Site icon Vistara News

Uttara Kannada News: ಯುವಚೇತನಗಳು ಗುರುತತ್ವಾಕರ್ಷಣೆಗೆ ಒಳಗಾಗಬೇಕು: ರಾಘವೇಶ್ವರ ಶ್ರೀ

Gokarna Shri Raghaveshwar Bharati Mahaswamiji pravachan

ಗೋಕರ್ಣ: ಯುವ ಮನಸ್ಸುಗಳನ್ನು (Young Mind) ಗುರುತತ್ವಾಕರ್ಷಣೆಗೆ ಗುರಿಪಡಿಸಿದಾಗ ಇಡೀ ಯುವಚೇತನ ಸತ್ಪಥದಲ್ಲಿ ಸುತ್ತುತ್ತಿರುತ್ತದೆ ಎಂದು ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಕುಮಟಾ ತಾಲೂಕಿನ ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಯುವ ಸಮಾವೇಶದಲ್ಲಿ ಶ್ರೀಸಂದೇಶ ಅನುಗ್ರಹಿಸಿದ ಅವರು, “ಮಠದ ಭವಿಷ್ಯಕ್ಕೆ ಯುವಕರು ಬೇಕು. ಯುವಕರ ಭವಿಷ್ಯಕ್ಕಾಗಿಯೂ ಮಠ ಬೇಕು. ಬಾಲ್ಯದಲ್ಲೇ ಮಕ್ಕಳನ್ನು ಮಠಕ್ಕೆ ಕರೆತಂದು, ನಮ್ಮ ಆಚಾರ ವಿಚಾರಗಳು, ಸಂಸ್ಕೃತಿ ಪರಂಪರೆ, ಆಹಾರ ವಿಹಾರಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಮಠಮಾನ್ಯಗಳು ಬೀರುವ ಒಳ್ಳೆಯ ಪ್ರಭಾವವನ್ನು ಮಕ್ಕಳ ಮೇಲೆ ಬೇರೆ ಯಾರೂ ಬೀರಲು ಸಾಧ್ಯವಿಲ್ಲ” ಎಂದು ತಿಳಿಸಿದರು.

ಯುವ ಚೇತನಗಳಿಗೆ ದಿವ್ಯತೆ ಸಿಗುವುದು ಸತ್ಪಥದಲ್ಲಿ ನಡೆದಾಗ. ವ್ಯವಸ್ಥೆಗೆ ಪೂರಕವಾಗಿ ಬದುಕಬೇಕು. ಯೌವ್ವನ ಎನ್ನುವುದು ಬದುಕು ಕಟ್ಟುವ ಕಾಲವೂ ಹೌದು; ಬದುಕು ಮುರಿಯುವ ಘಟ್ಟವೂ ಹೌದು. ಸತ್ಪಥದಲ್ಲಿ ನಡೆದರೆ ರಾಮನಾಗುತ್ತಾನೆ, ದುಷ್ಟಹಾದಿ ಹಿಡಿದರೆ ರಾವಣರಾಗುತ್ತಾರೆ. ನಮ್ಮ ಶಕ್ತಿ ಸತ್ಕಾರ್ಯಗಳಿಗೆ ಬಳಕೆಯಾಗಬೇಕು ಎಂದು ಆಶಿಸಿದರು.

ಇದನ್ನೂ ಓದಿ: G20 Summit 2023: ಮತ್ತೆ ಅಮೆರಿಕಕ್ಕೆ ಜಿ20 ಅಧ್ಯಕ್ಷತೆ! ಚೀನಾದಿಂದ ತೀವ್ರ ಆಕ್ಷೇಪ

ಯೌವನ, ಉತ್ಸಾಹ, ಶಕ್ತಿ, ನವೀನತೆ ಯೌವನದ ಗುಣಗಳು. ವಯಸ್ಸಾದ ಮೇಲೆ ಸೇವೆ ಮಾಡುತ್ತೇವೆ ಎನ್ನುವ ಭಾವನೆ ಬಿಟ್ಟು, ತ್ಯಾಗ ಸೇವೆಯ ಮೂಲಕ ಸಮಾಜ ಕಟ್ಟುವ ಕಾರ್ಯವನ್ನು ಯುವಕರು ಮಾಡಬೇಕು. ದುಷ್ಟಶಕ್ತಿಗಳ ವಿರುದ್ಧ ಸೇನಾಪತಿಗಳಾಗಿ ಹೋರಾಡಬೇಕು. ಧರ್ಮಯೋಧರಾಗಿ ರಾಷ್ಟ್ರಕಟ್ಟುವ ಕಾರ್ಯಕ್ಕೆ ಅಣಿಯಾಬೇಕು ಎಂದು ಸೂಚಿಸಿದರು.

ಶ್ರೀಮಠದಿಂದ ವಿಷ್ಣುಗುಪ್ತ ಸನ್ಮಾನ ಸ್ವೀಕರಿಸಿ ಮಾತನಾಡಿದ ಇಸ್ರೋದ ಬಾಹ್ಯಾಕಾಶ ವಿಭಾಗದ ಹಿರಿಯ ವಿಜ್ಞಾನಿ ಡಾ.ರಾಧಾಕೃಷ್ಣ ವಾಟೆಡ್ಕ, “ನನಗೆ ಸಂದ ಗೌರವ ಇಸ್ರೋಗೆ ಸಮರ್ಪಣೆ. 140 ಕೋಟಿ ಭಾರತೀಯರ ಆಶೋತ್ತರಗಳು, ಪರಮಪೂಜ್ಯರ ಅನುಗ್ರಹ, ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ವಿಕ್ರಂ ಸಾರಾಭಾಯಿ, ಯು.ಆರ್.ರಾವ್ ಅವರ ದೂರದೃಷ್ಟಿಯಿಂದಾಗಿ ಇಸ್ರೋ ಇಂದು ಜಾಗತಿಕ ಮಟ್ಟದಲ್ಲಿ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯವಾಗಿದೆ” ಎಂದು ಹೇಳಿದರು.

ಪ್ರಾಚೀನ ಪರಂಪರೆಯನ್ನು ಆಧರಿಸಿದ ವಿಜ್ಞಾನ ಸರ್ವಶ್ರೇಷ್ಠ. ಇಡೀ ವಿಶ್ವಕ್ಕೆ ಧರ್ಮ ಎಂಬ ಅದ್ಭುತ ವಿಜ್ಞಾನವನ್ನು ನೀಡಿದ್ದು ನಮ್ಮ ಹೆಮ್ಮೆ. ಪ್ರಾಚೀನ ಹಾಗೂ ಆಧುನಿಕ ಶಿಕ್ಷಣದ ಶ್ರೇಷ್ಠ ಸಂಯೋಗವನ್ನು ನೀಡುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮುಂದಿನ ದಿನಗಳಲ್ಲಿ ದೇಶದ ಅದ್ಭುತ ಸಂಸ್ಥೆಯಾಗಿ ಬೆಳೆಯುವುದು ನಿಸ್ಸಂದೇಹ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Dharwad Krishi Mela: ಕೃಷಿ ಮೇಳಗಳು ಜಾತ್ರೆಗಳಾಗದೇ ವ್ಯವಸಾಯಕ್ಕೆ ಯುವಕರನ್ನು ಸೆಳೆಯಬೇಕು: ಸಿಎಂ ಸಿದ್ದರಾಮಯ್ಯ

ಯುವಕರು ಕುತೂಹಲದ ಬೆನ್ನು ಹತ್ತಿದಾಗ ಉತ್ತಮ ಸಾಧನೆ ಮಾಡಲು ಸಾಧ್ಯ. ನಮ್ಮ ಖಗೋಳ ಯೋಜನೆಗಳು, ನಕ್ಷತ್ರಗಳ ಬಗೆಗಿನ ಅಧ್ಯಯನ ಹೀಗೆ ಹಲವು ಕುತೂಹಲಕಾರಿ ಅಂಶಗಳು ಮನುಷ್ಯನ ಜೀವನಕ್ಕೆ ಒಳಿತಾಗುವ ತಂತ್ರಜ್ಞಾನಗಳ ಆವಿಷ್ಕಾರಕ್ಕೂ ಕಾರಣವಾಗಿದೆ ಎಂದು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ್ನಹಳ್ಳಿ ಮಾತನಾಡಿ, “ಸನಾತನ ಧರ್ಮದ ಬಗ್ಗೆ ಆತ್ಮಾಭಿಮಾನ ಎಲ್ಲ ಭಾರತೀಯರಲ್ಲಿ ಇರಬೇಕು. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಹೊರಟವರು ಸರ್ವನಾಶವಾದ ಉದಾಹರಣೆಗಳು ಇತಿಹಾಸದುದ್ದಕ್ಕೂ ಇವೆ. ಸನಾತನ ಧರ್ಮವನ್ನು ಹೀಗಳೆಯುವುದು ಪಾಶ್ಚಾತ್ಯ ದಾಸ್ಯದ ಸಂಕೇತ” ಎಂದರು.

ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದ ನೀರ್ನಳ್ಳಿ ಗಣಪತಿ ಅವರಿಗೆ ಉಂಡೆಮನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪರಂಪರಾ ಗುರುಕುಲದ ಮಕ್ಕಳು ಹಾಡಿದ ಹವ್ಯಕ ಗೀತೆಗೆ ಹಿರಿಯ ಕಲಾವಿದ ನೀರ್ನಳ್ಳಿ ಗಣಪತಿ ಮತ್ತು ಯುವ ಕಲಾವಿದೆ ಶ್ರೀಲಕ್ಷ್ಮಿ ಚಿತ್ರದ ಅಭಿವ್ಯಕ್ತಿ ನೀಡುವ ಗೀತಗಾಯನ ಜುಗಲ್‍ಬಂದಿ ಗಮನ ಸೆಳೆಯಿತು. ಭಟ್ ಅಂಡ್ ಭಟ್ ಯೂಟ್ಯೂಬ್ ಖ್ಯಾತಿಯ ಸುದರ್ಶನ ಬೆದ್ರಡಿ ಮತ್ತು ಮನೋಹರ ಬೆದ್ರಡಿ ಉಪಸ್ಥಿತರಿದ್ದರು.

ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಪ್ರಧಾನ ಕೇಶವ ಪ್ರಕಾಶ ಮುಣ್ಚಿಕಾನ, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ, ಸೇವಾ ಪ್ರಧಾನ ಪ್ರಸನ್ನ ಉಡುಚೆ, ಮುಷ್ಟಿಭಿಕ್ಷೆ ಪ್ರಧಾನ ಹೇರಂಭ ಶಾಸ್ತ್ರಿ, ಪ್ರಾಂತ ಉಪಾಧ್ಯಕ್ಷರಾದ ಜಿ.ಎಸ್.ಹೆಗಡೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಗೋವಿಂದ ಹೆಗಡೆ ಉಪಸ್ಥಿತರಿದ್ದರು. ಶಿಷ್ಯಮಾಧ್ಯಮ ಪ್ರಧಾನ ಗಣೇಶ್ ಜೋಶಿ ಕಾರ್ಯಕ್ರಮ ನಿರೂಪಿಸಿದರು. 11 ಮಂದಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: Leo Movie: 42 ದಿನಗಳ ಮುಂಚೆಯೇ 24 ಗಂಟೆಗಳಲ್ಲಿ 10 ಸಾವಿರ ಮುಂಗಡ ಟಿಕೆಟ್‌ ಬುಕ್‌; ಲಿಯೋ ಹೊಸ ದಾಖಲೆ!

ಯುವಕ-ಯುವತಿಯರಿಗೆ ಹಮ್ಮಿಕೊಂಡಿದ್ದ ‘ಬೆಂಕಿ ಇಲ್ಲದೇ ಅಡುಗೆ’ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ 33 ತಂಡಗಳು ಭಾಗವಹಿಸಿದ್ದವು. ಇದೇ ಸಂದರ್ಭದಲ್ಲಿ ‘ನಾನು ಮತ್ತು ನಮ್ಮ ಮಠ’ ವಿಷಯದ ಬಗ್ಗೆ ಫೋಟೊಗ್ರಫಿ ಸ್ಪರ್ಧೆ ಹಾಗೂ ವಿವಿವಿ ಪರಿಸರ ಎಂಬ ವಿಷಯದ ಬಗ್ಗೆ ವಿಡಿಯೊ ಸ್ಪರ್ಧೆ ಆಯೋಜಿಸಲಾಗಿತ್ತು.

Exit mobile version