ಸಾಗರ್ ಕುಮಚಹಳ್ಳಿ, ಚಾಮರಾಜನಗರ
ಜನಪದ ಕಲೆಗಳ ತವರೂರಾದ ಚಾಮರಾಜನಗರ ಜಿಲ್ಲೆಯ ಜನರ ಹಲವು ವರ್ಷಗಳ ಬೇಡಿಕೆ ಈಡೇರಿದೆ. ರಂಗ ಚಟುವಟಿಕೆಗೆ ಅನುಕೂಲವಾಗಲು ಜಿಲ್ಲಾಡಳಿತದಿಂದ ನಿರ್ಮಿಸಿರುವ ರಂಗಮಂದಿರ ಆ.15ರ ಸ್ವಾತಂತ್ರ್ಯ ದಿನಾಚರಣೆಯಂದು ಲೋಕಾರ್ಪಣೆಗೊಂಡಿದ್ದು, ರಂಗಮಂದಿರಕ್ಕೆ ಜಿಲ್ಲೆಯ ಖ್ಯಾತ ನಟ, ವರನಟ ಡಾ.ರಾಜಕುಮಾರ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ರಂಗಮಂದಿರವು 7.55 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಚಾಮರಾಜನಗರ ಜಿಲ್ಲೆ ಸ್ಥಾಪನೆಯಾಗಿ 25 ವರ್ಷಗಳಾಗಿದ್ದು, ಅದರ ರಜತ ಮಹೋತ್ಸವದ ಅಂಗವಾಗಿ ಜಿಲ್ಲೆಯ ಜನರಿಗೆ ಕೊಡುಗೆ ನೀಡಲಾಗಿದೆ. ಸ್ವಾತಂತ್ರ್ಯದ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ರಂಗಮಂದಿರ ಉದ್ಘಾಟಿಸಿದ್ದು, ರಂಗಮಂದಿರಕ್ಕೆ ಜಿಲ್ಲೆಯ ಖ್ಯಾತ ನಟ ಡಾ.ರಾಜ್ ಅವರ ಹೆಸರಿಟ್ಟಿರುವುದು ಹೆಮ್ಮೆಯ ವಿಚಾರ ಎಂದು ರಂಗ ಕರ್ಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಸಿದ್ದು ಸಿಎಂ ಆಗಲಿ ಎಂದು ಬಿನ್ನಾಳ ಜಾತ್ರೆಯ ರಥಕ್ಕೆ ಬಾಳೆಹಣ್ಣು ಎಸೆದ ಅಭಿಮಾನಿಗಳು
ಸರ್ಕಾರದಿಂದ ರಂಗಮಂದಿರವನ್ನು ಜಿಲ್ಲೆಯ ಕೇಂದ್ರದಲ್ಲಿ ಸ್ಥಾಪನೆ ಮಾಡಬೇಕು ಎನ್ನುವ ಕೂಗು ರಂಗ ಕರ್ಮಿಗಳಿಂದ ಅನೇಕ ವರ್ಷಗಳಿಂದಲೂ ಕೇಳಿ ಬರುತ್ತಿತ್ತು, ಈ ಕನಸು ಇದೀಗ ನನಸಾಗಿದೆ. ಚಾಮರಾಜನಗರ ಜಿಲ್ಲೆಯ ಹೆಸರು ಪ್ರಪಂಚದಲ್ಲಿ ಗುರುತಿಸಿಕೊಂಡಿರುವುದು ಮೇರು ನಟ ಡಾ. ರಾಜಕುಮಾರ್ ಅವರಿಂದ ಎನ್ನಬಹುದು. ರಾಜ್ಯದ ಅನೇಕ ರಸ್ತೆ, ಕಟ್ಟಡ, ಉದ್ಯಾನವನಗಳಿಗೆ ಡಾ. ರಾಜ್ ಅವರ ಹೆಸರನ್ನು ಕಾಣಬಹುದು. ಆದರೆ ಅವರ ಸ್ವಂತ ಜಿಲ್ಲೆಯಲ್ಲಿ ಅವರ ಹೆಸರಿನಲ್ಲಿ ಯಾವುದೇ ರಸ್ತೆ ಉದ್ಯಾನವನ ಭವನಗಳು ಇರಲಿಲ್ಲ ಎನ್ನುವುದು ಜಿಲ್ಲೆಯ ಜನರ ಬೇಸರವಾಗಿತ್ತು. ಆದರೆ, ಇದೀಗ ಜಿಲ್ಲಾಡಳಿತ ರಾಜಕುಮಾರ್ ಅವರ ಹೆಸರಿನಲ್ಲೊಂದು ರಂಗಮಂದಿರ ನಿರ್ಮಿಸಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ.
ಡಾ.ರಾಜಕುಮಾರ್ ಅವರ ತವರೂರು ಗಡಿ ಜಿಲ್ಲೆ ಚಾಮರಾಜನಗರವಾಗಿದೆ. ಆದರೂ ಜಿಲ್ಲಾ ಕೇಂದ್ರ ಭಾಗದಲ್ಲಿ ಇಲ್ಲಿಯವರೆಗೂ ಅವರ ಹೆಸರಿನ ಯಾವ ರಸ್ತೆ, ಭವನ, ಉದ್ಯಾನವನಗಳಾಗಲಿ ಇರಲಿಲ್ಲ. ಇದಕ್ಕಾಗಿ ರಾಜಕುಮಾರ್ ಹೆಸರಿನಲ್ಲಿ ಸಮಾಜದ ಉಪಯೋಗಕ್ಕೆ ಬರುವ ಉತ್ತಮ ಕಾರ್ಯ ಆಗಬೇಕು ಎಂದು ಚಿಂತಿಸಿದ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, 19 ವರ್ಷಗಳ ಹಿಂದೆಯೇ ಶಂಕುಸ್ಥಾಪನೆಯಾಗಿ ನನೆಗುದಿಗೆ ಬಿದ್ದಿದ್ದ ಕಾಮಗಾರಿಯನ್ನು ಪೂರ್ಣಗೊಳಿಸಿ ವರನಟ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರ ಎಂದು ಹೆಸರಿಟ್ಟಿದೆ.
ಜನಪದ ಕಲೆಗಳ ತವರೂರಾದ ಚಾಮರಾಜನಗರದ ರಂಗಕರ್ಮಿಗಳಿಗೆ ಅನುಕೂಲವಾಗಲು ಒಂದು ರಂಗಮಂದಿರದ ಅವಶ್ಯಕತೆ ಇದ್ದು, ಸರ್ಕಾರದಿಂದ ರಂಗಮಂದಿರವನ್ನು ಜಿಲ್ಲೆಯ ಕೇಂದ್ರದಲ್ಲಿ ಸ್ಥಾಪನೆ ಮಾಡಬೇಕು ಎನ್ನುವ ಕೂಗು ರಂಗ ಕರ್ಮಿಗಳಿಂದ ಅನೇಕ ವರ್ಷಗಳಿಂದಲೂ ಕೇಳಿ ಬರುತ್ತಿತ್ತು. ಈ ಕನಸನ್ನು ಜಿಲ್ಲಾಡಳಿತ ನನಸು ಮಾಡಿದೆ.
ಇದನ್ನೂ ಓದಿ | Shimogga Clash| ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿದ್ಯಾಕೆ? ಪ್ರಚೋದಿಸಲು ಅಲ್ವೆ ಎಂದ ಸಿದ್ದು