ಶಶಿಧರ್ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ಕೇಂದ್ರ ಸರಕಾರದ ಉಡಾನ್ ಯೋಜನೆ ಅಡಿಯಲ್ಲಿ ವಿದ್ಯಾನಗರ (ಬಳ್ಳಾರಿ)ದಿಂದ ಬೆಂಗಳೂರು ಮತ್ತು ಹೈದರಾಬಾದ್‌ಗೆ ಮತ್ತೆ ವಿಮಾನ ಹಾರಲಿದೆ. ಈ ಮೂಲಕ ಕಳೆದ ಏಳು ತಿಂಗಳಿಂದ ಹಿಡಿದಿದ್ದ ಗ್ರಹಣ ವಿಮೋಚನೆ ಯಾಗಲಿದೆ. ಅ.೩೦ರಂದಿಲೇ ವಿಮಾನ ಹಾರಾಟ ಪುನರಾರಂಭಗೊಳ್ಳಲಿದೆ. ಟ್ರೂಜೆಟ್ ಕಂಪನಿ ತಾಂತ್ರಿಕ ಸಮಸ್ಯೆಯಿಂದಾಗಿ ಮಾರ್ಚ್‌ನಲ್ಲಿ ನಿಲ್ಲಿಸಿದ್ದ ಹಾರಾಟವನ್ನು ಈಗ ಅಲಯನ್ಸ್ ಏರ್ ಮುಂದುವರಿಸಲಿದೆ.
ದೇಶದ ಸಾಮಾನ್ಯ ನಾಗರಿಕರು ವಿಮಾನದಲ್ಲಿ ಹಾರಾಟ ಮಾಡಬೇಕು ಮತ್ತು ಸಣ್ಣ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಬೇಕು ಎಂಬ ಉದ್ದೇಶದಿಂದ ಉಡಾನ್ ಯೋಜನೆ ಅಡಿಯಲ್ಲಿ ಗಣಿ ಜಿಲ್ಲೆಯ ವಿದ್ಯಾ ನಗರದಿಂದ ಬೆಂಗಳೂರು ಮತ್ತು ಹೈದರಾಬಾದ್‌ಗೆ ವಿಮಾನ ಹಾರಾಟ ಆರಂಭವಾಗಿತ್ತು. ಈ ಭಾಗದಲ್ಲಿ ವಿಮಾನ ಸಂಚರಿಸಲು ಗುತ್ತಿಗೆ ಪಡೆದಿರುವ ಟ್ರೂಜೆಟ್ ಕಂಪನಿಯು 2017ರ ಮಾರ್ಚ್‌ನಿಂದ ವಿದ್ಯಾನಗರದಿಂದ ಬೆಂಗಳೂರು, ವಿದ್ಯಾನಗರದಿಂದ ಹೈದರಾಬಾದ್ ವಿಮಾನ ಹಾರಾಟವನ್ನು ಆರಂಭಿಸಿತ್ತು.
ಟ್ರೂಜೆಟ್‌ನಿಂದ ಅಲೆಯನ್ಸ್ ಏರ್‌ಗೆ ಜವಾಬ್ದಾರಿ
ಈ ಹಿಂದೆ ಈ ಭಾಗದ ವಿಮಾನ ಹಾರಾಟವನ್ನು ಹೈದರಾಬಾದ್ ಮೂಲದ ಕಂಪನಿ ಟ್ರೂಜೆಟ್ ಟೆಂಡರ್ ಪಡೆದಿತ್ತು. ಕಂಪನಿಯು ಆರಂಭದಲ್ಲಿ ವಾರದ ಏಳು ದಿನಗಳ ಕಾಲ ವಿಮಾನ ಹಾರಾಟ ಮಾಡುತ್ತಿತ್ತು. ನಂತರದಲ್ಲಿ ವಾರಕ್ಕೆ ಮೂರು ದಿನ ಮತ್ತು ಎರಡು ದಿನಕ್ಕೆ ಸೀಮಿತವಾಗಿ ನಂತರದಲ್ಲಿ ಹಾರಾಟ ಸ್ಥಗಿತವಾಗಿತ್ತು. ಆದರೆ ಈಗ ಅಲೆಯನ್ಸ್ ಏರ್ ಕಂಪನಿಯು ಉಡಾನ್ ಯೋಜನೆ ಅಡಿಯಲ್ಲಿ ಈ ಭಾಗದಲ್ಲಿ ವಿಮಾನ ಹಾರಾಟಕ್ಕೆ ಬಿಡ್ಡನ್ನು ಪಡೆದಿದೆ. ಕಂಪನಿಯು ಅ.೩೦ರಿಂದಲೇ ವಿಮಾನ ಹಾರಾಟವನ್ನು ಶುರು ಮಾಡಲಿದೆ.
ಅಂದು ಒಂದು, ಇಂದು ಎರಡು ವಿಮಾನ
ಅಂದು ವಿಮಾನ ಹಾರಾಟದ ಬಿಡ್ ಪಡೆದಿರುವ ಟ್ರೂಜೆಟ್ ಕಂಪನಿಯು ಒಂದೇ ವಿಮಾನವನ್ನು ಹೈದರಾಬಾದ್, ಬಳ್ಳಾರಿ(ವಿದ್ಯಾನಗರ) ಮತ್ತು ಬೆಂಗಳೂರು ಮಧ್ಯೆ ಓಡಿಸುತ್ತಿತ್ತು. ಬೆಳಿಗ್ಗೆ ಹೈದರಾಬಾದ್‌ನಿಂದ ವಿದ್ಯಾನಗರಕ್ಕೆ ಆಗಮಿಸುತ್ತಿದ್ದ ವಿಮಾನವು, ನಂತರ ಬೆಂಗಳೂರಿಗೆ ತೆರಳುತ್ತಿತ್ತು. ನಂತರದಲ್ಲಿ ಬೆಂಗಳೂರಿನಿಂದ ವಿದ್ಯಾನಗರಕ್ಕೆ ಅಲ್ಲಿಂದ ಹೈದ್ರಾಬಾದ್‌ಗೆ ತೆರಳುತ್ತಿತ್ತು. ಆದರೆ ಅಲೆಯನ್ಸ್ ಏರ್ ಕಂಪನಿಯು ಎರಡು ಪತ್ಯೇಕ ವಿಮಾನ ವ್ಯವಸ್ಥೆ ಮಾಡಿದೆ. ಹೈದರಾಬಾದ್ ಮತ್ತು ವಿದ್ಯಾ ನಗರದ ಮಧ್ಯೆ ಒಂದು ವಿಮಾನ, ಬೆಂಗಳೂರು ಮತ್ತು ವಿದ್ಯಾನಗರ ಮಧ್ಯೆ ಒಂದು ವಿಮಾನ ಹಾರಾಟದ ವ್ಯವಸ್ಥೆ ಮಾಡಿದೆ.
ಈಗ ಎಷ್ಟು ವಿಮಾನ, ಟೈಮಿಂಗ್ಸ್ ಯಾವುದು?
ಅಲೆಯನ್ಸ್ ಕಂಪನಿಯ ವಿಮಾನ ಹಾರಾಟದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ವಾರಕ್ಕೆ ಏಳು ದಿನಗಳ ಕಾಲ ವಿಮಾನ ಹಾರಾಟ ಮಾಡಲಿದೆ. ಬೆಳಿಗ್ಗೆ ೮.೫೫ಕ್ಕೆ ಹೈದ್ರಾಬಾದ್‌ನಿಂದ ಹೊರಟು, ಬಳ್ಳಾರಿ ಜಿಲ್ಲೆಯ ವಿದ್ಯಾನಗರಕ್ಕೆ ೧೦.೨೦ಕ್ಕೆ ಆಗಮಿಸಲಿದೆ. ವಿದ್ಯಾನಗರದಿಂದ ೧೦.೫೦ಕ್ಕೆ ಹೊರಟು, ೧೨.೨೦ಕ್ಕೆ ಹೈದರಾಬಾದ್ ತಲುಪಲಿದೆ. ಮೊತ್ತೊಂದು ವಿಮಾನವು ಮಧ್ಯಾಹ್ನ ೩.೧೫ಕ್ಕೆ ಬೆಂಗಳೂರಿನಿಂದ ಹೊರಟು ೪.೨೦ಕ್ಕೆ ಬಳ್ಳಾರಿಯ ವಿದ್ಯಾನಗರಕ್ಕೆ ಆಗಮಿಸಲಿದೆ, ೪.೪೫ಕ್ಕೆ ವಿದ್ಯಾನಗರದಿಂದ ತೆರಳಿ ೫.೫೫ಕ್ಕೆ ಬೆಂಗಳೂರು ತಲುಪಲಿದೆ. ೭೨ ಸೀಟುಗಳ ವಿಮಾನವಾಗಿದೆ. ಈಗಾಗಲೇ ಮುಂಗಡವಾಗಿ ಟಿಕೆಟ್ ಬುಕ್ ಆಗುತ್ತಿವೆ. ಮೇಕ್ ಮೈ ಟ್ರಿಪ್ ಮತ್ತು ಅಲೆಯನ್ಸ್ ಏರ್ ಡಾಮ್ ಕಾಮ್‌ನಲ್ಲಿ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.
ಟ್ರೂಜೆಟ್ ಸ್ಥಗಿತಗೊಳ್ಳಲು ಕಾರಣಗಳಿವು
ಈ ಭಾಗದಲ್ಲಿ ಗುತ್ತಿಗೆ ಪಡೆದಿರುವ ಟ್ರೂಜೆಟ್ ಕಂಪನಿಯು ಉಡಾನ್ ಯೋಜನೆ ಅಡಿಯಲ್ಲಿ ಹೈದರಾಬಾದ್, ಕಡಪ, ತಿರುಪತಿ, ಬೀದರ್, ಚೆನ್ನೈ, ಅಹಮದಾಬಾದ್, ಬೀದರ್, ಗೋವಾ, ರಾಜಮಂಡ್ರಿ ಸೇರಿದಂತೆ ಇತರ ನಗರಗಳಿಗೆ ವಿಮಾನ ಹಾರಾಟವನ್ನು ಗುತ್ತಿಗೆ ಪಡೆದಿತ್ತು. ಆದರೆ ಕಂಪನಿಯ ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಕೆಲವೊಂದು ವಿಮಾನ ಗ್ರೌಂಡ್ ಆಗಿರುವುದು, ಬಾಡಿಗೆ ಪಡೆದಿರುವ ವಿಮಾನಗಳ ಅವಧಿ ಮುಗಿದಿರುವುದು ಸೇರಿದಂತೆ ಕೆಲವೊಂದು ಕಾರಣದಿಂದಾಗಿ ಉಡಾನ್ ಯೋಜನೆ ಕೆಲವೊಂದು ವಿಮಾನಗಳ ಹಾರಾಟವನ್ನು ಕಂಪನಿ ಸ್ಥಗಿತಗೊಳಿಸಿತ್ತು.
ಇದನ್ನೂ ಓದಿ | ವಿಶ್ವದ ಬೃಹತ್ ವಿಮಾನದಲ್ಲಿ ಕನ್ನಡದಲ್ಲೇ ಸ್ವಾಗತ; ಪೈಲಟ್‌ಗೆ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಅಭಿನಂದನೆ