ಕಾರವಾರ: ನಗರದ ಗುರುಭವನದಲ್ಲಿ ವಿಸ್ತಾರ ಕನ್ನಡ ಸಂಭ್ರಮ ಶನಿವಾರ ಅದ್ಧೂರಿಯಾಗಿ ನೆರವೇರಿತು. ವಿಸ್ತಾರ ನ್ಯೂಸ್ ಚಾನೆಲ್ ವತಿಯಿಂದ(Vistara News Launch) ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿದರು.
ನಂತರ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಮಾಧ್ಯಮಗಳು ಗ್ರಾಮೀಣ ಭಾಗಗಳಲ್ಲಿನ ಸಮಸ್ಯೆಗಳ ಕುರಿತು ಹೆಚ್ಚು ವರದಿ ಮಾಡುವುದರ ಜತೆಗೆ ಸರ್ಕಾರದ ಯೋಜನೆಗಳ ಕುರಿತು ಗ್ರಾಮೀಣ ಮಟ್ಟದಲ್ಲಿ ಜನರಿಗೆ ತಿಳಿಸುವಂತಹ ಕಾರ್ಯ ಮಾಡಬೇಕು. ಅಲ್ಲದೇ ಭ್ರಷ್ಟಾಚಾರದ ಕುರಿತು ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯುವಂತಹ ಕೆಲಸವನ್ನು ಎಲ್ಲ ಮಾಧ್ಯಮಗಳೂ ಮಾಡಲಿ ಎಂದು ಹೇಳಿದರು.
ಇದನ್ನೂ ಓದಿ | Vistara News Launch | ಕನ್ನಡ ಭಾಷೆ ಬೆಳೆಸುವುದು ಮಾಧ್ಯಮಗಳ ಆದ್ಯತೆ ಆಗಲಿ: ಅಭಿನವ ವೆಂಕಟೇಶ ಸ್ವಾಮೀಜಿ
ಮಾಧ್ಯಮಗಳು ಸುದ್ದಿಗಳನ್ನು ಬಿತ್ತರಿಸದೇ ಇದ್ದರೆ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನಮ್ಮ ಅರಿವಿಗೆ ಬರುವುದಿಲ್ಲ. ಆಧುನಿಕ ಜಗತ್ತಿನಲ್ಲಿ ಇಂದು ಎಲ್ಲ ಕ್ಷೇತ್ರಗಳೂ ಸ್ಪರ್ಧಾತ್ಮಕವಾಗಿವೆ. ಮಾಧ್ಯಮಗಳು ಒಂದಕ್ಕಿಂತ ಒಂದು ಸಂಸ್ಥೆ ಮೊದಲು ಸುದ್ದಿಯನ್ನು ಕೊಡಬೇಕು ಎಂದು ಪೈಪೋಟಿಯಿಂದ ಕಾರ್ಯನಿರ್ವಹಿಸುತ್ತಿವೆ. ಮಾಧ್ಯಮಗಳನ್ನು ನಡೆಸುವುದು ಸುಲಭದ ಮಾತಲ್ಲ ಎಂದ ಅವರು, ನೂತನವಾಗಿ ಪ್ರಾರಂಭವಾಗಿರುವ ವಿಸ್ತಾರ ನ್ಯೂಸ್ ರಾಜ್ಯ, ರಾಷ್ಟ್ರಮಟ್ಟದಲ್ಲೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಯಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಾ ನಾಯ್ಕ ಮಾತನಾಡಿ, ಎಲ್ಲೆಲ್ಲೂ ವಿದ್ಯುನ್ಮಾನ ಮಾಧ್ಯಮಗಳೇ ವಿಜೃಂಭಿಸುತ್ತಿವೆ. ಈ ನಡುವೆ ನೂತನವಾಗಿ ಮಾಧ್ಯಮ ಕ್ಷೇತ್ರ ಪ್ರವೇಶಿಸುತ್ತಿರುವ ವಿಸ್ತಾರ ನ್ಯೂಸ್, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಪ್ರಜೆಗಳ ಆಶೋತ್ತರಗಳನ್ನು ಎತ್ತಿಹಿಡಿಯುವ ಗುರುತರ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ ಎಂದರು.
ಮುಖ್ಯ ಅತಿಥಿಯಾದ ಸೇಂಟ್ ಮಿಲಾಗ್ರಿಸ್ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್‌ನ ಸಂಸ್ಥಾಪಕ ನಿರ್ದೇಶಕ ಜಾರ್ಜ್ ಫರ್ನಾಂಡೀಸ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಖ್ಯಾತ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರು ವಿಸ್ತಾರ ನ್ಯೂಸ್‌ನ ಮುಂದಾಳತ್ವವನ್ನ ವಹಿಸಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ವಿಸ್ತಾರ ನ್ಯೂಸ್ ಜಿಲ್ಲೆಯ ಜನರ ಮನೆ, ಮನಗಳಿಗೆ ವಿಸ್ತಾರಗೊಳ್ಳಲಿ ಎಂದು ಹಾರೈಸಿದರು.
ಜಿಲ್ಲಾ ಪತ್ರಿಕಾಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ.ಹರಿಕಾಂತ್ ಮಾತನಾಡಿ, ರಾಜ್ಯದ ಬಹುತೇಕ ಸುದ್ದಿ ವಾಹಿನಿಗಳಲ್ಲಿ ಉತ್ತರಕನ್ನಡ ಜಿಲ್ಲೆಯವರ ಪ್ರಾಬಲ್ಯ ಸಾಕಷ್ಟಿದೆ. ವಿಶ್ವೇಶ್ವರ ಭಟ್, ರವಿ ಹೆಗಡೆ, ಶಶಿಧರ ಭಟ್ ಸೇರಿ ಇನ್ನೂ ಹಲವರು ವಿವಿಧ ಸುದ್ದಿ ಮಾಧ್ಯಮಗಳ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದಾರೆ. ಅದರೆ, ಅವುಗಳ ಮಾಲೀಕರು ಮಾತ್ರ ಬೇರೆ ಇರುತ್ತಿದ್ದರು ಎಂದರು.
ಇದೇ ಮೊದಲ ಬಾರಿಗೆ ನಮ್ಮ ಜಿಲ್ಲೆಯವರೇ ಮಾಧ್ಯಮವೊಂದರ ಮಾಲೀಕರು ಹಾಗೂ ಮುಖ್ಯಸ್ಥರೂ ಆಗಿರುವ ಚಾನೆಲ್ ವಿಸ್ತಾರ ನ್ಯೂಸ್ ಆಗಿದೆ. ಇದರೊಂದಿಗೆ ಪತ್ರಿಕೆಯಂತೆ ಡಿಜಿಟಲ್ ರೂಪದಲ್ಲಿ ವೆಬ್‌ಸೈಟ್ ಅನ್ನು ಸಹ ವಿಸ್ತಾರ ನ್ಯೂಸ್ ಹೊಂದಿದ್ದು, ಅದರ ಮುಖ್ಯಸ್ಥರಾಗಿರುವ ರಮೇಶ್ ಕುಮಾರ್ ನಾಯಕ್ ಅವರೂ ನಮ್ಮ ಜಿಲ್ಲೆಯ ಹೊನ್ನಾವರದವರೇ ಆಗಿದ್ದಾರೆ. ಹೀಗಾಗಿ ಇದು ನಮ್ಮ ಜಿಲ್ಲೆಯ ಚಾನೆಲ್ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಅಧ್ಯಕ್ಷ ಡಾ. ನಿತಿನ್ ಪಿಕಳೆ ಮಾತನಾಡಿ, ಮಾಧ್ಯಮಗಳು ಸಮಾಜದ ವೈದ್ಯಕೀಯ ಪದ್ಧತಿಯಿದ್ದಂತೆ. ಸಮಾಜದ ಕುಂದು ಕೊರತೆಗಳನ್ನು ಸರಿಪಡಿಸಿ, ಸುಧಾರಣೆಗಳನ್ನು ತರುವಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯವಾದದ್ದು. ಈ ನಿಟ್ಟಿನಲ್ಲಿ ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳು ಸತ್ಯದ ಪರವಾಗಿರಲಿ ಎಂದು ಸಲಹೆ ನೀಡಿದರು.
ಇನ್ನು ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಾರವಾರದ ಕಲ್ಪನಾರಶ್ಮಿ ಕಲಾಲೋಕ ಹಾಗೂ ಸ್ಥಳೀಯ ನೃತ್ಯ ತಂಡದವರಿಂದ ನಾಡಿನ ಇತಿಹಾಸ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳಿಕ ನೃತ್ಯ ತಂಡಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ನೆನಪಿನ ಕಾಣಿಕೆಯನ್ನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮಾಯಿ ನಾಯ್ಕ ನಡೆಸಿಕೊಟ್ಟರು. ವಿಸ್ತಾರ ನ್ಯೂಸ್ ಜಿಲ್ಲಾ ವರದಿಗಾರ ಸಂದೀಪ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾಮೆರಾಮ್ಯಾನ್ ಸಾಯಿಕಿರಣ ಬಾಬ್ರೇಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಸದಸ್ಯರು, ಪತ್ರಕರ್ತರು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಇದನ್ನೂ ಓದಿ | Vistara Campaign | ವಿಸ್ತಾರ ನ್ಯೂಸ್‌ನ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನದ ಉದ್ದೇಶವೇನು? ಹೇಗೆ ನಡೆಯುತ್ತದೆ?