ಯಲ್ಲಾಪುರ: ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು, ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು. ಸ್ವೀಕಾರ ಮನೋಭಾವನೆ ಬೆಳೆಸಿಕೊಂಡು, ತಮ್ಮ ತಮ್ಮ ಸಾಧ್ಯತೆಗಳನ್ನು ಅರಿತುಕೊಂಡು ಭವಿಷ್ಯದೆಡೆಗೆ ಸಾಗಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಂ.ಭಟ್ ಹೇಳಿದರು.
ಪಟ್ಟಣದ ವಿಶ್ವದರ್ಶನ ಪದವಿ ಪೂರ್ವ ಕಾಲೇಜಿನಲ್ಲಿ (Vishwadarshana College) ಶನಿವಾರ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ. ನಂತರ ಮುಂದೇನು? ಎಂಬ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ. ನಂತರದಲ್ಲಿ ವಿವಿಧ ಶೈಕ್ಷಣಿಕ ಅವಕಾಶಗಳು ಹೇಗಿರುತ್ತವೆ, ಹಾಗೂ ರಾಜ್ಯದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಿಗಬಹುದಾದ ಉನ್ನತ ಶೈಕ್ಷಣಿಕ ಅವಕಾಶಗಳು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ಅವುಗಳಿಗೆ ಸಿದ್ಧಗೊಳ್ಳಬೇಕಾದ ಮಾರ್ಗೋಪಾಯಗಳು ಇತ್ಯಾದಿ ವಿಷಯಗಳ ಮೇಲೆ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಇದನ್ನೂ ಓದಿ | Veda Shibira : ವೇದಾಧ್ಯಯನದಿಂದ ಐಎಎಸ್, ಐಪಿಎಸ್ ಬರೆಯುವವರಿಗೂ ಅನುಕೂಲ ಎಂದ ಶ್ರೀನಿವಾಸ ಹೆಬ್ಬಾರ್
ಸಂಪನ್ಮೂಲ ವ್ಯಕ್ತಿ ಶಿಕ್ಷಕರಾದ ಗಣೇಶ ಭಟ್ ಮಾತನಾಡಿ, ಎಸ್.ಎಸ್.ಎಲ್.ಸಿ. ನಂತರ ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ಅವಕಾಶಗಳನ್ನು ಬಳಸಿಕೊಳ್ಳಲು ಬೇಕಾದ ದಾಖಲೆಗಳು ಹಾಗೂ ವಿಷಯಗಳ ಆಯ್ಕೆಯ ವಿಧಾನ ಮತ್ತು ಅಧ್ಯಯನ ಮಾರ್ಗಗಳು ಅವುಗಳಿಗೆ ಬೇಕಾದ ಮಾಹಿತಿಗಳನ್ನು ಸವಿವರವಾಗಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಮಾತನಾಡಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆ ಪ್ರಾರಂಭದಿಂದಲೂ ಇಲ್ಲಿಯ ಮಕ್ಕಳಿಗೆ ಕಾಲ ಕಾಲಕ್ಕೆ ಬೇಕಾದ ಎಲ್ಲ ಅವಕಾಶಗಳನ್ನು ತೆರೆದಿಡುತ್ತಿದೆ. ಸಂಸ್ಥೆಯು ಬೆಳವಣಿಗೆಯ ಹಾದಿಯಲ್ಲಿ ಬಹಳ ದೂರ ಸಾಗಿದ್ದು, ಅತ್ಯುತ್ತಮ ಶೈಕ್ಷಣಿಕ ಅವಕಾಶಗಳು ನಮ್ಮಲ್ಲಿವೆ. ವಿದ್ಯಾರ್ಥಿಗಳು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.
ವಿಶ್ವದರ್ಶನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ದತ್ತಾತ್ರೇಯ ಗಾಂವ್ಕರ್ ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು ಹಾಗೂ ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವಿಸಿ ವಂದಿಸಿದರು. ಉಪನ್ಯಾಸಕರಾದ ಸಚಿನ್ ಭಟ್ ಸರ್ವರನ್ನು ಸ್ವಾಗತಿಸಿದರು.
ಇದನ್ನೂ ಓದಿ | Banavasi News: ಬನವಾಸಿಯಲ್ಲಿ ಬರದ ಭೀತಿ; ಬತ್ತಲಾರಂಭಿಸಿವೆ ನದಿ, ಕೆರೆ, ಬಾವಿಗಳು
ಲೆಕ್ಕ ಶಾಸ್ತ್ರ ಉಪನ್ಯಾಸಕ ನಾಗರಾಜ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕಿನ ವಿವಿಧ ಪ್ರೌಢಶಾಲೆಗಳ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಎಲ್ಲ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.