Site icon Vistara News

Uttara Kannada News: ವಿಶ್ವದರ್ಶನ ಪ್ರಕಾಶನದ ʼನಟ್ಟಿರುಳುʼ ಕವನ ಸಂಕಲನ, ತ್ರಿಪುರಾಂಬಿಕೆ ಧ್ವನಿಸುರುಳಿ ಲೋಕಾರ್ಪಣೆ

Vishwadarshan Education Institute President Hariprakash Chagammane spoke in Vishwadarshan Publication Nattirulu poetry collection and Tripurambike audio reel Release programme

ಯಲ್ಲಾಪುರ: ಕವಿಯ (Poet) ಆಲೋಚನೆಗಳನ್ನು ಕವನದ ಮೂಲಕ ರೂಪ ನೀಡುತ್ತಾನೆ. ಆದರೆ ಅದನ್ನು ಓದುಗ ಹೇಗೆ ಸ್ವೀಕರಿಸುತ್ತಾನೆ ಎನ್ನುವುದು ಆತನ ಆಲೋಚನೆಗೆ ಬಿಟ್ಟಿದ್ದು. ವಿಭಿನ್ನ ಸನ್ನಿವೇಶದಲ್ಲಿ ವಿಭಿನ್ನ ಅರ್ಥವನ್ನು ಮೂಡಿಸುವಂತಹ ಗಟ್ಟಿತನ ಈ ಕವನ ಸಂಕಲನಕ್ಕಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್‌ ಕೋಣೆಮನೆ (Uttara Kannada News) ಹೇಳಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಸೋಮವಾರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮುಕ್ತಾ ಶಂಕರ ರಚಿಸಿದ ವಿಶ್ವದರ್ಶನ ಪ್ರಕಾಶನದ ʼನಟ್ಟಿರುಳುʼ ಕವನ ಸಂಕಲನವನ್ನು ಬಿಡುಗಡೆಗೊಳಿಸಿ, ಬಳಿಕ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಥೆಯಲ್ಲಿ ನಡೆದ ಅತ್ಯಂತ ವಿಶೇಷವಾದ ಕಾರ್ಯಕ್ರಮ ಇದಾಗಿದೆ. ನಮ್ಮ ಸಂಸ್ಥೆಯು ಪ್ರತಿಭೆಗಳ ಸಂಗಮ. ಅಂತಹ ಬಹುಮುಖ ಪ್ರತಿಭೆ ಮುಕ್ತಾ ಶಂಕರ್ ಅವರು. ನಮ್ಮ ವಿಶ್ವದರ್ಶನ ಪ್ರಕಾಶನದ ಮೂಲಕ ಇನ್ನಷ್ಟು ಕೃತಿಗಳನ್ನು ಹೊರತರುವ ಪ್ರೇರಣೆಗೆ ನಮ್ಮೆಲ್ಲ ಸಿಬ್ಬಂದಿಗಳು ಬಲ ನೀಡಬೇಕು. ಸಾಹಿತ್ಯ ಮತ್ತು ಸಂಸ್ಕೃತಿ ಒಂದಕ್ಕೊಂದು ಸಂಬಂಧ ಹೊಂದಿದೆ. ನಮ್ಮ ಸಂಸ್ಕೃತಿಯೇ ಸಾಹಿತ್ಯಗಳ ಮೂಲವಾಗಿದೆ ಎಂದರೆ ತಪ್ಪಾಗಲಾರದು. ನಮ್ಮ ಸಂಸ್ಥೆಯ ಮೂಲಕ ಇನ್ನಷ್ಟು ಪ್ರತಿಭೆಗಳು ಮುನ್ನೆಲೆಗೆ ಬರುವಂತಾಗಲಿ ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಇದನ್ನೂ ಓದಿ: UPI service: ಶ್ರೀಲಂಕಾ, ಮಾರಿಷಸ್‌ನಲ್ಲಿ ಭಾರತೀಯ ಯುಪಿಐ ಸೇವೆ ಆರಂಭ

ತ್ರಿಪುರಾಂಬಿಕೆ ಧ್ವನಿಸುರುಳಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯರಾದ ಡಿ. ಶಂಕರ್ ಭಟ್ ಮಾತನಾಡಿ, ಇಂದು ಕವಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತಸದ ಸಂಗತಿ. ಕವನದಲ್ಲಿ ಭಕ್ತಿ ಮೂಡಬೇಕು ಎಂದರೆ ಅತ್ಯಂತ ಮೃದುವಾದ ಸಾಹಿತ್ಯದಿಂದ ಕೂಡಿರಬೇಕು. ಸರಳತೆಯಿಂದ ಕೂಡಿದ ಕವನಗಳು ಅತ್ಯಂತ ಹೆಚ್ಚಿನ ಜನರನ್ನು ತಲುಪಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಅತ್ಯಂತ ಪ್ರತಿಭಾನ್ವಿತ ಮುಕ್ತಾ ಶಂಕರ ಅವರಿಂದ ಸಾಹಿತ್ಯಿಕ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ಇಂದು ಒದಗಿದೆ. ಅವರ ಈ ಪ್ರಯತ್ನ ಮಹಿಳಾ ಕ್ಷೇತ್ರಕ್ಕೆ ಬಲ ತುಂಬಿದೆ. ಎಲ್ಲಾ ಕ್ಷೇತ್ರಗಳಂತೆ ಸಾಹಿತ್ಯದ ಕ್ಷೇತ್ರದಲ್ಲೂ ಮಹಿಳೆಯರು ಮುಂಚೂಣಿಯಲ್ಲಿ ಇದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ನಮ್ಮ ಗ್ರಹಿಕೆಯ ಸೂಕ್ಷ್ಮ ವಿಶ್ಲೇಷಣೆಯೇ ಸಾಹಿತ್ಯ. ಓದುವಂತಹ ಅಭಿರುಚಿಯನ್ನು ಇಂದಿನ ಯುವ ಪೀಳಿಗೆಯಲ್ಲಿ ಮೂಡಿಸಬೇಕು ಎಂದರು.

ಇದನ್ನೂ ಓದಿ: Cauvery Dispute: ತಮಿಳುನಾಡು ವಾದಕ್ಕೆ CWRC ಅಸ್ತು; ಮಾರ್ಚ್‌ವರೆಗೆ ಕಾವೇರಿ ನೀರು ಬಿಡುಗಡೆಗೆ ಸೂಚನೆ

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡಿನ ಕನ್ನಡ ಸಾಹಿತ್ಯ ಸಂಶೋಧನಾ ವಿದ್ಯಾರ್ಥಿ ಶಶಾಂಕ ಎಚ್‌.ವಿ. ಕೃತಿ ಪರಿಚಯಿಸಿ ಮಾತನಾಡಿ, ಸಾಹಿತ್ಯ ಸಂಗೀತಕ್ಕೆ ಬೆಲೆ ಇರುವಂತಹ ಮಲೆನಾಡಿನ ಸುಂದರ ತಾಣ ಯಲ್ಲಾಪುರ. ಕವಯಿತ್ರಿ ತನ್ನ ಕೃತಿಯಲ್ಲಿ ತನ್ನೂರನ್ನು, ತಮ್ಮ ಜೀವನದ ಮಜಲುಗಳನ್ನು ಹಾಗೂ ಭಾರತೀಯ ಸಂಸ್ಕೃತಿಯನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾರೆ ಎಂದರು. ವಿಶ್ವದರ್ಶನ ಮೀಡಿಯಾ ಸ್ಕೂಲ್‌ನ ಪ್ರಾಚಾರ್ಯ ನಾಗರಾಜ ಇಳೇಗುಂಡಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಕ್ತಾ ಶಂಕರ್, ನನ್ನೆಲ್ಲ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಈ ಕೃತಿ ಬಿಡುಗಡೆಗೊಳ್ಳುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಎಲ್ಲರ ಸಹಾಯ ಸಹಕಾರದಿಂದ ಇಂದು ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ ಎಂದರು.

ಇದನ್ನೂ ಓದಿ: Aditya Narayan: ಕಾರ್ಯಕ್ರಮ ವೇಳೆ ಅಭಿಮಾನಿಯನ್ನು ಹೊಡೆದು ಮೊಬೈಲ್​ ಕಸಿದು ಎಸೆದ ಖ್ಯಾತ ಗಾಯಕ!

ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪಿಯುಸಿ ವಿಭಾಗದ ಪ್ರಾಂಶುಪಾಲ ಡಿ.ಕೆ. ಗಾಂವ್ಕರ್ ಸ್ವಾಗತಿಸಿದರು. ಪ್ರೇಮಾ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿದರು. ಟಿ. ಶಂಕರ್ ಭಟ್ ವಂದಿಸಿದರು.

Exit mobile version