Site icon Vistara News

ವಿಶ್ವದರ್ಶನ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ

ವಿಶ್ವದರ್ಶನ

ಶಿರಸಿ: ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಿಸಲಾಯಿತು. ವಿಶೇಷ ಉಪನ್ಯಾಸಕರಾಗಿ ಹವ್ಯಾಸಿ ಛಾಯಾಗ್ರಾಹಕರಾದ ವಾಲ್ಟರ್ ಅಂತೋನಿ ಮಸ್ಕರಿನಸ್ ಆಗಮಿಸಿ, ವಿದ್ಯಾರ್ಥಿಗಳಿಗೆ ಛಾಯಾಚಿತ್ರದ ವಿಧಗಳು, ಚಿತ್ರ ಸೆರೆಹಿಡಿಯುವ ವಿಧಾನ, ಛಾಯಾಚಿತ್ರದ ಮಹತ್ವ ಕುರಿತು ಅತ್ಯುಪಯುಕ್ತವಾದ ಮಾಹಿತಿ ನೀಡಿದರು.

ಸಾವಿರ ಪದಗಳಲ್ಲಿ ವಿವರಿಸಲಾಗದ ಮಾಹಿತಿಯನ್ನು ಒಂದು ಉತ್ತಮ ಚಿತ್ರ ತಿಳಿಸುತ್ತದೆ. ಹಾಗಾಗಿ ಉತ್ತಮ ಛಾಯಾಚಿತ್ರ ತೆಗೆಯಲು ಕ್ಯಾಮೆರಾ ಸೆಟ್ಟಿಂಗ್ ಯಾವ ರೀತಿ ಮಾಡಿಕೊಳ್ಳಬೇಕು ಎನ್ನುವ ಕುರಿತು ವಿವರಣೆ ನೀಡಿದರು. ಪ್ರತಿಯೊಬ್ಬರ ಜೀವನದಲ್ಲಿ ಪ್ರತಿ ಕ್ಷಣ ಎಷ್ಟು ಮಹತ್ವದ್ದು, ವ್ಯಕ್ತಿಯ ಚಿತ್ರ ಯಾವೆಲ್ಲ ಆಯಾಮಗಳಲ್ಲಿ ವಿವರಣೆ ನೀಡುತ್ತದೆ ಎನ್ನುವುದನ್ನು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ದತ್ತಾತ್ರೇಯ ಗಾಂವ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳಿಗೆ ನಿಸರ್ಗ ಛಾಯಾಚಿತ್ರ ತೆಗೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಾದ ಪ್ರಥಮೇಶ ಹೆಗಡೆ- ಪ್ರಥಮ, ಶ್ರೀಗೌರೀ ಭಟ್ಟ-ದ್ವಿತೀಯ, ವಿನಾಯಕ ಶೇಟ್-ತೃತೀಯ ಸ್ಥಾನ ಪಡೆದರು.

ಅಪೂರ್ವ ಕೆರೆತೋಟ ಸ್ವಾಗತಿಸಿದರೆ, ಪ್ರಾರ್ಥನಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಪಲ್ಲವಿ ಭಟ್‌ ವಂದನಾರ್ಪಣೆ ಮಾಡಿದರು. ಉಪನ್ಯಾಸಕರಾದ ವಿನುತಾ ಭಟ್ಟ ಹಾಗೂ ವಿಜಯಶ್ರೀ ಗಾಂವ್ಕರ್ ಕಾರ್ಯಕ್ರಮ ಸಂಯೋಜಿಸಿದ್ದರು.

ಇದನ್ನೂ ಓದಿ | Cold Storage | ಅಂಡಗಿ ಗ್ರಾಮದಲ್ಲಿ ಕೃಷಿ ಉತ್ಪನ್ನ ಶೈತ್ಯಾಗಾರ; 9.5 ಕೋಟಿ ಅನುದಾನ ಮಂಜೂರು

Exit mobile version