ಯಲ್ಲಾಪುರ: ಅರಣ್ಯ (Forest) ಬೆಂಕಿ ಅವಘಡದ ವಿಷಯದಲ್ಲಿ ನಮ್ಮ ಯಲ್ಲಾಪುರ ಅರಣ್ಯ ವಿಭಾಗಕ್ಕೆ ಕಳೆದ ಸಾಲು ಒಂದು ಕಹಿ ನೆನಪಾಗಿ ಉಳಿದಿದೆ. ಅದಕ್ಕೆ ಅನೇಕ ಕಾರಣಗಳಿವೆ. ಆದರೂ ಅವುಗಳನ್ನು ತಡೆಗಟ್ಟುವಲ್ಲಿ ನಮ್ಮ ಸಿಬ್ಬಂದಿ ಹಾಗೂ ಗ್ರಾಮ ಅರಣ್ಯ ಸಿಬ್ಬಂದಿಗಳ ಕಾರ್ಯ ಪ್ರಶಂಸನೀಯ ಎಂದು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಹೇಳಿದರು.
ಪಟ್ಟಣದ ಅರಣ್ಯ ಇಲಾಖೆಯ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬೆಂಕಿಯಿಂದ ಅರಣ್ಯ ರಕ್ಷಣೆ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಲ್ಲಾಪುರ ವಿಭಾಗದ 1.68 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಬೆಂಕಿಯಿಂದ ರಕ್ಷಿಸುವುದು ಸವಾಲಿನ ಕೆಲಸವಾಗಿದೆ. ನಾವೆಲ್ಲ ನಮ್ಮ ಕಾಡೆನ್ನುವ ಬದಲು, ಇದು ನನ್ನ ಕಾಡು, ನಾನು ಇದನ್ನು ರಕ್ಷಿಸುತ್ತೇನೆ ಎನ್ನುವ ಪ್ರಮಾಣ ಮಾಡಬೇಕಿದೆ.
ಇದನ್ನೂ ಓದಿ: CM Siddaramaiah: ಕಳ್ಳತನ ಪ್ರಕರಣ ಹೆಚ್ಚಾದರೆ ಡಿಸಿಪಿಗಳೇ ನೇರ ಹೊಣೆ: ಸಿಎಂ ಸಿದ್ದರಾಮಯ್ಯ
ನಮ್ಮ ಅರಣ್ಯ ವಿಭಾಗದಲ್ಲಿ ಕಳೆದ ಒಂದು ವರ್ಷ ಹೊರತುಪಡಿಸಿ, 5-6 ವರ್ಷಗಳಿಂದ ಅರಣ್ಯವು ಬೆಂಕಿಯಿಂದ ದೂರವಾಗಿತ್ತು. ಈ ಒಂದು ಅರಣ್ಯ ಸಂರಕ್ಷಣೆಯ ಯುದ್ಧದಲ್ಲಿ ತಾಂತ್ರಿಕ ಸೌಲಭ್ಯಗಳು ದೊರೆಯುತ್ತಿರುವುದು ಸಂತಸದ ಸಂಗತಿ. ಪ್ರತಿ ವಲಯದಲ್ಲಿ ಬೆಂಕಿ ತಡೆಗಟ್ಟಲು ಅಗತ್ಯವಿರುವ ಸಲಕರಣೆಗಳನ್ನು ಇಟ್ಟುಕೊಳ್ಳಲಾಗಿದೆ. ನಮಗೆ ಇರುವಂತಹ ಅಡಚಣೆಗಳ ನಡುವೆ ಅರಣ್ಯ ರಕ್ಷಣೆಗೆ ಬದ್ಧರಾಗಿ, ಪರಿಸರವನ್ನು ಭವಿಷ್ಯಕ್ಕಾಗಿ ಕಾಪಾಡಬೇಕಿದೆ ಎಂದು ತಿಳಿಸಿದರು.
ತಾಲೂಕು ಆಸ್ಪತ್ರೆಯ ನೇತ್ರ ತಜ್ಞೆ ಸೌಮ್ಯ ಕೆ.ವಿ., ಬೆಂಕಿ ಅವಘಡ ಸಂಭವಿಸಿದಾಗ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮ ಹಾಗೂ ತುರ್ತು ಚಿಕಿತ್ಸೆಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಯಲ್ಲಾಪುರ ಅರಣ್ಯ ವಿಭಾಗದ ಜೀವ ವೈವಿಧ್ಯತೆಯ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ವಿಎಫ್‌ಸಿ ಸದಸ್ಯರು, ಅಧ್ಯಕ್ಷರು ಸಂವಾದ ನಡೆಸಿದರು. 2024 ರ ಅರಣ್ಯ ಇಲಾಖೆಯ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ನಂತರ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ ನೀಡಿದರು.
ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಬಿ.ವೈ. ನಾಗೇಕರ್, ವಿವಿಧ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Sumit Nagal: ಆಸ್ಟ್ರೇಲಿಯ ಓಪನ್ನಲ್ಲಿ ಇತಿಹಾಸ ಬರೆದ ಭಾರತದ ಸುಮಿತ್ ನಾಗಲ್
ಶಹನವಾಜ್ ಮುಲ್ತಾನಿ ಪ್ರಾರ್ಥಿಸಿದರು. ಯಲ್ಲಾಪುರ ಉಪವಿಭಾಗದ ಎಸಿಎಫ್ ಆನಂದ್ ಎಚ್. ಸ್ವಾಗತಿಸಿದರು. ಕಾತೂರು ಆರ್‌ಎಫ್‌ಓ ಎಂ.ಎಚ್ ನಾಯ್ಕ ವಂದಿಸಿದರು.