ಬೆಂಗಳೂರು: ಹಿಂದು ರಾಷ್ಟ್ರ ಸ್ಥಾಪನೆಯ ಉದ್ದೇಶದೊಂದಿಗೆ ಪ್ರತಿ ವರ್ಷದಂತೆ ಜೂನ್ 16 ರಿಂದ 22ರವರೆಗೆ ಗೋವಾದ ಫೋಂಡಾ ನಗರದ ಶ್ರೀ ರಾಮನಾಥ ದೇವಸ್ಥಾನ ಆವರಣದಲ್ಲಿ ʼ11ನೇ ಅಖಿಲ ಭಾರತೀಯ ಹಿಂದು ರಾಷ್ಟ್ರ ಅಧಿವೇಶನʼ (ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ) ಆಯೋಜಿಸಲಾಗಿದೆ ಎಂದು ಹಿಂದು ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಬಗ್ಗೆ ವಿಶೇಷ ತಜ್ಞರ ಚರ್ಚಾಕೂಟ, ಗೌರವಾನ್ವಿತರ ಸಂದರ್ಶನ ಇರಲಿದೆ. ‘ಲವ್ ಜಿಹಾದ್, ‘ಹಲಾಲ್ ಸರ್ಟಿಫಿಕೇಷನ್, ‘ಲ್ಯಾಂಡ್ ಜಿಹಾದ್, ‘ಕಾಶಿ-ಮಥುರಾ ಮುಕ್ತಿ, ‘ಮತಾಂತರ, ‘ಗೋಹತ್ಯೆ, ‘ಕೋಟೆ ದೇವಸ್ಥಾನಗಳ ಮೇಲಿನ ಇಸ್ಲಾಂ ಅತಿಕ್ರಮಣ, ‘ದೇವಸ್ಥಾನ ಸಂಸ್ಕೃತಿಯ ರಕ್ಷಣೆ, ‘ಕಾಶ್ಮೀರಿ ಹಿಂದುಗಳ ಪುನರ್ವಸತಿ, ‘ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದುಗಳ ಮೇಲಿನ ದೌರ್ಜನ್ಯ ಸೇರಿ ವಿವಿಧ ವಿಷಯಗಳ ಜತೆಗೆ ಹಿಂದು ರಾಷ್ಟ್ರದ ಅಡಿಪಾಯಕ್ಕಾಗಿ ಅವಶ್ಯಕ ವಿಷಯಗಳ ಮೇಲೆ ಚರ್ಚೆ, ವಿಚಾರ ವಿನಿಮಯ ಆಗಲಿದೆ ಎಂದು ಹೇಳಿದರು.
ಇದನ್ನೂ ಓದಿ | ರಾಜಮಾರ್ಗ ಅಂಕಣ: ಆತ್ಮಾಹುತಿ ದಾಳಿಗೆ ಎದೆಕೊಟ್ಟು ಆಕೆ ಬಂಡೆಯಂತೆ ನಿಂತಿದ್ದರು!
ಈ ಅಧಿವೇಶನಕ್ಕೆ ಅಮೆರಿಕ, ಬಾಂಗ್ಲಾದೇಶ, ನೇಪಾಳ, ಇಂಗ್ಲೆಂಡ್, ಸಿಂಗಪುರ ಈ ದೇಶಗಳ ಜತೆಗೆ ಭಾರತದಲ್ಲಿನ 28 ರಾಜ್ಯಗಳಲ್ಲಿನ 350ಕ್ಕೂ ಹೆಚ್ಚಿನ ಹಿಂದು ಸಂಘಟನೆಗಳ 1500ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳಿಗೆ ಆಮಂತ್ರಿಸಲಾಗಿದೆ. ಇದರಲ್ಲಿ ಕರ್ನಾಟಕದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಹಿಂದು ನಾಯಕರಾದ ಅರುಣ್ ಪುತ್ತಿಲ, ಡಾ. ಎಸ್. ಆರ್ ಲೀಲಾ, ಅಡ್ಡಂಡ ಕಾರ್ಯಪ್ಪ ಸೇರಿ ಸುಮಾರು 250ಕ್ಕೂ ಅಧಿಕ ಹಿಂದುತ್ವವಾದಿ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅದೇ ರೀತಿ ಅಮರಾವತಿಯ ರುಕ್ಮಿಣಿ ವಲ್ಲಭ ಪೀಠದ ಶ್ರೀ ಜಗದ್ಗುರು ರಾಮಾನಂದಚಾರ್ಯ, ಶ್ರೀ ಸ್ವಾಮಿ ರಾಮರಾಜೇಶ್ವರಾಚಾರ್ಯಜಿ, ವಿಶ್ವ ಹಿಂದು ಪರಿಷತ್ತಿನ ದೇವಗಿರಿ ಪ್ರಾಂತದ ಧರ್ಮಚಾರ್ಯ ಹ.ಭ.ಪ. ಜನಾರ್ಧನ ಮಹಾರಾಜ್ಮೇಟೆ, ಕಾಶಿಯ ಜ್ಞಾನವಾಪಿ ಮಸೀದಿಯ ವಿರುದ್ಧ ಹೋರಾಟ ನಡೆಸುತ್ತಿರುವ ವಕೀಲ ಹರಿಶಂಕರ್ ಜೈನ್, ನ್ಯಾಯವಾದಿ ವಿಷ್ಣು ಶಂಕರ ಜೈನ್, ತೆಲಂಗಾಣದ ಹಿಂದುತ್ವ ನಿಷ್ಠ ಶಾಸಕ ಟಿ. ರಾಜಾಸಿಂಗ್, ದೆಹಲಿಯ ಭಾಜಪದ ನಾಯಕ ಕಪಿಲ್ ಮಿಶ್ರಾ ಮತ್ತಿತರು ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಹಿಂದು ಧರ್ಮವು ವಿಶ್ವ ಬಂಧುತ್ವ ಮತ್ತು ‘ವಸುದೈವ ಕುಟುಂಬಕಂ ಸಂಕಲ್ಪವನ್ನು ಪ್ರಸ್ತುತಪಡಿಸುತ್ತದೆ. ಆದ್ದರಿಂದ ಭಾರತವನ್ನು ಮತ್ತೆ ತುಂಡಾಗುವುದನ್ನು ತಡೆಯಲು ಭಾರತವನ್ನು ಆದರ್ಶ ರಾಮರಾಜ್ಯ ಅರ್ಥಾತ್ ಹಿಂದು ರಾಷ್ಟ್ರ ಮಾಡದೆ ಪರ್ಯಾಯವಿಲ್ಲ ಎಂದು ಮೋಹನ್ ಗೌಡ ಹೇಳಿದರು.
ಈ ಅಧಿವೇಶನದ ನೇರಪ್ರಸಾರ ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ HinduJagruti.org ಮೂಲಕ, ಹಾಗೂ ಸಮಿತಿಯ @Hindujagruti ಈ ಯೂಟ್ಯೂಬ್ ಚಾನೆಲ್ ಮತ್ತು @HinduJagrutiOrg ಈ ಟ್ವಿಟರ್ ಹ್ಯಾಂಡಲ್ ಮೂಲಕ ಆಗಲಿದೆ. ಜಗತ್ತಿನಾದ್ಯಂತ ಇರುವ ಹಿಂದುತ್ವ ನಿಷ್ಠರು ಈ ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಲಾಭ ಪಡೆಯಬೇಕೆಂದು ಹಿಂದು ಜನಜಾಗೃತಿ ಸಮಿತಿಯು ಕರೆ ನೀಡಿದೆ.
ಇದನ್ನೂ ಓದಿ | ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
ಸುದ್ದಿಗೋಷ್ಠಿಯಲ್ಲಿ ಹಿಂದು ವಿದಿಜ್ಞ ಪರಿಷತ್ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಅಮೃತೇಶ್ ಎನ್.ಪಿ, ಹಿಂದು ಜೈ ಭೀಮ್ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್ (ಕೋಟೆ ಶೇಕಿ), ಅಯ್ಯಪ್ಪ ಸೇವಾ ಸಮಾಜಂ ಕರ್ನಾಟಕ ಅಧ್ಯಕ್ಷ ಎನ್. ಜಯರಾಮ, ನೆಲಮಂಗಲದ ಶ್ರೀ ರಾಮಾನುಜ ಪೀಠಂ ಉಪಾಧ್ಯಕ್ಷರು & ಉದ್ಯಮಿ ಜಯರಾಮ.ಎಸ್ ಉಪಸ್ಥಿತರಿದ್ದರು.