ಯಲ್ಲಾಪುರ: ಖ್ಯಾತ ಪತ್ರಕರ್ತರಾದ ಹರಿಪ್ರಕಾಶ್ ಕೋಣೆಮನೆ (Vistara News Launch) ಅವರು ಪತ್ರಿಕೋದ್ಯಮದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ಮಾಧ್ಯಮಗಳು ಎಷ್ಟೇ ಹುಟ್ಟಲಿ, ಅವುಗಳು ತಮ್ಮ ಗುಣಮಟ್ಟ ಕಾಯ್ದುಕೊಳ್ಳಬೇಕು. ಸಮಾಜಮುಖಿ ಚಿಂತನೆಯ ಸುದ್ದಿಗಳನ್ನು ಬಿತ್ತರಿಸಬೇಕು. ಈ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್ ಮಾದರಿ ಆಗಲಿ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ತಾಲೂಕಿನ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಶ್ರೀಮದ್ ಗಂಗಾಧರೇಶ್ವರ ಸ್ವಾಮೀಜಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ ಅವರು ಮಾತನಾಡಿ, ಮಾಧ್ಯಮಗಳು ಪ್ರಾಮಾಣಿಕ, ಸ್ಪಷ್ಟ ನಿಷ್ಪಕ್ಷಪಾತ ಸುದ್ದಿ ಕೊಡಬೇಕು. ಕೋಣೆಮನೆ ಪರಿವಾರ ಇದ್ದಲ್ಲಿ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಆ ಬಗ್ಗೆ ನನಗೆ ವಿಶ್ವಾಸವಿದೆ. ವಿಸ್ತಾರ ಮಾದ್ಯಮ ಸರ್ವವ್ಯಾಪಿ ಸರ್ವಸ್ಪರ್ಶಿ ಆಗಬೇಕು. ಎಲೆಮರೆ ಕಾಯಿಯಂತಿರುವ ಹಲವರನ್ನು ಗುರುತಿಸಿ ಆ ಬಗ್ಗೆ ಸುದ್ದಿ ಬಿತ್ತರಿಸಬೇಕು. ಅಂತಹ ಪ್ರಾಮಾಣಿಕತೆ ಮೆರೆಯುವ ಜನೋಪಯೋಗಿ ಚಾನೆಲ್ ವಿಸ್ತಾರ ಆಗಬೇಕು ಎಂದು ಹಾರೈಸಿದರು.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮಕ್ಕಳ ಆತ್ಮಹತ್ಯೆ ಸರಣಿ ಕಳವಳಕಾರಿ
ಗ್ರಾಮೀಣ ಅಭಿವೃದ್ಧಿ ವಿಕೇಂದ್ರಿಕರಣ ಉಪಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಮಾತನಾಡಿ, ಜಗತ್ತಿನಲ್ಲಿ ಏನೇ ಸೃಷ್ಟಿ ಆಗಲು ಬ್ರಹ್ಮ, ವಿಷ್ಣು, ಮಹೇಶ್ವರರು ಬೇಕು. ವಿಸ್ತಾರಕ್ಕೆ ಇದೀಗ ಮೂರು ಸೃಷ್ಟಿಕರ್ತ ರತ್ನಗಳು ಸಿಕ್ಕಿವೆ. ಈಗ ಇರುವುದು ಮಾಹಿತಿ ತಂತ್ರಜ್ಞಾನ ಕಾಲ. ಈ ಕ್ಷಣದ ಸುದ್ದಿಯ ಮಾಹಿತಿ ಪಡೆಯಲು ಮಾಧ್ಯಮ ಬೇಕು. ಇದಕ್ಕೆ ಇದೀಗ ವಿಸ್ತಾರ ಕಾಲಿರಿಸಿದೆ. ವಿಸ್ತಾರ ಕಾರ್ಯಕ್ರಮಗಳು ವಿಭಿನ್ನವಾಗಿವೆ. ಪಾರದರ್ಶಕತೆ, ವಸ್ತುನಿಷ್ಠ ವರದಿಗೆ ವಿಸ್ತಾರ ಹೆಚ್ಚು ಒತ್ತು ನೀಡುತ್ತದೆ ಎಂಬ ನಂಬಿಕೆ ನನಗಿದೆ ಎಂದರು.
ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರ ಬಾಲ್ಯ ಜೀವನ ನೆನಪಿಸಿಕೊಂಡ ಪ್ರಮೋದ್ ಹೆಗಡೆ, ಹರಿಪ್ರಕಾಶ್ ಅವರು ಒಂದು ಪುಟ್ಟ ಹಳ್ಳಿಯಿಂದ ಬಂದು ಇದೀಗ ಇಡೀ ರಾಜ್ಯವೇ ಗುರುತಿಸುವ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅವರ ಬಾಲ್ಯಜೀವನ ಕಷ್ಟಕರವಾಗಿತ್ತು. ಕಿರಾಣಿ ಅಂಗಡಿಯಲ್ಲಿ ದಿನದ ಕೆಲ ಹೊತ್ತು ಕೆಲಸ ಮಾಡುತ್ತಿದ್ದರು. ಆ ಬಳಿಕ ಶಾಲೆಗೆ ಹೋಗುತ್ತಿದ್ದರು. ಬಟ್ಟೆಗೆ ಇಸ್ತ್ರಿ ಮಾಡಿಕೊಳ್ಳಲಾಗದೆ ಬಟ್ಟೆ ಮಡಚಿ ತಲೆ ಕೆಳಗಿಟ್ಟು ಐರನ್ ಮಾಡಿಕೊಳ್ಳೋ ಪರಿಸ್ಥಿತಿ ಅವರಿತ್ತು. ಇದೀಗ ಅವರ ಸಾಧನೆ ಕಂಡು ನನಗೆ ಖುಷಿಯಾಗಿದೆ ಎಂದರು.
ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಆನ್‌ಲೈನ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಹುಟ್ಟೂರಿನಲ್ಲಿ ಅತ್ಯಂತ ಅದ್ಧೂರಿಯಾಗಿ ವಿಸ್ತಾರ ಕನ್ನಡ ಸಂಭ್ರಮ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಸ್ತಾರ ಮೀಡಿಯಾದ ಚೇರ್ಮನ್ ಮತ್ತು ಎಂ.ಡಿ ಧರ್ಮೇಶ್, ನಿರ್ದೇಶಕರಾದ ಶ್ರೀನಿವಾಸ್ ಹೆಬ್ಬಾರ್ ಪಾಲ್ಗೊಂಡಿದ್ದರು. ತಾಲೂಕು ದಂಡಾಧಿಕಾರಿ ಶ್ರೀಕೃಷ್ಣ ಕಾಮಕರ, ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ ಉಪಸ್ಥಿತರಿದ್ದರು.
ನರಸಿಂಹ ಕೋಣೆಮನೆ ಸ್ವಾಗತಿಸಿದರು. ವಿವೇಕ ಕುಮಾರ್ ನಿರೂಪಿಸಿದರು. ವಿಶ್ವದರ್ಶನ ಕಾಲೇಜಿನ ಪ್ರಾಶುಪಾಲರಾದ ಡಿ. ಕೆ. ಗಾಂವ್ಕರ್ ಜತೆಗಿದ್ದರು.
ಇದನ್ನೂ ಓದಿ | ವಿಸ್ತಾರ ಭಾಗ 2 | ಹರಿವ ನದಿಗೆ ಸಾವಿರ ಕಾಲು | ಹೊಣೆಯರಿತ ಪತ್ರಕರ್ತನ ಸತ್ಯದ ವಿಶ್ಲೇಷಣೆ | ಹರಿಪ್ರಕಾಶ್ ಕೋಣೆಮನೆ ಅಂಕಣ ಸಂಕಲನ