ಹೊಸಪೇಟೆ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಪಂಚಾಯಿತಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಾಹಕ ಅಧಿಕಾರಿಯನ್ನು (ಇ.ಒ) ನೇಮಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ತಾಲೂಕು ಒಂದರ ಪ್ರಮುಖ ಹುದ್ದೆಗೆ ಒಪ್ಪಂದದ ಮೇಲೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಇದೇ ಸರ್ಕಾರಿ ಮಟ್ಟದ ಅಧಿಕಾರಿಯನ್ನು ನೇಮಿಸಿದೆ ಎನ್ನಲಾಗಿದೆ. ಸರ್ಕಾರದ ಈ ಕ್ರಮಕ್ಕೆ ಭಾರೀ ತೀವ್ರ ಟೀಕೆ ವ್ಯಕ್ತವಾಗಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಜೆಸ್ಕಾಂ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್. ಪ್ರಕಾಶ್ ಎಂಬುವವರನ್ನು ಹೂವಿನಹಡಗಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿ ಆ. 25ರಂದು ಸರ್ಕಾರ ಆದೇಶಿಸಿತ್ತು. ಪ್ರಕಾಶ್ ಅಧಿಕಾರ ಸ್ವೀಕರಿಸುವುದೊಂದೇ ಬಾಕಿ ಇದೆ.
ಇದನ್ನೂ ಓದಿ | Rain News | ಧಾರಾಕಾರ ಮಳೆಯಿಂದ ತತ್ತರಿಸಿದ ಹಾವೇರಿ ಜನ; ಮಹಿಳೆ ಸಾವು, ಒಬ್ಬ ನಾಪತ್ತೆ
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ “ಎ” ದರ್ಜೆಯ ಅಧಿಕಾರಿಯನ್ನೇ ನೇಮಿಸಬೇಕು. ಎ ದರ್ಜೆಯ ಅಧಿಕಾರಿ ಇಲ್ಲದ ವೇಳೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರನ್ನು ನಿಯೋಜಿಸಲು ಅವಕಾಶ ಇದೆ. ಆದರೆ, ಸರ್ಕಾರವೇ ನಿಯಮಕ್ಕೆ ವಿರುದ್ಧವಾದ ಆದೇಶ ಮಾಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕಿನಲ್ಲಿ 29 ಇಲಾಖೆಗಳ ಆಡಳಿತ ನೋಡಿಕೊಳ್ಳುವುದು, ಪಿಡಿಒ, ಬಿಲ್ ಕಲೆಕ್ಟರ್‌ಗಳ ವೇತನ ಬಿಡುಗಡೆ, ಬಿಲ್‌ಗಳ ವಿಲೇವಾರಿಗೆ ಸಹಿ ಮಾಡುವ ಅಧಿಕಾರ ಹೊಂದಿರುತ್ತಾರೆ. ಗ್ರಾಮ ಪಂಚಾಯಿತಿ ಗಳ ಮೇಲ್ವಿಚಾರಣೆಯ ಅಧಿಕಾರವನ್ನೂ ಹೊಂದಿರುತ್ತಾರೆ. ಇಂತಹ ಮಹತ್ವದ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಸಹಾಯಕ ಇಒ ನೇಮಕ ಮಾಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ತನ್ನ ನಿರ್ಧಾರ ಹಿಂಪಡೆಯಬೇಕು ಎಂಬ ಮಾತುಗಳು ಕೇಳಿ ಬಂದಿದೆ.
ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿಮೆ ಸಂಖ್ಯೆ (ಕೆ.ಜಿ.ಐ.ಡಿ.) ಇರುತ್ತದೆ. ಆ ವಿಮೆ ಸಂಖ್ಯೆ ಆಧರಿಸಿ ಹಣಕಾಸಿನ ವಹಿವಾಟು, ಖಜಾನೆ ಇಲಾಖೆಯಲ್ಲಿ ಡಿಜಿಟಲ್ ಸಹಿ, ಬಿಲ್ ಪಾಸ್ ಮಾಡುವ ಅಧಿಕಾರ ಹೊಂದಿರುತ್ತಾರೆ. ಆದರೆ, ನಕಲಿ ಕೆ.ಜಿ.ಐ.ಡಿ. ಸಂಖ್ಯೆ ಸೃಷ್ಟಿಸಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ, ಮರು ಆದೇಶ ಹೊರಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸರ್ಕಾರ ಗುತ್ತಿಗೆ ಆಧಾರದ ಮೇಲೆ ಇಒ ನೇಮಕ ಮಾಡಿದೆ ನಿಜ. ಆದರೆ ಇಲಾಖೆಯಲ್ಲಿ ಹಣಕಾಸಿನ ಅವ್ಯವಹಾರ ನಡೆದರೆ ಯಾರು ಹೊಣೆ? ಸರ್ಕಾರದ ಪ್ರಮುಖ ಇಲಾಖೆಯ ಪ್ರಮುಖ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿದರೆ ಇದು ಇತರ ಇಲಾಖೆಗಳಿಗೂ ವಿಸ್ತರಿಸುವ ಆತಂಕ ಪಂಚಾಯತ್ ರಾಜ್ ಇಲಾಖೆಯ ನೌಕರರನ್ನು ಕಾಡುತ್ತಿದೆ.
ಇದನ್ನೂ ಓದಿ | ಸಚಿವ ಆನಂದ್ ಸಿಂಗ್ ವಿರುದ್ಧ ಜೀವ ಬೆದರಿಕೆ ಆರೋಪ; ಪೆಟ್ರೋಲ್ ಸುರಿದುಕೊಂಡು 9 ಮಂದಿ ಪ್ರತಿಭಟನೆ