ಮಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ (Shivrajkumar) ಅಭಿನಯದ ʻವೇದʼ ಸಿನಿಮಾ ಇದೇ ಡಿಸೆಂಬರ್ 23ರಂದು ರಾಜ್ಯದ 250ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಗೊಳ್ಳಲಿದೆ. ಡಿಸೆಂಬರ್ 10ರ ಶನಿವಾರ ಸಂಜೆ ಮಂಗಳೂರಿನಲ್ಲಿ ʻವೇದʼ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಡೆಯಲಿದೆ. ಕಾರ್ಯಕ್ರಮದಲ್ಲಿ ವೇದ ಚಿತ್ರತಂಡ ಭಾಗಿಯಾಗಲಿದೆ. ಈಗಾಗಲೇ ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ನಟ ಶಿವರಾಜ್‌ಕುಮಾರ್ ದಂಪತಿ ಸಮೇತ ಭೇಟಿ ನೀಡಿದ್ದಾರೆ.
ವೇದ ಚಿತ್ರದ ಪ್ರಚಾರದ ನಿಮಿತ್ತ ಚಿತ್ರತಂಡದವರು ಹಾಗೂ ಶಿವಣ್ಣ ಕುಟುಂಬದವರು ಕೊರಗಜ್ಜ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ. ಕೊರಗಜ್ಜನ ಆದಿ ಸ್ಥಳದಲ್ಲಿ ಶಿವರಾಜ್‌ಕುಮಾರ್ ಹಾಗೂ ಚಿತ್ರತಂಡ ಪ್ರಾರ್ಥನೆ ಸಲ್ಲಿಸಿದೆ. ಪ್ರಾರ್ಥನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಣ್ಣ ʻʻಇದೊಂದು ಆಡಂಬರ ಇಲ್ಲದ ದೈವಿಕ ಶಕ್ತಿಯ ಸ್ಥಳ. ಸ್ನೇಹಿತರೊಬ್ಬರು ಈ ಕ್ಷೇತ್ರದ ಬಗ್ಗೆ ತಿಳಿಸಿದ್ದರು. ಇಂದು ವೇದ ಸಿನಿಮಾದ ಪ್ರಮೋಷನ್ ಕಾರ್ಯಕ್ರಮವು ಮಂಗಳೂರಿನಲ್ಲಿದೆ. ಹೀಗಾಗಿ ಚಿತ್ರ ತಂಡದ ಜತೆ ಕ್ಷೇತ್ರಕ್ಕೆ ಬಂದಿದ್ದೇವೆ. ನಾನು ಕರಾವಳಿಯ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಇಲ್ಲಿಗೆ ಇದೇ ಮೊದಲ ಬಾರಿಗೆ ಬಂದಿರುವುದು. ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರಾರ್ಥನೆ ಈಡೇರಬೇಕು ಎಂತಲೇ ಪ್ರಾರ್ಥನೆ ಸಲ್ಲಿಸಬಾರದು. ಪ್ರಾರ್ಥನೆ ಈಡೇರಿಸುವುದು ಬಿಡುವುದು ದೇವರಿಗೆ ಬಿಡಬೇಕು. ಇದೊಂದು ವಿಶೇಷ ಕ್ಷೇತ್ರವಾಗಿದ್ದು, ಭಕ್ತಿಯಿಂದ ಕೈ ಮುಗಿದಿದ್ದೇನೆ. ಅಜ್ಜನಿಗೆ ಚಕ್ಕುಲಿ ಹಾಗೂ ವೀಳ್ಯದ ಎಲೆ ಅರ್ಪಿಸಿದ್ದೇನೆʼʼ ಎಂದರು.
ಇದನ್ನೂ ಓದಿ | Shivrajkumar | ಶಿವರಾಜ್‌ಕುಮಾರ್ ಅಭಿನಯದ ʻವೇದʼ ಟೀಸರ್ ರಿಲೀಸ್
ವೇದ ಚಿತ್ರ 1960ರ ದಶಕದಲ್ಲಿ ನಡೆದ ಕ್ರೂರ ಕಥೆಯನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ. ‘ವೇದ’ ಸಿನಿಮಾ ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಮೂಡಿ ಬರುತ್ತಿದೆ. ನಿರ್ದೇಶಕ ಎ. ಹರ್ಷ ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಶನ್‌ನ ನಾಲ್ಕನೇ ಸಿನಿಮಾ ಇದಾಗಿದೆ.
ಈಗಾಗಲೇ ಬಿಡುಗಡೆಗೊಂಡ “ಏಳೇಳು ಬೆಟ್ಟ ದಾಟ್ಕೊಂಡು ಬರ್ತಾವ್ನೆ ಗಿಲ್ಲಕ್ಕೋ ಶಿವ”‘ ಹಾಡು ಗಮನ ಸೆಳೆಯುತ್ತಿದೆ. ಈ ಹಾಡನ್ನು ಸೌತ್ ಸ್ಟಾರ್ ಮಂಗ್ಲಿ ಹಾಡಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರಕ್ಕೆ ಜೀ ಸ್ಟುಡಿಯೊ ಕೈ ಜೋಡಿಸಿದೆ. ಗಾನವಿ ಚಿತ್ರದ ನಾಯಕಿಯಾಗಿದ್ದು, ಅರ್ಜುನ್ ಜನ್ಯ ಸಂಗೀತವಿದೆ.
ಇದನ್ನೂ ಓದಿ | Karunada Sambhrama 2022 | ಡಿ. 10,11ರಂದು ಕರುನಾಡ ಸಂಭ್ರಮ : ಚಿರಂಜೀವಿ ಸರ್ಜಾಗೆ ಮರಣೋತ್ತರ ಕನ್ನಡ ಕಲಾಭೂಷಣ ಪ್ರಶಸ್ತಿ