Site icon Vistara News

Vehicle Fitness Certificate | ವಾಣಿಜ್ಯ ವಾಹನಗಳ ಎಫ್‌ಸಿ ನವೀಕರಣಕ್ಕೆ ಪೊಲೀಸ್ ಇಲಾಖೆಯ ಎನ್‌ಒಸಿ‌ ಕಡ್ಡಾಯ?

Vehicle Fitness Certificate

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕೆಲ ವಾಣಿಜ್ಯ ವಾಹನಗಳ ಮಾಲೀಕರು, ಭಾರಿ ಪ್ರಮಾಣದ ದಂಡ ಬಾಕಿ ಉಳಿಸಿಕೊಂಡಿರುತ್ತಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಾಣಿಜ್ಯ ವಾಹನಗಳ ಕ್ಷಮತೆ ಪ್ರಮಾಣಪತ್ರ (Vehicle Fitness Certificate) ನವೀಕರಣ ಮಾಡಲು ಪೊಲೀಸ್‌ ಇಲಾಖೆಯ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಕಡ್ಡಾಯ ಮಾಡಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಸಂಚಾರ ಪೊಲೀಸರು ದಂಡ ವಿಧಿಸುತ್ತಾರೆ. ಆದರೆ, ವಾಣಿಜ್ಯ ವಾಹನಗಳಿಂದ ಕೋಟ್ಯಂತರ ರೂಪಾಯಿ ದಂಡ ಬಾಕಿ ಉಳಿದಿದೆ. ಇದನ್ನೂ ವಸೂಲಿ ಮಾಡುವುದು ಸಂಚಾರ ಪೊಲೀಸ್‌ ಇಲಾಖೆಗೆ ತಲೆನೋವಾಗಿದೆ. ಹೀಗಾಗಿ ಮೋಟಾರು ವಾಹನಗಳ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಸಾರಿಗೆ ಇಲಾಖೆಗೆ ಪೊಲೀಸ್‌ ಇಲಾಖೆ ಮನವಿ ಮಾಡಿದೆ.

ರಾಜ್ಯದಲ್ಲಿ ಒಟ್ಟು 30,42,350 ವಾಣಿಜ್ಯ ಉದ್ದೇಶದ ವಾಹನಗಳಿವೆ. ಇಂತಹ ವಾಹನಗಳಿಗೆ ಪ್ರತಿ 2 ವರ್ಷ­ಕ್ಕೆ ಕ್ಷಮತೆ ಪ್ರಮಾಣ ಪತ್ರ (ಎಫ್‌ಸಿ) ನವೀಕರಿಸಬೇಕು. ಇದಕ್ಕೆ ವಿಮೆ ಮತ್ತು ಎಮಿಷನ್ ಟೆಸ್ಟ್‌ ಸರ್ಟಿಫಿಕೇಟ್ ಹೊಂದಿರಬೇಕು ಎಂಬ ಷರತ್ತಿದೆ. ಸಾಮಾನ್ಯವಾಗಿ ಎಲ್ಲರೂ ಈ ಎರಡು ದಾಖಲೆಗಳನ್ನು ಹೊಂದಿರುವುದರಿಂದ ಎಫ್‌ಸಿ ನವೀಕರಣವಾಗುತ್ತದೆ. ಹೀಗಾಗಿ ಪೊಲೀಸ್‌ ಇಲಾಖೆಯ ನಿರಾಕ್ಷೇಪಣಾ ಪತ್ರವನ್ನೂ ಕಡ್ಡಾಯ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ.

ದಂಡ ಬಾಕಿ ಸಂಬಂಧ ಪೊಲೀಸ್‌ ಇಲಾಖೆಯ ಎನ್‌ಒಸಿ ಕಡ್ಡಾಯ ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳು ಮೂರ್ನಾಲ್ಕು ಸಭೆ ನಡೆಸಿದ್ದಾರೆ. ಜತೆಗೆ ಮೋಟಾರು ವಾಹನಗಳ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ವಿಮೆ ನವೀಕರಣಕ್ಕೂ ತಡೆ?
ಪೊಲೀಸ್‌ ಇಲಾಖೆಯ ಎನ್ಒಸಿ ಇಲ್ಲದಿದ್ದರೆ ಎಫ್‌ಸಿಗೆ ಮಾತ್ರವಲ್ಲದೆ, ವಿಮೆ ನವೀಕರಣಕ್ಕೂ ಅನುಮತಿ ನಿರಾಕರಿಸುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ದಂಡ ಬಾಕಿ ಉಳಿಸಿಕೊಂಡಿರುವ ಬಗ್ಗೆ ಕಡ್ಡಾಯ ಪರಿಶೀಲನೆ ಮಾಡಿ ನಂತರವಷ್ಟೇ ವಿಮೆ ನವೀಕರಿಸುವುದು ಹಾಗೂ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಮಾಹಿತಿ ಪಡೆಯಲು ವಿಶೇಷ ಆ್ಯಪ್ ರೂಪಿಸಿ, ಮೊದಲು ಬೆಂಗಳೂರು ನಗರಕ್ಕೆ ಸೀಮಿತವಾಗಿ ಈ ವ್ಯವಸ್ಥೆ ಜಾರಿಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇದನ್ನೂ ಓದಿ | INDvsSL | ಮೊದಲ ಟಿ20 ಪಂದ್ಯದಲ್ಲಿ ಟಾಸ್​ ಸೋತ ಭಾರತ ತಂಡಕ್ಕೆ ಬ್ಯಾಟಿಂಗ್​ಗೆ ಆಹ್ವಾನ

Exit mobile version