ಯಲ್ಲಾಪುರ: ಪಟ್ಟಣದ ಅರಣ್ಯ ಸಭಾಭವನದಲ್ಲಿ ಬುಧವಾರ ಸಂಜೆ 39 ವರ್ಷಗಳ ಸುದೀರ್ಘ ಸೇವೆಯಿಂದ ವಯೋನಿವೃತ್ತಿ ಹೊಂದಿದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ ಅವರಿಗೆ ಯಲ್ಲಾಪುರ ಅರಣ್ಯ ವಿಭಾಗದ ವತಿಯಿಂದ (Uttara Kannada News) ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯಲ್ಲಾಪುರ ಅರಣ್ಯ ವಿಭಾಗದ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ, ಇದೊಂದು ಭಾವುಕ ಕ್ಷಣವಾಗಿದೆ. ಅರಣ್ಯ ಇಲಾಖೆಯಲ್ಲಿ ಆಕಸ್ಮಿಕವಾಗಿ ಸೇರ್ಪಡೆಗೊಂಡ ನಾನು, ನಿರಂತರತೆಯ ಮೂಲಕ ಅನೇಕ ಏರುಪೇರುಗಳನ್ನು ದಾಟಿ ನನ್ನ ಸುದೀರ್ಘ ಸೇವೆ ಸಲ್ಲಿಸಿದ್ದೇನೆ.
ನನ್ನ ಇಲಾಖೆಯ ಹಿರಿಯ ಅಧಿಕಾರಿಗಳ ಸಹಕಾರ, ಸಹೋದ್ಯೋಗಿಗಳ ಬೆಂಬಲಕ್ಕೆ ನಾನು ಸದಾ ಚಿರಋಣಿ. ನನ್ನ ಸೇವಾವಧಿಯಲ್ಲಿ ನನಗೆ ಸಹಕರಿಸಿದ ಸರ್ವರಿಗೂ ಕೃತಜ್ಞನಾಗಿದ್ದೇನೆ. ಯಲ್ಲಾಪುರದಂತಹ ಬಲಿಷ್ಠ ತಂಡದಲ್ಲಿ ನಿವೃತ್ತಿ ಹೊಂದುತ್ತಿರುವುದು ನನ್ನ ಸೌಭಾಗ್ಯ ಎಂದು ತಿಳಿಸಿದರು.
ಇದನ್ನೂ ಓದಿ: Central Budget 2024: ವಿತ್ತ ಸಚಿವೆ ಮಂಡಿಸಿದ ಬಜೆಟ್ ತಯಾರಿಯ ಹಿಂದಿನ ಪ್ರಮುಖ ವ್ಯಕ್ತಿಗಳು ಇವರು
ನೂತನ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಿ. ಪಿ. ಹರ್ಷಾಬಾನು ಮಾತನಾಡಿ, ಎಸ್.ಜಿ. ಹೆಗಡೆ ಅವರು 39 ವರ್ಷಗಳ ಸೇವೆಯಲ್ಲಿ ಅಪಾರ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದಾರೆ. ಮನೆಯವರ ಸಹಕಾರದಿಂದ ಮಾತ್ರ ಈ ರೀತಿಯ ತೊಡಗುವಿಕೆ ಸಾಧ್ಯ. ಉತ್ತರಕನ್ನಡದಲ್ಲಿ ಸೇವೆ ಸಲ್ಲಿಸುವುದು ಒಂದು ಸೌಭಾಗ್ಯವಾಗಿದ್ದು, ಇದಕ್ಕಾಗಿ 6 ತಿಂಗಳುಗಳ ಕಾಲ ಕಾದಿದ್ದೇನೆ. ಮುಂಬರುವ ದಿನಗಳಲ್ಲಿ ಎಲ್ಲರ ಸಹಯೋಗದೊಂದಿಗೆ ಉತ್ತಮ ರೀತಿಯಲ್ಲಿ ಇಲಾಖೆಯನ್ನು ಮುನ್ನಡೆಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಹಳಿಯಾಳ ಡಿಸಿಎಫ್ ಪ್ರಶಾಂತ ಕೆ.ಸಿ. ಮಾತನಾಡಿ, ನಮ್ಮ ಕೆನರಾ ವೃತ್ತದ ಸಂಪೂರ್ಣ ಮಾಹಿತಿಯುಳ್ಳ ಹಿರಿಯರಾದ ಎಸ್.ಜಿ. ಹೆಗಡೆ ಅವರು, ನಮ್ಮ ಇಲಾಖೆಯ ಕುರಿತು ಅಪಾರ ಗೌರವವುಳ್ಳವರಾಗಿದ್ದರು. ನಮ್ಮನ್ನೆಲ್ಲ ಮಾರ್ಗದರ್ಶನ ಮಾಡಿದ ಇವರಿಗೆ ನಾವೆಲ್ಲ ಸದಾ ಅಭಾರಿ. ಇವರ ನಿವೃತ್ತಿಯಿಂದ ಇಲಾಖೆಗೆ ಒಂದು ದೊಡ್ಡ ನಷ್ಟ ಆದಂತೆ. ನಿವೃತ್ತಿ ನಂತರವೂ ಯುವ ಅಧಿಕಾರಿಗಳಿಗೆ ತಮ್ಮ ಮಾರ್ಗದರ್ಶನ ಸದಾ ಇರಲಿ ಎಂದರು.
ಮಲೆನಾಡು ಕೃಷಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿದರು.
ಇದೇ ವೇಳೆ ಎಸ್.ಜಿ. ಹೆಗಡೆ ದಂಪತಿಯನ್ನು ಗೌರವಿಸಿ, ಸನ್ಮಾಸಲಾಯಿತು ಹಾಗೂ ನೂತನ ಡಿಸಿಎಫ್ ಜಿ.ಪಿ. ಹರ್ಷಾಬಾನು ಅವರನ್ನು ಸ್ವಾಗತಿಸಲಾಯಿತು.
ಇದನ್ನೂ ಓದಿ: Karnataka Weather : ಬೆಳಗಾವಿಯಲ್ಲಿ ಕನಿಷ್ಠ ಉಷ್ಣಾಂಶ ದಾಖಲು; ನಾಳೆ ಹೇಗಿರಲಿದೆ ವಾತಾವರಣ
ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ನಿವೃತ್ತ ಅಧಿಕಾರಿಗಳು, ಶಿರಸಿ ಅರಣ್ಯ ವಿಭಾಗದ ಅಧಿಕಾರಿಗಳು, ಗ್ರಾಮ ಅರಣ್ಯ ಸಮಿತಿ ಸದಸ್ಯರು, ಅರಣ್ಯ ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪರಶುರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಜಾನನ ಹೆಗಡೆ ಪ್ರಾರ್ಥಿಸಿದರು. ಎಸಿಎಫ್ ಆನಂದ್ ಎಚ್. ಎ. ಸ್ವಾಗತಿಸಿದರು. ಶ್ರೀಶೈಲ ಐನಾಪುರ ನಿರ್ವಹಿಸಿದರು. ಅಮಿತ್ ಚೌಹಾಣ್ ವಂದಿಸಿದರು.