ಬೆಂಗಳೂರು: ಪಶುಸಂಗೋಪಾನೆ ಇಲಾಖೆಯ ಯಡವಟ್ಟು ಆದೇಶಕ್ಕೆ ಬೆಂಗಳೂರಿನ ಪ್ರಾಣಿ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ 24 ಹಾಗೂ ಬೆಂಗಳೂರು ಗ್ರಾಮಾಂತರದ 4 ಪಶು ಆಸ್ಪತ್ರೆಗಳನ್ನು (Veterinary Hospital) ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡಲು ಪಶುಸಂಗೋಪಾನ ಇಲಾಖೆ ಆದೇಶ ಹೊರಡಿಸಿದೆ. ಇದು ಬೆಂಗಳೂರಿಗರ ಕಂಗೆಣ್ಣಿಗೆ ಗುರಿ ಮಾಡಿದೆ.
ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದ ಒಟ್ಟು 28 ಪಶು ಆಸ್ಪತ್ರೆಗಳನ್ನು ಹುದ್ದೆಗಳ ಸಮೇತ ಸ್ಥಳಾಂತರ ಮಾಡಲಾಗುತ್ತಿದೆ. ಬೆಂಗಳೂರಿನ 3.74 ಲಕ್ಷ ಬೀದಿನಾಯಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಇಲಾಖೆ ಆದೇಶ ಮಾಡಿದೆ ಎಂದು ಪ್ರಾಣಿಪ್ರಿಯರು ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಪಶುಗಳು ಸಂಖ್ಯೆ ಗಣತಿ ಮಾಡಿದ್ದೇ ಅವೈಜ್ಞಾನಿಕವಾಗಿದೆ. ಬೀದಿನಾಯಿಗಳನ್ನು ಲೆಕ್ಕಕ್ಕೆ ತಗೆದುಕೊಂಡಿಲ್ಲ. ಅವುಗಳಿಗೆ ಚಿಕಿತ್ಸೆ ಸಿಗದೇ ಸಾಯಬೇಕಾ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಇಷ್ಟಕ್ಕೂ ಆದೇಶದಲ್ಲಿ ಏನಿದೆ?
ರಾಷ್ಟ್ರೀಯ ಕೃಷಿ ಆಯೋಗದ ಮಾರ್ಗಸೂಚಿಯಂತೆ ಪ್ರತಿ 5,000 ಜಾನುವಾರು ಘಟಕಗಳಿಗೆ 01 ಪಶುವೈದ್ಯಕೀಯ ಸಂಸ್ಥೆ ಇರಬೇಕೆಂಬ ನಿಯಮವಿದೆ. ಅದರಂತೆ ಬೆಂಗಳೂರು ನಗರದಲ್ಲಿ ಜಾನುವಾರು ಘಟಕಗಳ ಸಂಖ್ಯೆ 1000 ಕ್ಕಿಂತ ಕಡಿಮೆ ಇರುವ 24 ಪಶುವೈದ್ಯ ಸಂಸ್ಥೆಗಳಿವೆ. ಬೆಂಗಳೂರು ಗ್ರಾಮಾಂತರದಲ್ಲಿ 1000 ಕ್ಕಿಂತ ಕಡಿಮೆ ಇರುವ 04 ಪಶುವೈದ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಹೀಗಾಗಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1000 ಮತ್ತು ಅದಕ್ಕಿಂತ ಕಡಿಮೆ ಜಾನುವಾರು ಘಟಕಗಳನ್ನು ಹೊಂದಿರುವ ಒಟ್ಟು 28 ಪಶುವೈದ್ಯ ಆಸ್ಪತ್ರೆಗಳನ್ನು ಬೇಡಿಕೆ ಇರುವ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈ ಬಗ್ಗೆ ಇಲಾಖಾ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹೀಗಾಗಿ ಸರ್ಕಾರವು ಪ್ರಸ್ತಾವನೆಯನ್ನು ಪರಿಶೀಲಿಸಿದೆ.
ಇದನ್ನೂ ಓದಿ: Road Accident : ಸ್ಕೂಟರ್‌ಗೆ ಕಾರು ಡಿಕ್ಕಿ, ವ್ಯಕ್ತಿ ಸಾವು; ಒಣಗಿದ ಮರ ಬಿದ್ದು ನಾಲ್ವರು ಗಂಭೀರ
ರಾಜ್ಯದಲ್ಲಿ ಸೂಪರ್ ಸ್ಪೆಷಾಲಿಟಿ, ಸ್ಪೆಷಾಲಿಟಿ, ಪಾಲಿಕ್ಲಿನಿಕ್ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹಾಗೂ ಸಂಚಾರಿ ಪಶುಚಿಕಿತ್ಸಾಲಯಗಳು ಸೇರಿದಂತೆ ವಿವಿಧ ಹಂತದಲ್ಲಿ ಒಟ್ಟು 4,234 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಕೃಷಿ ಆಯೋಗದ ಮಾರ್ಗಸೂಚಿಯಂತೆ ಪ್ರತಿ 5,000 ಜಾನುವಾರು ಘಟಕಗಳಿಗೆ ಒಂದು ಪಶುವೈದ್ಯಕೀಯ ಸಂಸ್ಥೆ ಇರಬೇಕಾಗುತ್ತದೆ.
ಆದರೆ, ರಾಜ್ಯದಲ್ಲಿ ಈ ಪ್ರಮಾಣಕ್ಕನುಗುಣವಾಗಿ ಪಶುವೈದ್ಯಕೀಯ ಸಂಸ್ಥೆಗಳು ಸ್ಥಾಪಿತವಾಗಿಲ್ಲ. ಇತ್ತ ಗ್ರಾಮಾಂತರ ಪ್ರದೇಶದ ಜಾನುವಾರುಗಳಿಗೆ ಸಮರ್ಪಕವಾಗಿ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ತಮ್ಮ ಕ್ಷೇತ್ರಗಳಿಗೆ ಪಶುವೈದ್ಯಕೀಯ ಸಂಸ್ಥೆಗಳನ್ನು ಮಂಜೂರು ಮಾಡುವಂತೆ ಕೋರಿ ಮನವಿಗಳನ್ನು ಸಲ್ಲಿಸಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹೊಸದಾಗಿ ಪಶುವೈದ್ಯಕೀಯ ಸಂಸ್ಥೆಗಳನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಹೀಗಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ 1,300 ಕ್ಕಿಂತ ಕಡಿಮೆ ಇರುವ ಜಾನುವಾರು ಘಟಕಗಳ ಪಶುವೈದ್ಯಕೀಯ ಸಂಸ್ಥೆಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ರಾಷ್ಟ್ರೀಯ ಕೃಷಿ ಆಯೋಗದ ಮಾರ್ಗಸೂಚಿಯನ್ವಯ ಹಾಗೂ ಇಲಾಖೆಯ ಆಡಳಿತಾತ್ಮಕ ಹಿತದೃಷ್ಟಿಯಿಂದ ಜಾನುವಾರು ಘಟಕಗಳ ಸಂಖ್ಯೆ ಹೆಚ್ಚಿರುವ ಹಾಗೂ ಪಶುವೈದ್ಯ ಸಂಸ್ಥೆ ಹೆಚ್ಚು ಅವಶ್ಯವಿರುವ ವಿವಿಧ ಸ್ಥಳಗಳಿಗೆ ಹುದ್ದೆಗಳ ಸಮೇತ ಸ್ಥಳಾಂತರಿ ಆದೇಶ ಹೊರಡಿಸಿದೆ. ಪಶುಸಂಗೋಪಾನೆ ಇಲಾಖೆಯ ಆದೇಶದಿಂದ ಸದ್ಯ ಬೆಂಗಳೂರಿನ ಪ್ರಾಣಿ ಪ್ರಿಯರು ಕಿಡಿಕಾರಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.