Site icon Vistara News

ಸಾಧನೆಗೆ ನಿರಂತರ ಪ್ರಯತ್ನ, ಛಲ ಅಗತ್ಯ: ಶಿಕ್ಷಣ ತಜ್ಞ ಡಾ ಎಚ್‌ ಎಸ್‌ ನಾಗರಾಜ

ವಿಶ್ವದರ್ಶನ

ಯಲ್ಲಾಪುರ: ಜೀವನದಲ್ಲಿ ಪ್ರತಿಯೊಬ್ಬರಿಗೂ ಮಹತ್ವದ ಸಾಧನೆ ಮಾಡಬೇಕೆಂಬ ಇಚ್ಚೆ ಇರುತ್ತದೆ. ಪಾಲಕರೂ ಕೂಡ ತಮ್ಮ ಮಕ್ಕಳ ಬಗೆಗೆ ಬಹು ನಿರೀಕ್ಷೆ ಹೊಂದಿರುತ್ತಾರೆ. ಆದರೆ ಸಾಧನೆಯ ಯಶಸ್ಸಿಗೆ ನಿರಂತರ ಪ್ರಯತ್ನ, ಛಲ, ಗುರಿಗಳಿದ್ದರೆ ಮಾತ್ರ ಸಾಧ್ಯ ಎಂದು ಬೆಂಗಳೂರು ಬೇಸ್ ಅಕಾಡೆಮಿಯ ಸಂಸ್ಥಾಪಕ, ಪ್ರಯೋಗ ಇನ್ಸ್ಟಿಟ್ಯೂಟ್ ಆಫ್ ಎಜ್ಯುಕೇಶನ್ ರಿಸರ್ಚ್ ಸೆಂಟರ್ ನ ಮಾರ್ಗದರ್ಶಕ ಡಾ.ಎಚ್.ಎಸ್. ನಾಗರಾಜ ಹೇಳಿದ್ದಾರೆ.

ಪಟ್ಟಣದ ವಿಶ್ವದರ್ಶನ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆ ಪ್ರಾರಂಭೋತ್ಸವ ಹಾಗೂ ಶಿಕ್ಷಕರೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ, ಪಿಯು ತರಗತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜೀವನದಲ್ಲಿ ಉನ್ನತ ಸಾಧನೆ ಮಾಡುತ್ತೇನೆ ಎಂದು ನೀವು ಇಂದೇ ತೀರ್ಮಾನ ತೆಗೆದುಕೊಳ್ಳಿ .ಆ ಗುರಿ ತಲುಪಲು ಧೈರ್ಯದೊಂದಿಗೆ ಭೌದ್ಧಿಕ, ಮಾನಸಿಕ, ಭಾವನಾತ್ಮಕ ಭಾವಗಳನ್ನು ಜಾಗೃತಗೊಳಿಸಿಕೊಳ್ಳಿ. ಸಿಗುವ ಅವಕಾಶ ಮತ್ತು ಆಹ್ವಾನಗಳನ್ನು  ಸವಾಲಾಗಿ ಸ್ವೀಕರಿಸಿ. ಒಂದೊಂದೇ ಮೆಟ್ಟಿಲೇರುತ್ತಾ ಸಾಗಿದರೆ ನಿಮ್ಮ ಉದ್ದೇಶಿತ ಗುರಿ ತಲುಪಲು ಸಾಧ್ಯ ಎಂದವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ಮಾತನಾಡಿ, ನಮ್ಮ ಸಂಸ್ಥೆ ಹೊಸ ಅಧ್ಯಾಯ ಬರೆಯುತ್ತಿದೆ. ಶೈಕ್ಷಣಿಕ ಕ್ಷೆತ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದೆ, ಅದಕ್ಕೆ ಪೂರಕವಾಗಿಯೆ ಪಿಯು ತರಗತಿಯನ್ನು ಪ್ರಾರಂಭಿಸಿದ್ದೇವೆ. ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದ್ದಂತೆಯೇ 8ನೇ ತರಗತಿಯವರೆಗೆ ಮಾತ್ರ ಮಾಧ್ಯಮಿಕ ಶಿಕ್ಷಣವೆನಿಸಿಕೊಳ್ಳುತ್ತದೆ. 9 ರಿಂದ 12ನೇ ತರಗತಿಯವರೆಗೆ ಪ್ರೌಢ ಶಿಕ್ಷಣ ಎಂದು ಕರೆಯಲಾಗುತ್ತದೆ. ಈ ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯ ಎಂದರು.

ಕಾರ್ಯಕ್ರಮದಲ್ಲಿ ಡಾ.ಎಚ್.ಎಸ್. ನಾಗರಾಜ, ಹರಿಪ್ರಕಾಶ ಕೋಣೇಮನೆ ಮತ್ತಿತರ ಗಣ್ಯರು.

ಯಲ್ಲಾಪುರದಲ್ಲಿ ಅನೇಕ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಆದರೆ ಯಾವುದೇ ಸಂಸ್ಥೆಗೆ ಸ್ಪರ್ಧೆ ಒಡ್ಡುವ ಉದ್ದೇಶ ನಮ್ಮದಲ್ಲ. ವಿದ್ಯಾರ್ಥಿಗಳಿಗೆ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿ, ಮಾದರಿ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆ ನಮ್ಮದು, ಆದ್ದರಿಂದ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ತಜ್ಞರನ್ನು ನಮ್ಮ ಮಂಡಳಿಯಲ್ಲಿ ಸೇರಿಸಿಕೊಳ್ಳಲಾಗಿದೆ. ನಮ್ಮ ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯುವುದೊಂದೇ ಪ್ರಮುಖವಾಗಿರದೇ, ಉತ್ತಮ ನಾಗರಿಕರನ್ನಾಗಿಸುವ ಮಹತ್ವದ ಉದ್ದೇಶ ಹೊಂದಿದ್ದೆವೆ ಎಂದು ಹರಿಪ್ರಕಾಶ ಕೋಣೇಮನೆ ತಮ್ಮ ಸಂಸ್ಥೆಯ ಉದ್ದೇಶ, ಆಶಯವನ್ನು ವಿವರಿಸಿದರು.

ನಮ್ಮ ಶಿಕ್ಷಕರಿಗೆ ಸದಾ ತರಬೇತಿ ಅವರನ್ನು ಸಬಲೀಕರಣಗೊಳಿಸುವ ಕಾರ್ಯ ನಡೆದಿದೆ. ಇಲ್ಲಿನ ಪಾಲಕರು ಪ್ರೀತಿಯಿಂದ ನಮ್ಮ ನಿರೀಕ್ಷೆಗೂ ಮೀರಿ ತಮ್ಮ ಮಕ್ಕಳನ್ನು ವಿಶ್ವಾಸದಿಂದ ಕಳುಹಿಸಿದ್ದಾರೆ, ಅವರಿಗೆ ಕೃತಜ್ಞತೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಹಾಗೂ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಅಪೂರ್ವಾ ಕೆರೆತೋಟ ಪ್ರಾರ್ಥಿಸಿದರೆ, ಪ್ರಾಚಾರ್ಯ ಡಾ.ಡಿ.ಕೆ.ಗಾಂವಕರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರಾದ ರಮೇಶ ನಾಯ್ಕ ನಿರ್ವಹಿಸಿದರು. ಕವಿತಾ ಹೆಬ್ಬಾರ ವಂದಿಸಿದರು.

ಇದನ್ನೂ ಓದಿ| ಜೂನ್ 3 ಅಥವಾ 4ನೇ ವಾರದಲ್ಲಿ PU Results: ತಾತ್ಕಾಲಿಕ ಪಟ್ಟಿ ಪ್ರಕಟ

Exit mobile version