ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯ ಜಿಲ್ಲೆಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎರಡು ವಿದ್ಯಾರ್ಥಿಗಳ ಗುಂಪುಗಳ ನಡುವೆ ನಡೆದಿರುವ ಘರ್ಷಣೆ ತಡವಾಗಿ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 2ರಂದು ವಿವಿಯ ಮೆಸ್‌ನಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ದೆಹಲಿ ಮೂಲದ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ವಿದ್ಯಾರ್ಥಿ ಚುಡಾಯಿಸಿದ್ದಾನೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಯ ಮೆಸ್‌ನಲ್ಲಿ ವಿದ್ಯಾರ್ಥಿಗಳು ಊಟ ಮಾಡುತ್ತಿರುವಾಗ ಎರಡು ವಿದ್ಯಾರ್ಥಿಗಳ ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ.
ಇದನ್ನೂ ಓದಿ | Rain News | ಕೊಡಗಿನಲ್ಲಿ ಮಳೆಯ ಅಬ್ಬರ : ಹಲವೆಡೆ ಭೂಕುಸಿತ, ಸರ್ಕಾರದ ವಿರುದ್ಧ ಆಕ್ರೋಶ
ಇದರ ಬೆನ್ನಲ್ಲೇ ಕೆಲ ವಿದ್ಯಾರ್ಥಿಗಳ ಮೆಸ್‌ನ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ವಿಶ್ವವಿದ್ಯಾಲಯ ಮುಖ್ಯಸ್ಥರು ಗಲಾಟೆ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಯಾವುದೇ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ.
ಮತ್ತೊಂದು ಜೆಎನ್‌ಯು ಆಗಲು ಹೊರಟಿದೆಯಾ ಕೇಂದ್ರೀಯ ವಿವಿ?
ಹಿಂದುಳಿದ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಲಿ ಎಂಬ ದೃಷ್ಟಿಯಿಂದ ಸ್ಥಾಪನೆಯಾಗಿರುವ ರಾಜ್ಯದ ಮೊಟ್ಟಮೊದಲ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಬದಲು ಹೊಡೆದಾಟ, ರೌಡಿಸಂ ಮಾಡುತ್ತಾ ಕಾಲ ಕಳೆಯುತ್ತಿರುವ ಬಗ್ಗೆ ಕೇಂದ್ರಿಯ ವಿವಿ ಮತ್ತೊಂದು ಜೆಎನ್‌ಯು ವಿವಿ ಆಗುತ್ತಿದೆಯಾ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಕಳೆದ ವರ್ಷ ಹಿಂದೆ ಕೂಡ ಕೆಲ ವಿದ್ಯಾರ್ಥಿಗಳ ಗುಂಪು ಕ್ಯಾಂಪಸ್‌ನಲ್ಲಿ ರಾಮನವಮಿ ದಿನದಂದು ಕ್ಯಾಂಪಸ್‌ನಲ್ಲಿನ ದೇವಿಗೆ ಪೂಜೆ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಒಂದು ಗುಂಪಿನ ವಿದ್ಯಾರ್ಥಿಗಳು ಪೂಜೆ ಮಾಡಿದ ಗುಂಪಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದರು. ವಿಶ್ವವಿದ್ಯಾಲಯದಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿವಿಯಲ್ಲಿ ಪ್ರತ್ಯೇಕ ಪೊಲೀಸ್ ಠಾಣೆ ಆರಂಭಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ | School Robbery | ಶಾಲೆಗೆ ಕನ್ನ: ಮಕ್ಕಳ ಶೂ, ಸಾಕ್ಸ್, ವಾಲಿಬಾಲನ್ನೂ ಕದ್ದ ಖದೀಮರು !