Site icon Vistara News

Bear Attack : ವಿಜಯನಗರದ ಪಾರ್ಕ್‌, ಸ್ಟೇಡಿಯಂ‌ನಲ್ಲಿ ಸುತ್ತಾಡಿದ ಕರಡಿ; ದಿಕ್ಕಾಪಾಲಾಗಿ ಓಡಿದ ಜನರು

Bear Attack

ವಿಜಯನಗರ: ಇತ್ತೀಚೆಗಂತೂ ಕರಡಿ ಹಾವಳಿ (Bear Attack) ಹೆಚ್ಚಾಗಿದ್ದು, ಜನನಿಬಿಡ ಪ್ರದೇಶದಲ್ಲಿ ಪದೆಪದೇ ಕಾಣಿಸಿಕೊಂಡು ಆತಂಕವನ್ನು ಹೆಚ್ಚಿಸುತ್ತಿದೆ. ಕರಡಿಗಳು ಆಹಾರ ಅರಸಿ ನಾಡಿಗೆ ಬರುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿಯನ್ನೂ ಮಾಡುತ್ತಿವೆ. ಸದ್ಯ ಬೆಳ್ಳಂಬೆಳಗ್ಗೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಮೈಲಾರಲಿಂಗ ಕ್ರೀಡಾಂಗಣಕ್ಕೆ ಕರಡಿಯೊಂದು ಲಗ್ಗೆ ಇಟ್ಟಿತ್ತು.

ಕ್ರೀಡಾಂಗಣದ ಸುತ್ತಲೂ ವಾಕಿಂಗ್, ರನ್ನಿಂಗ್ ಮಾಡಿದ ಕರಡಿಯನ್ನು ಕಂಡು ವಾಕಿಂಗ್‌ ಬಂದಿದ್ದ ಜನರು ದಂಗಾಗಿ ಹೋಗಿದ್ದರು. ಕ್ರೀಡಾಂಗಣಕ್ಕೆ ಬಂದವರು ಕರಡಿ ಓಡಾಟದ ದೃಶ್ಯವನ್ನೆಲ್ಲ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಇತ್ತೀಚೆಗೆ ಕೂಡ್ಲಿಗಿ ಸುತ್ತಮುತ್ತ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಜನರು ಆತಂಕದಲ್ಲೇ ಓಡಾಡುವಂತಾಗಿದೆ. ಜನರನ್ನು ಕಂಡೊಡನೆ ಕರಡಿಯು ಮರವೇರಿ ಕುಳಿತಿತ್ತು.

ಇದನ್ನೂ ಓದಿ: Wild Animals Attack: ವಿಜಯನಗರ: ನಾಡಿಗೆ ನುಗ್ಗಿದ ಕರಡಿಯನ್ನು ರಾತ್ರೋರಾತ್ರಿ ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

ಅತ್ತ ಕೂಡ್ಲಿಗಿ ತಾಲೂಕಿನಲ್ಲಿ ಕ್ರೀಡಾಂಗಣಕ್ಕೆ ನುಗ್ಗಿ ಕರಡಿ ದಾಂಧಲೆ ಮಾಡಿದ್ರೆ, ಇತ್ತ ಹೊಸಪೇಟೆಯಲ್ಲಿರುವ ಶ್ರೀರಾಮುಲು ಪಾರ್ಕ್‌ಗೆ ಕರಡಿ ಪ್ರತ್ಯಕ್ಷಗೊಂಡಿತ್ತು. ಹೊಸಪೇಟೆಯ ಸಿಟಿ ಮಧ್ಯದಲ್ಲಿರುವ ಶ್ರೀರಾಮುಲು ಪಾರ್ಕ್ ಪ್ರತಿಷ್ಠಿತ ಪಾರ್ಕ್‌ಗಳಲ್ಲಿ ಒಂದಾಗಿದ್ದು, ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಯೋಗ, ವಾಕಿಂಗ್‌ಗೆ ಬರುತ್ತಾರೆ.

ಕಳೆದ 15 ದಿನದ ಹಿಂದೆ ರಾಣಿಪೇಟೆ ಎಂಬ ಅದೇ ಏರಿಯಾಕ್ಕೆ ಕರಡಿ ನುಗ್ಗಿತ್ತು. ಇಡೀ ಓಣಿ ತುಂಬಾ ಓಡಾಟ ನಡೆಸಿ ಭಯ ಹುಟ್ಟಿಸಿತ್ತು. ಇದೀಗ ಶುಕ್ರವಾರ ಬೆಳಗ್ಗೆ ಜನರು ಬರುವುದಕ್ಕೂ ಮೊದಲೇ ಶ್ರೀರಾಮುಲು ಪಾರ್ಕ್‌ಗೆ ಕರಡಿಯೊಂದು ಬಂದು ಅವಿತು ಕುಳಿತ್ತಿತ್ತು. ಪಾರ್ಕ್‌ಗೆ ವಾಕಿಂಗ್‌ ಮಾಡಲು ಬಂದವರು ಕರಡಿ ಕಂಡು ದಿಕ್ಕಾಪಾಲಾ ಓಡಿದ್ದರು. ಜನರ ಚೀರಾಟ, ಕಿರುಚಾಟಕ್ಕೆ ಗಾಬರಿಗೊಂಡ ಕರಡಿ ಪಾರ್ಕ್‌ನಲ್ಲಿದ್ದ ಸಣ್ಣ ಮನೆಗೆ ಹೋಗಿ ಅವಿತುಕೊಂಡಿತ್ತು.

ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು. ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಸೆರೆ ಹಿಡಿದರು. ಅವಿತು ಕುಳಿತಿದ್ದ ಕರಡಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದು, ಸ್ಥಳೀಯರಿಗಿದ್ದ ಆತಂಕ ದೂರ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version