನ ಪ್ರವಾಸಿ ಸ್ಥಳಗಳಿಗೆ ಹೆಚ್ಚುವರಿ ವಾಹನ ಶುಲ್ಕ ವಸೂಲಾತಿ ಮಾಡಲಾಗುತ್ತಿರುವ ಕುರಿತು ದೂರು ಕೇಳಿಬಂದ ಹಿನ್ನೆಲೆಯಲ್ಲಿ, ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳ ಆದೇಶ ಇಲ್ಲದೇ ಶುಲ್ಕ ವಸೂಲಾತಿ ಮಾಡಬಾರದು. ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಬೇಕೆ ಹೊರತು ಪ್ರವಾಸಿಗರ ಮೇಲೆ ಹೊರೆ ಹೇರಬಾರದು ಎಂದು ಶಾಸಕ ಶಿವರಾಮ ಹೆಬ್ಬಾರ್‌ ಎಚ್ಚರಿಸಿದರು. ಈ ಕುರಿತು ವಿಎಫ್‌ಸಿ ಅಧ್ಯಕ್ಷರು ಹಾಗೂ ಪೊಲೀಸ್‌ ಇಲಾಖೆಯ ಒಂದು ಸಭೆ ಕರೆಯುವಂತೆ ಸಿಪಿಐ ಅವರಿಗೆ ಸೂಚಿಸಿದರು.

ಬೇಡ್ತಿ ಕುಡಿಯುವ ನೀರಿನ ಯೋಜನೆಗೆ ಬಳಸಲಾದ ಯಂತ್ರೋಪಕರಣಗಳು ಲಕ್ಷಾಂತರ ಮೌಲ್ಯದ್ದಾಗಿದ್ದು, ಅವುಗಳು ಕಳುವಾಗಿರುವ ಕುರಿತು ಸಮರ್ಪಕ ತನಿಖೆಯಾಗಬೇಕು ಎಂದು ಶಾಸಕರು ಆಗ್ರಹಿಸಿದರು. ಅಂತೆಯೇ ಸರ್ಕಾರಿ ಅಧಿಕಾರಿಗಳು, ಕೃಷಿ ಜಮೀನಿನಲ್ಲಿ ನಿರ್ಮಿಸಲಾದ ನಿವೇಶನಗಳನ್ನು ಕೊಂಡು, ಮನೆ ನಿರ್ಮಿಸುವ ಮುನ್ನ ಯೋಚಿಸಬೇಕು. ಅವುಗಳಿಗೆ ಈ ಸ್ವತ್ತು ಮಾಡಲು ಸಾಧ್ಯವಿಲ್ಲ. ಹೀಗಾಗಿ ಇನ್ನು ಮುಂದೆ ಆಲೋಚಿಸಿ ತಮ್ಮ ಹಣ ಹೂಡಿಕೆ ಮಾಡಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಸೇರಿದಂತೆ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಆದೇಶ ಪತ್ರ ಹಂಚಲಾಯಿತು. ಸಭೆಯಲ್ಲಿ 43 ಅರ್ಜಿ ಸಲ್ಲಿಕೆಯಾಗಿದ್ದು ಈ ಪೈಕಿ 17 ಅರ್ಜಿಯನ್ನು ಸ್ಥಳದಲ್ಲಿಯೇ ಪರಿಹರಿಸಿ ಆದೇಶ ಪತ್ರ ನೀಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್.ಆರ್. ಹೆಗಡೆ, ಇಡಗುಂದಿ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಪ.ಪಂ. ಸದಸ್ಯೆ ಸುನಂದಾ ದಾಸ್, ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

ತಹಸೀಲ್ದಾರ್ ಅಶೋಕ್ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದಿಲೀಪ್‌ ದೊಡ್ಮನಿ ನಿರ್ವಹಿಸಿದರು.

Exit mobile version