ಕಾರವಾರ: ದೇಶದ ಸೈನಿಕರು (Vijay Diwas) ಗಡಿಯಲ್ಲಿ ಭದ್ರತೆ ವಹಿಸಿರುವುದರಿಂದಲೇ ಜನಸಾಮಾನ್ಯರು ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಗಿದೆ ಎಂದು ಐಎನ್‌ಎಸ್ ಕದಂಬ ನೌಕಾನೆಲೆಯ ಮೆಟಿರಿಯಲ್ ಸಂಘಟನೆಯ ಕಮಾಂಡರ್ ವಿಜು ಸ್ಯಾಮ್ಯುಯಲ್ ಹೇಳಿದರು.
ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿರುವ ಚಾಪೆಲ್ ಯುದ್ಧನೌಕೆ ವಸ್ತುಸಂಗ್ರಹಾಲಯ ಆವರಣದಲ್ಲಿ ನಡೆದ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮೇಜರ್ ರಾಮಾ ರಾಘೋಬಾ ರಾಣೆ ಅವರ ಪುತ್ಥಳಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.
1971ರ ಇಂಡೋ-ಪಾಕ್ ಯುದ್ಧವನ್ನು ಗೆದ್ದ ಕಾರಣ ವಿಜಯ ದಿವಸವನ್ನು ಆಚರಿಸಲಾಗುತ್ತದೆ. ಅಂದಿನ ಇತಿಹಾಸವನ್ನು ಯುವ ಜನಾಂಗ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ನಾವೆಲ್ಲ ಸುರಕ್ಷಿತವಾಗಿದ್ದೇವೆ ಎಂದರೆ ಅದಕ್ಕೆ ಸೈನಿಕರೇ ಕಾರಣ ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಮಾತನಾಡಿ, ಕೇವಲ ಯುದ್ಧವಷ್ಟೇ ಅಲ್ಲ ಇಂದು ಹೊಸ ಹೊಸ ಸವಾಲು ದೇಶದ ಮುಂದೆ ಇದೆ. ಇವುಗಳಲ್ಲಿ ಸೈಬರ್ ವಾರ್ ಮುಖ್ಯವಾಗಿದೆ. ಇದು ದೇಶದ ಜನತೆಗೆ ಆತಂಕದ ಸ್ಥಿತಿ ತಂದಿಡುವ ಸಾಧ್ಯತೆ ಇದೆ. ಯುವಜನ ಅದನ್ನು ಎದುರಿಸಲು ಸಿದ್ಧವಾಗಿರಬೇಕು. ಶಿಸ್ತು ಎನ್ನುವುದು ಕೇವಲ ಸೈನಿಕರಿಗೆ ಮಾತ್ರವಲ್ಲ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದು ಮುಖ್ಯ. ಕೇವಲ ಯುದ್ಧದಲ್ಲಿ ಗೆದ್ದ ವಿಚಾರವನ್ನಷ್ಟೇ ಅಲ್ಲದೆ, ಬಾಂಗ್ಲಾ ಯುಮೋಚನೆ ವೇಳೆ ಶರಣಾಗತರಾದ ಬಾಂಗ್ಲಾ ಸೈನಿಕರನ್ನು ಗೌರವಪೂರ್ವಕವಾಗಿ ವಾಪಸ್ ಕಳಿಸಿದ್ದೇವೆ. ಇದು ನಮ್ಮ ಸಂಸ್ಕೃತಿಯಾಗಿದೆ. ಅದಕ್ಕೆ ನಾವು ಹೆಮ್ಮೆಪಡಬೇಕು ಎಂದರು.
ಇದನ್ನೂ ಓದಿ | Kannada Sahitya Sammelana | ಕನ್ನಡ ರಥದ ಅದ್ಧೂರಿ ಮೆರವಣಿಗೆ; ಸಮಸ್ತ ಕನ್ನಡಿಗರಿಗೆ ಅಕ್ಷರ ಜಾತ್ರೆಗೆ ಆಹ್ವಾನ ನೀಡಿದ ಕಸಾಪ
ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ ಮಾತನಾಡಿ, ಇಂಡೋ-ಪಾಕ್ ಯುದ್ಧದಲ್ಲಿ ಕಾರವಾರದವರೂ ಇದ್ದರು ಎನ್ನುವುದು ಹೆಮ್ಮೆಯ ಸಂಗತಿ. ಯುವ ಪೀಳಿಗೆ ಸೈನ್ಯಕ್ಕೆ ಸೇರಿ ದೇಶದ ಸೇವೆ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಸಂಬಂಧಿಗಳಾದ ಮನೋರತಿಭಾಯಿ ಹಣಕೋಣ, ರೇಷ್ಮಾ ಜಗನಕೊಪ್ಪ ಹಳಿಯಾಳ, ಗೀತಾ ರಮೇಶ ಕೋಳಂಬರ್ ಕಠಿಣಕೋಣ, ಸೈನಿಕ ವಿಜಯಾನಂದ ನಾಯ್ಕ ತಾಯಿ ವಿದ್ಯಾ ಎಸ್.ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿವೃತ ಸೇನಾಧಿಕಾರಿ ಎಸ್.ಎಫ್.ಗಾಂವಕರ್, ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಇಂದುಪ್ರಭಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಪಂ ಸಿಇಒ ಈಶ್ವರ ಕುಮಾರ್ ಖಂಡೊ, ಎನ್‌ಸಿಸಿ ಕಮಾಡಿಂಗ್ ಆಫೀಸರ್ ಸತ್ಯನಾಥ ಭೋಸ್ಲೇ ಇದ್ದರು.
ಇದನ್ನೂ ಓದಿ | Bharat jodo yatre | KGF-2 ಹಾಡಿನ ವಿವಾದ: ರಾಹುಲ್ ಗಾಂಧಿ ಸಹಿತ ಮೂವರಿಗೆ ಹೈಕೋರ್ಟ್ ರಿಲೀಫ್