ಬಳ್ಳಾರಿ: ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ (Veerashaiva vidyavardhaka sangha) ಅಧ್ಯಕ್ಷರಾಗಿ ಬ್ಯಾಲಚಿಂತೆಯ ಆರ್.ರಾಮನಗೌಡ ಮತ್ತು ಕಾರ್ಯದರ್ಶಿಯಾಗಿ ಗುರುಸಿದ್ಧಸ್ವಾಮಿ ಆಯ್ಕೆ ಯಾಗಿದ್ದಾರೆ.
ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಹಿರಿಯರ ತಂಡದಿಂದ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ವಿ. ಬಸವರಾಜ್ ಅವರು, ಯುವಕರ ತಂಡದಿಂದ ಆರ್.ರಾಮನಗೌಡ ಅವರು ಸ್ಪರ್ಧಿಸಿದ್ದರು. ಗೌಪ್ಯ ಮತದಾನದಲ್ಲಿ ಆರ್.ರಾಮನಗೌಡ ಅವರು 15 ಮತಗಳನ್ನು ಪಡೆಯುವ ಮೂಲಕ ಮುಂದಿನ ಒಂದು ವರ್ಷ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಸ್ಥಾನಕ್ಕೆ ಹಿರಿಯರ ತಂಡದಿಂದ ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗುರುಸಿದ್ಧ ಸ್ವಾಮಿ, ಯುವಕರ ತಂಡದಿಂದ ವಿರುಪಾಕ್ಷ ಗೌಡ ಸ್ಪರ್ಧಿಸಿದ್ದರು. ಗುರುಸಿದ್ಧ ಸ್ವಾಮಿ ಮುಂದಿನ ಒಂದು ವರ್ಷದ ಅವಧಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಆರ್. ರಾಮನಗೌಡ ಅವರು ಪ್ರಾಮಾಣಿಕರಾಗಿ ಹಲವು ವರ್ಷಗಳ ಅವಧಿಯಲ್ಲಿ ಸಂಘದ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಮಹಿಳಾ ಕಾಲೇಜ್ ಸೇರಿದಂತೆ ವಿವಿಧ ಕಾಲೇಜುಗಳ ಅಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇವರ ಸಹೋದರ ಆರ್ ಮರೇಗೌಡ, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್‌ನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದನ್ನೂ ಓದಿ : ರಾಜ ಮಾರ್ಗ ಅಂಕಣ: ರಾಷ್ಟ್ರವೇ ಮೊದಲು ಎನ್ನುತ್ತಾ ಉಗ್ರರ ಜೊತೆ ಹೋರಾಡಿ ಪ್ರಾಣ ಕಳೆದುಕೊಂಡಾಗ ಆ ಸೈನಿಕನ ವಯಸ್ಸು ಕೇವಲ 23!