ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಸಿಬ್ಬಂದಿ ವೇತನ ಪಾವತಿಯಲ್ಲಿ ವ್ಯತ್ಯಾಸವಾಗಿ ನಿಯಮ ಉಲ್ಲಂಘನೆಯಾಗಿದೆ. ಒಟ್ಟು ೧.೦೭ ಕೋಟಿ ರೂ.ಗಳ ವ್ಯತ್ಯಾಸ ಇರುವುದು ಕಂಡುಬಂದಿದೆ.
೧೩೭ ಗುತ್ತಿಗೆ ನೌಕರರಿಗೆ ನಿಗದಿಗಿಂತ ಕಡಿಮೆ ವೇತನವನ್ನು ವಿವಿಯೊಂದಿಗೆ ಒಪ್ಪಂದ ಮಾಡಿಕೊಂಡು ಗುತ್ತಿಗೆದಾರ ಸಂಸ್ಥೆ ನೀಡಿದೆ ಎನ್ನುವ ಮಾಹಿತಿಯನ್ನು ವಿವಿ ನೇಮಿಸಿದ ಸತ್ಯಶೋಧನಾ ಸಮಿತಿಯೇ ತನ್ನ ವರದಿಯಲ್ಲಿ ತಿಳಿಸಿದೆ. ವಿವಿಯ ಪಾವತಿಸಿದ ವೇತನ ಮತ್ತು ಗುತ್ತಿಗೆದಾರ ಸಂಸ್ಥೆ ಪಾವತಿಸಿದ ವೇತನದಲ್ಲಿ ೧.೦೭ ಕೋಟಿ ರೂ.ಗಳ ವ್ಯತ್ಯಾಸ ಕಂಡು ಬಂದಿದೆ ಎಂಬ ಅಂಶವನ್ನು ತನ್ನ ವರದಿಯಲ್ಲಿ ಸಮಿತಿಯು ಪ್ರಸ್ತಾಪಿಸಿದೆ.
ಸಮಿತಿಯಿಂದಲೇ ಸತ್ಯ ಬಹಿರಂಗ:
ಹೊರಗುತ್ತಿಗೆ ನೌಕರರಿಗೆ ಪಾವತಿಸುತ್ತಿರುವ ವೇತನದಲ್ಲಿ ಅಕ್ರಮ ಮತ್ತು ನಿಯಮ ಉಲ್ಲಂಘನೆಯಾಗಿದೆ ಎಂದು ಸಿಂಡಿಕೇಟ್ ಸದಸ್ಯ ಮರ್ಚೇಡ್ ಮಲ್ಲಿಕಾರ್ಜುನಗೌಡ ಅವರು ಕುಲಸಚಿವ ಪ್ರೊ.ಎಸ್.ಸಿ.ಪಾಟೀಲ್ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ ಗುತ್ತಿಗೆ ನೌಕರ ವೇತನ ಪಾವತಿಯಲ್ಲಿ ಅಕ್ರಮವಾಗಿದೆ. ನಿಯಮ ಪಾಲನೆ ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಸಿಂಡಿಕೇಟ್ ಸದಸ್ಯ ಪ್ರೊ. ಎಚ್. ಜಯಪ್ರಕಾಶ್ ಗೌಡ ನೇತೃತ್ವದಲ್ಲಿ ರಚನೆ ಮಾಡಿದ್ದ ಸತ್ಯಶೋಧನಾ ಸಮಿತಿಯೇ ಈ ವಿಚಾರವನ್ನು ತನ್ನ ವರದಿಯಲ್ಲಿ ಪ್ರಸ್ತಾಪಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ | Muslim college | ಮುಸ್ಲಿಂ ಯುವತಿಯರಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದ ಸಿಎಂ
ಇಂಡಸ್ ಸೆಕ್ಯೂರಿಟಿ ಸರ್ವಿಸ್ ಆ್ಯಂಡ್ ಡಿಟೆಕ್ಟಿವ್ ಧಾರವಾಡ ಸಂಸ್ಥೆಗೆ ಸಮಿತಿಯು ಪತ್ರ ಬರೆದು ಆರೋಪಕ್ಕೆ ಸಂಬಂಧ ಪಟ್ಟಂತೆ ಮಾಹಿತಿ ಕೇಳಿತ್ತು. ಆದರೆ ಗುತ್ತಿಗೆದಾರ ಸಂಸ್ಥೆಯಿಂದ ಯಾವುದೇ ಉತ್ತರ ಬಂದಿಲ್ಲ. ಸಮಿತಿಯು ಕೆಲವು ನೌಕರರ ವೇತನ ಪಾವತಿಯನ್ನು ಪರಿಶೀಲಿಸಿದಾಗ ಪ್ರತಿ ತಿಂಗಳ ಪಾವತಿಸಿದ ಸಂಬಳದಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಯಾರಿಗೆ ಮತ್ತು ಎಷ್ಟು ಕಡಿಮೆ ವೇತನ ಪಾವತಿ?
ವಿಎಸ್‌ಕೆ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಇಒ, ಜವಾನ, ಸ್ವೀಪರ್ಸ್ ಮತ್ತು ಸ್ಕ್ಯಾವೆಂಜರ್‌ಗಳಿಗೆ ತಿಂಗಳಿಗೆ ನೀಡುವ ವೇತನದಲ್ಲಿ ೨೮೨೫ ರೂ. ಮತ್ತು ೨೭೭೯ ರೂ.ಗಳನ್ನು ಕಡಿಮೆ ಪಾವತಿಸಿರುವುದು ಸತ್ಯಶೋಧನಾ ಸಮಿತಿಯ ಗಮನಕ್ಕೆ ಬಂದಿದೆ. ಡಿಇಒಗಳಿಗೆ ವಿವಿಯು ೨೧೪೯೭ ರೂ. ಒಟ್ಟು ವೇತನದಲ್ಲಿ ಕೆಲವೊಂದು ಕಡಿತಗೊಂಡು ೧೩,೪೪೫ ರೂ. ತಿಂಗಳ ವೇತನ ಪಾವತಿಸಿದರೆ, ಗುತ್ತಿಗೆದಾರ ಸಂಸ್ಥೆಯು ೧೨,೦೨೫ ರೂ. ನೀಡಿದೆ. ೧೪೨೦ ರೂ. ಕಡಿಮೆ ವೇತನ ನೀಡಿದೆ. ಇನ್ನು ವಿವಿಯು ಪಿಎಫ್ ೩೮೫೩ ರೂ. ನೀಡಿದರೆ, ಗುತ್ತಿಗೆದಾರ ಸಂಸ್ಥೆಯು ೨೩೭೦ ರೂ.ಗಳಿಗೆ ನೀಡಿದೆ, ೧೪೦೫ ರೂ. ವ್ಯತ್ಯಾಸ ಕಂಡು ಬಂದಿದೆ. ಒಟ್ಟು ೨೮೨೫ ರೂ.ಕಡಿಮೆ ವೇತನ ನೀಡಿದೆ.
ವಿವಿ ನೀಡಿದ ವೇತನ ಎಷ್ಟು, ಗುತ್ತಿಗೆ ಸಂಸ್ಥೆ ನೀಡಿದ ವೇತನ ಎಷ್ಟು:
ಜವಾನನಿಗೆ ಒಟ್ಟು ೧೮,೫೬೭ ರೂ. ವೇತನವಿದ್ದು, ಕಡಿತಗೊಂಡು ೧೧,೬೧೩ ವಿವಿಯು ನೀಡಿದರೆ, ಗುತ್ತಿಗೆ ಸಂಸ್ಥೆಯು ೧೦,೩೦೫ ರೂ.ಗಳನ್ನು ನೀಡಿದೆ, ೧೩೦೮ ರೂ.ಗಳ ವ್ಯತ್ಯಾಸ ಮಾಡಿದೆ. ವಿವಿಯು ೩೩೨೮ ರೂ.ಗಳ ಪಿಎಫ್ ಪಾವತಿಸಿದರೆ, ಗುತ್ತಿಗೆ ಸಂಸ್ಥೆಯು ೧೭೯೦ ರೂ.ಗಳನ್ನು ನೀಡಿದೆ. ಇದರಲ್ಲಿ ೧೪೭೧ ರೂ.ಗಳ ವ್ಯತ್ಯಾಸ ಮಾಡಿದೆ. ಇದರಿಂದಾಗಿ ಒಬ್ಬ ಜವಾನನಿಗೆ ೨೭೭೯ ರೂ.ಗಳ ಕಡಿಮೆ ವೇತನ ನೀಡಿರುವುದು ಸಮಿತಿಯು ಪರಿಶೀಲನೆಯಲ್ಲಿ ಕಂಡು ಬಂದಿದೆ.
ಇದನ್ನೂ ಓದಿ | ರಾಯಚೂರಲ್ಲಿ ಲವ್ ಜಿಹಾದ್; ನಿಶ್ಚಿತಾರ್ಥ ಆಗಿದ್ದ ಹುಡುಗಿಯನ್ನು ಮದುವೆಯಾದ ಮುಸ್ಲಿಂ ಯುವಕ, ಬುರ್ಖಾ ಧರಿಸಿ ಬಂದ ಯುವತಿ!
೨೮ ತಿಂಗಳಿಂದ ವ್ಯತ್ಯಾಸದ ವೇತನ ನೀಡಿದ ಸಂಸ್ಥೆ:
ಗುತ್ತಿಗೆ ಪಡೆದ ಸಂಸ್ಥೆಯು ೨೦೨೦ ಜೂನ್ ತಿಂಗಳಿಂದ ಜುಲೈ ೨೦೨೨ರವೆರೆಗೆ ಸುಮಾರು ೨೮ ತಿಂಗಳವರೆಗೆ ಇದೇ ವೇತನ ಪಾವತಿ ಮಾಡಿದೆ. ೬೨ ಡಿಇಒಗಳಿಗೆ ಮಾಸಿಕವಾಗಿ ೧,೭೫,೧೫೦ ರೂ.ಗಳನ್ನು ವೇತನದಲ್ಲಿ ವ್ಯತ್ಯಾಸ ಮಾಡಿದೆ. ೨೮ ತಿಂಗಳಿಗೆ ೪೯,೦೯,೨೦೦ ರೂ.ಗಳಾಗಿದೆ. ಇನ್ನು ೭೫ ಜವಾನ್, ಸ್ವೀಪರ್ಸ್, ಸ್ಕ್ಯಾವೆಂಜರ್ಸ್ ತಿಂಗಳಿಗೆ ೨,೦೮,೫೦೦ ರೂ.ಗಳನ್ನು ವೇತನದಲ್ಲಿ ವ್ಯತ್ಯಾಸ ಮಾಡಲಾಗಿದೆ. ೨೮ ತಿಂಗಳಿಗೆ ೫೮,೩೮,೦೦೦ ರೂ.ಗಳ ವೇತನ ವ್ಯತ್ಯಾಸವಾಗಿದೆ. ೨೮ ತಿಂಗಳಿಗೆ ೧೩೭ ಗುತ್ತಿಗೆ ಸಿಬ್ಬಂದಿಗೆ ೧,೦೭,೪೨,೨೦೦ ರೂ.ಗಳಿಗೆ ಕಡಿಮೆ ವೇತನ ನೀಡಿರುವುದನ್ನು ಸತ್ಯಶೋಧನಾ ಸಮಿತಿಯು ಪರಿಶೀಲನೆಯ ಸಂದರ್ಭದಲ್ಲಿ ಅಂದಾಜು ಮಾಡಿದೆ.
ಗುತ್ತಿಗೆದಾರ ಸಂಸ್ಥೆ ಮತ್ತು ವಿವಿ ನಡುವಿನ ಒಪ್ಪಂದದಲ್ಲಿ ಏನಿದೆ?
ವಿಎಸ್‌ಕೆ ವಿವಿಯು ವಿಶ್ವವಿದ್ಯಾಲಯವು ಇಂಡಸ್ ಸೆಕ್ಯೂರಿಟಿ ಸರ್ವಿಸ್ ಆ್ಯಂಡ್ ಡಿಟೆಕ್ಟಿವ್ ಧಾರವಾಡ ಸಂಸ್ಥೆಯೊಂದಿಗೆ ಮೇ ೨೧,೨೦೨೦ರಂದು ಮಾಡಿಕೊಂಡ ಒಪ್ಪಂದ ಅನ್ವಯ ಸಂಸ್ಥೆಯು ಸಂಬಳದ ವಿವರವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. ವಿಶ್ವವಿದ್ಯಾಲಯದ ವೇತನದ ವಿವರಗಳನ್ನು ವಿಶ್ವವಿದ್ಯಾಲಯದ ಹಣಕಾಸು ವಿಭಾಗ ಪರಿಶೀಲಿಸಬೇಕಾಗುತ್ತದೆ. ಆದರೆ, ಗುತ್ತಿಗೆದಾರ ಸಂಸ್ಥೆಯು ವೇತನ ವಿವರ ನೀಡದಿರುವುದು ಮತ್ತು ವಿವಿಯ ಹಣಕಾಸು ವಿಭಾಗವು ಗಮನಿಸದಿರುವುದರಿಂದ ವೇತನ ವ್ಯತ್ಯಾಸದ ಅಂಶದಿಂದ ಮೇಲ್ನೋಟಕ್ಕೆ ತಿಳಿಯುತ್ತಿದೆ.
ವ್ಯತ್ಯಾಸ ವೇತನ ಹಿಂದಕ್ಕೆ ಪಡೆಯಲು ಸಮಿತಿ ವರದಿ:
ವಿವಿಯ ಹಣಕಾಸು ವಿಭಾಗವು ಪರಿಶೀಲನೆ ನಡೆಸಿ, ವೇತನ ವ್ಯತ್ಯಾಸವನ್ನು ಖಚಿತ ಪಡಿಸಿಕೊಂಡಿದೆ. ಅಲ್ಲದೆ, ಒಡಂಬಡಿಕೆ ಉಲ್ಲಂಘನೆಯಾಗಿರುವುದರಿಂದ ಕಡಿಮೆ ಪಾವತಿಸಿದ ಹಣವನ್ನು ಗುತ್ತಿಗೆದಾರ ಸಂಸ್ಥೆಯಿಂದ ಭರಿಸಿಕೊಳ್ಳುವ ನಿಟ್ಟಿನಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಹಾಗೂ ಹಣಕಾಸು ವಿಭಾಗ ಮುಂದೆ ಇಂತಹ ಲೋಪವಾಗದಂತೆ ಗಮನವಹಿಸಬೇಕೆಂಬ ವಿಷಯವನ್ನು ಸಮಿತಿಯ ವಿವಿಗೆ ನೀಡಿರುವ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ ಎಂಬ ಮಾಹಿತಿಯು ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.
ಗುತ್ತಿಗೆ ಸಿಬ್ಬಂದಿ ವೇತನ ನೀಡಿಕೆಯಲ್ಲಿ ವ್ಯತ್ಯಾಸವಾಗಿರುವುದು ಸತ್ಯಶೋಧನಾ ಸಮಿತಿಯಲ್ಲಿ ಕಂಡು ಬಂದಿದೆ. ಕೂಡಲೇ ವ್ಯತ್ಯಾಸದ ವೇತನವನ್ನು ವಸೂಲಿ ಮಾಡಬೇಕು, ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಕೀಲರಾದ ವೆಂಕಟೇಶ್ ಹೆಗಡೆ ಹಾಗೂ ಬಳ್ಳಾರಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಜೋಳದರಾಶಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | Border Dispute | ಡಿ. 3ರಂದು ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಭೇಟಿ ಫಿಕ್ಸ್; ಗಡಿಯಲ್ಲಿ ಸರಣಿ ಸಭೆ