Site icon Vistara News

Uttara Kannada News: ನಾನು ಉತ್ತರಕನ್ನಡದವಳಲ್ಲ ಎನ್ನುವ ಬಿಜೆಪಿಗರೂ ಪ್ರಚಾರಕ್ಕಾಗಿ ನನ್ನ ಕ್ಷೇತ್ರಕ್ಕೇ ಬರಬೇಕು: ನಿಂಬಾಳ್ಕರ್

Uttara Kannada Lok Sabha Constituency Congress Candidate Dr. Anjali Hemant Nimbalkar spoke in Lok Sabha election pre meeting in Ankola

ಅಂಕೋಲಾ: ಜಾತಿ- ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಬಿಜೆಪಿಗರು ಉತ್ತರ ಕನ್ನಡದ ಹೆಸರು ಕೆಡಿಸಿರುವುದನ್ನು ಸರಿಪಡಿಸಲು ನಮಗೆ ಈ ಬಾರಿ ಉತ್ತಮ ಅವಕಾಶವಿದೆ. ನಾನು ಈ ಜಿಲ್ಲೆಯವಳಲ್ಲ ಎನ್ನುವ ಬಿಜೆಪಿಗರು ಕೂಡ ನನ್ನ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲೇಬೇಕು. ಬಹುಶಃ ಅವರಿಗೆ ಖಾನಾಪುರ ಬ್ಲಾಕ್ ಎಲ್ಲಿದೆ ಎನ್ನುವುದೂ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಅಲ್ಲಿಗೆ ಅವರು ಬರುವುದೇ ಅಪರೂಪ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ (Uttara Kannada News) ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ವ್ಯಂಗ್ಯವಾಡಿದರು.

ಅಂಕೋಲಾದ ನಾಡವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ 30 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದೆ ಎಂದು ಹೇಳುತ್ತಾರೆ. ಆದರೆ ಈಗ ಪ್ರತಿ ಕಾರ್ಯಕರ್ತರೂ “ನಾನೇ ಅಂಜಲಿ ನಿಂಬಾಳ್ಕರ್ʼ ಎಂಬಂತೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗಾಗಿ ಈ ಭದ್ರಕೋಟೆಯನ್ನು ಒಡೆಯಲು ಹೆಚ್ಚೇನೂ ಶ್ರಮ ಬೇಕಿಲ್ಲವೆಂದೆನಿಸುತ್ತಿದೆ. ರಾಜಕೀಯ ನನಗೆ ಹೊಸದಲ್ಲ. ಖಾನಾಪುರದಲ್ಲಿ ಕೇವಲ ಮಹಿಳೆಯರಿಗಾಗಿ ಎಂಸಿಎಚ್ ಆಸ್ಪತ್ರೆ ಕಟ್ಟಿದ್ದೇನೆ. ಕಾಡುಪ್ರದೇಶದಲ್ಲಿ ಅಂಥದ್ದೊಂದು ಆಸ್ಪತ್ರೆ ಕಟ್ಟಿಸಬೇಕೆಂಬುದು ನನ್ನ ಕನಸಾಗಿತ್ತು. ಬಿಜೆಪಿ ಸರ್ಕಾರವಿದ್ದರೂ ಅಂಥ ದೊಡ್ಡ ಆಸ್ಪತ್ರೆ ಕಟ್ಟಿ ತೋರಿಸಿದ್ದೀನಿ. ಜಿಲ್ಲೆಯಲ್ಲೂ ಸುಸಜ್ಜಿತ ಆಸ್ಪತ್ರೆ ಆಗಬೇಕೆಂಬ ಆಸೆ ಇಲ್ಲಿಯ ಜನರದ್ದಿದೆ. ಅದನ್ನು ಮಾಡಲು ಪ್ರಯತ್ನಿಸೋಣʼʼ ಎಂದರು.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲೇ ಇಂಡಿಗೋ, ಏರ್‌ ಇಂಡಿಯಾ ವಿಮಾನ ಡಿಕ್ಕಿ; ಪ್ರಯಾಣಿಕರಿಗೆ ಶಾಕ್!

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಡಬಲ್ ಎಂಜಿನ್ ಸರ್ಕಾರವಿದ್ದರೂ ಬಿಜೆಪಿಗರಿಂದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಆಗಿಲ್ಲ. ಸುಳ್ಳು ಹೇಳುವುದಷ್ಟೇ ಬಿಜೆಪಿಗರ ಕೆಲಸವಾಗಿದೆ. ಈಗಾಗಲೇ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರೊಂದಿಗೆ ಸುಸಜ್ಜಿತ ಇನ್ನೊಂದು ಆಸ್ಪತ್ರೆ ಕೂಡ ಶೀಘ್ರವೇ ನಿರ್ಮಾಣವಾಗಲಿದೆ. ನಮ್ಮ ಪಕ್ಷ ಒಬ್ಬ ವೈದ್ಯರನ್ನೇ ಈಗ ಲೋಕಸಭಾ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರ ಆಸೆ ಕೂಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವುದಾಗಿದೆ ಎಂದರು.

ಚುನಾವಣಾ ಪೂರ್ವ ಗ್ಯಾರಂಟಿ ಕಾರ್ಡ್ ಕೊಟ್ಟು ಮತ ಕೇಳಿದ್ದೆವು. ಈ ಬಾರಿ ಅದೇ ಗ್ಯಾರಂಟಿ ಯೋಜನೆಯ ಆಧಾರದಲ್ಲಿ ನಾವು ಮತ ಕೇಳಬೇಕಿದೆ. 30 ವರ್ಷ ಸಂಸತ್‌ನಲ್ಲಿ ಒಂದೇ ಒಂದು ಬಾರಿ ನಮ್ಮ ಜಿಲ್ಲೆಯ ಹೆಸರು ಕೇಳಿ ಬಂದಿಲ್ಲ. ಅರಣ್ಯ ಅತಿಕ್ರಮಣ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲೇ ಪರಿಹಾರ ಸಿಗಬೇಕಿದೆ. ಜಿಲ್ಲೆಯಲ್ಲಿರುವ ಅನೇಕ ಸಮಸ್ಯೆಗಳು ಕೂಡ ಕೇಂದ್ರದಿಂದ ಪರಿಹಾರವಾಗಬೇಕಿದೆ. ಅದಕ್ಕಾಗಿ ನಮ್ಮ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಆಯ್ಕೆ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಸೈಲ್, ಕೆಪಿಸಿಸಿ ಸದಸ್ಯ ರಮಾನಂದ ನಾಯಕ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ ಮಾತನಾಡಿದರು.

ಇದನ್ನೂ ಓದಿ: Job Alert: ಎಸ್‌ವಿಸಿ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಏ. 9ರೊಳಗೆ ಅರ್ಜಿ ಸಲ್ಲಿಸಿ

ಈ ವೇಳೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಪ್ರಮುಖರಾದ ಜಿ.ಎಂ.ಶೆಟ್ಟಿ, ನಾರಾಯಣ ನಾಯಕ, ಬಿ.ಡಿ.ನಾಯಕ, ಶಂಭು ಶೆಟ್ಟಿ, ನವಾಜ್ ಶೇಖ್, ಆರ್.ಎಚ್.ನಾಯ್ಕ, ವಿನೋದ ನಾಯಕ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version