ಕಾರವಾರ: ಜಿಲ್ಲೆಯಲ್ಲಿನ ಮಾಜಿ ಯೋಧರು, ಅಶಕ್ತರು ಮತ್ತು ವಸತಿ ಹೀನರಿಗೆ ಜೀವನ ನಿರ್ವಹಣೆಗೆ ಭೂಮಿ ಒದಗಿಸುವ ಕುರಿತಾಗಿ, ಜಿಲ್ಲೆಯ (Uttara Kannada News) ಎಲ್ಲಾ ತಾಲೂಕುಗಳ ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಲಭ್ಯವಿರುವ ಖಾಲಿ ಜಮೀನಿನ ಕುರಿತು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸೂಚಿಸಿದರು.
ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ಗಳೊಂದಿಗೆ ಶುಕ್ರವಾರ ನಡೆದ, ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತೀ ವರ್ಷ ಜುಲೈ 1 ಕ್ಕೆ ಜಿಲ್ಲೆಯಲ್ಲಿ ಲಭ್ಯವಿರುವ ಖಾಲಿ ಜಮೀನಿನ ಕುರಿತಂತೆ ಘೋಷಣೆ ಮಾಡುವುದು ಅತ್ಯಗತ್ಯವಾಗಿದ್ದು, ಇದರಿಂದಾಗಿ ಲಭ್ಯವಿರುವ ಖಾಲಿ ಭೂಮಿಯನ್ನು, ದೇಶ ಸೇವೆಗಾಗಿ ಜೀವನ ಮುಡಿಪಾಗಿಟ್ಟು ನಿವೃತ್ತರಾದ ಮತ್ತು ವಿವಿಧ ಕಾರ್ಯಚರಣೆಗಳಲ್ಲಿ ಭಾಗವಹಿಸಿ ವಿಕಲಚೇತನರಾದ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಜಿಲ್ಲೆಯಲ್ಲಿನ ಅಶಕ್ತರು ಮತ್ತು ವಸತಿಹೀನರಿಗೆ ಅವರು ಕೋರಿಕೆಗೆ ತಕ್ಕಂತೆ ಅಲ್ಲವಾದರೂ ಕನಿಷ್ಠ ಅವಶ್ಯಕತೆ ಪೂರೈಸಿಕೊಳ್ಳಲು ಅಗತ್ಯವಿರುವ ಪ್ರಮಾಣದ ಭೂಮಿ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ಗಳು ಜುಲೈ 1 ರೊಳಗೆ ತಮ್ಮ ವ್ಯಾಪ್ತಿಯಲ್ಲಿ ಲಭ್ಯವಿರುವ ಖಾಲಿ ಜಮೀನಿನ ಘೋಷಣೆ ಮಾಡುವಂತೆ ತಿಳಿಸಿದರು.
ಇದನ್ನೂ ಓದಿ: Air Wing NCC: ಏರ್ ವಿಂಗ್ ಎನ್‌ಸಿಸಿ ಸೇರಲು ಅರ್ಜಿ ಆಹ್ವಾನ; ಜುಲೈ 9 ಕೊನೆಯ ದಿನ
ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿನ ಖಾಲಿ ಇರುವ ಸರ್ಕಾರಿ ಭೂಮಿಯನ್ನು ಸರ್ಕಾರಿ ಉದ್ದೇಶಗಳಿಗೆ ಅಗತ್ಯವಿದ್ದಲ್ಲಿ, ಆ ಯೋಜನೆಗೆ ಅಗತ್ಯವಿರುವ ಪ್ರಮಾಣದ ಭೂಮಿಯನ್ನು ಕಾಯ್ದಿರಿಸಿ, ಉಳಿದ ಭೂಮಿಯನ್ನು ಘೋಷಣೆ ಮಾಡುವಂತೆ ಹಾಗೂ ಯಾವುದೇ ಕಾರಣಕ್ಕೂ ಲಭ್ಯ ಜಮೀನಿನ ಮಾಹಿತಿಯನ್ನು ಮರೆಮಾಚದಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಶೇ.80 ರಷ್ಟು ಅರಣ್ಯ ಪ್ರದೇಶವಿದ್ದು, ಶೇ.20 ರಷ್ಟು ಮಾತ್ರ ಭೂ ಪ್ರದೇಶವಿದ್ದು, ಇರುವ ಭೂ ಪ್ರದೇಶವನ್ನು ಅರ್ಹರಿಗೆ, ನ್ಯಾಯಯುತವಾಗಿ, ಸಾಧ್ಯವಾದಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವಂತೆ ಅವರು ತಿಳಿಸಿದರು.
ಪ್ರಸ್ತುತ ಮಳೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಜೀವ ಹಾನಿಯಾಗದಂತೆ ಎಚ್ಚರವಹಿಸಿ. ಈಗಾಗಲೇ ಗುರುತಿಸಲಾಗಿರುವ ಗುಡ್ಡ ಕುಸಿತ ಮತ್ತು ಅಪಾಯಕಾರಿ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಅಗತ್ಯ ಎಚ್ಚರಿಕೆ ನೀಡಿ, ಅವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಿ. ಅವರಿಗೆ ಅವರ ವಾಸದ ಸಮೀಪದಲ್ಲಿನ ಸೂಕ್ತ ಸುರಕ್ಷಿತ ಸ್ಥಳಗಳನ್ನು ಗುರುತಿಸಿ ಮಾಹಿತಿ ನೀಡಿ, ಆ ಸ್ಥಳಗಳಲ್ಲಿ ಅವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮನೆ ಕುಸಿತ, ಕೊಟ್ಟಿಗೆ ಹಾನಿ ಮತ್ತು ಜಾನುವಾರು ಸಾವು ಪ್ರಕರಣಗಳಿಗೆ ಶೀಘ್ರದಲ್ಲಿ ಪರಿಹಾರ ವಿತರಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ವಿಕೋಪ ಪರಿಹಾರ ಧನ ವಿತರಣೆಗೆ ಯಾವುದೇ ಅನುದಾನದ ಕೊರತೆಯಿಲ್ಲ, ಎಲ್ಲಾ ತಾಲೂಕುಗಳಲ್ಲಿ ಪ್ರಸ್ತುತ ಲಭ್ಯವಿರುವ ಅನುದಾನವನ್ನು ವೆಚ್ಚ ಮಾಡಿ, ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಕೋರಿಕೆ ಸಲ್ಲಿಸಿದಲ್ಲಿ, ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.
ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ತುರ್ತು ರಕ್ಷಣೆಗಾಗಿ ತೆರದಿರುವ ಕಂಟ್ರೋಲ್ ರೂಂ ಗಳಲ್ಲಿ ಸಿಬ್ಬಂದಿ 24*7 ಕಾರ್ಯನಿರ್ವಹಿಸುವಂತೆ ಹಾಗೂ ಯಾವುದೇ ಪ್ರಾಕೃತಿಕ ವಿಕೋಪಗಳು ಸಂಭವಿಸಿದಲ್ಲಿ ಪಂಚಾಯಿತಿ ಅಭಿವೃಧ್ದಿ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ, ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಸಾರ್ವಜನಿಕರಿಗೆ ಅಗತ್ಯ ನೆರವು ನೀಡುವಂತೆ ತಿಳಿಸಿದರು.
ಇದನ್ನೂ ಓದಿ: Heavy Rain: ಭಾರೀ ಮಳೆಗೆ ಕುಸಿದು ಬಿದ್ದ ರಾಜ್‌ಕೋಟ್ ವಿಮಾನ ನಿಲ್ದಾಣ ಹೊರಭಾಗದ ಛಾವಣಿ
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಹಾಗೂ ಜಿಲ್ಲೆಯ ತಹಸೀಲ್ದಾರ್‌ಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದರು.