ಹೊಸಪೇಟೆ: ಮುಂಬರುವ ಆರ್ಥಿಕ ವರ್ಷದಿಂದ ಸರ್ಕಾರ ಜಿಲ್ಲೆಗೆ ಭರಪೂರ ಅನುದಾನ ಬಿಡುಗಡೆ ಮಾಡಲಿದ್ದು, ಅಲ್ಲಿಯವರೆಗೆ ಜಿಲ್ಲೆಯಲ್ಲಿ ಇರುವ ಆರ್ಥಿಕ ಸಂಪನ್ಮೂಲ, ಅನುದಾನಗಳನ್ನು ಬಳಸಿಕೊಂಡು ಶಿಕ್ಷಣ (Education) ಮತ್ತು ಕುಡಿಯುವ ನೀರಿನ (Drinking Water) ಸೌಲಭ್ಯವನ್ನು ಒದಗಿಸಲು ಅಧಿಕಾರಿಗಳು ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅಧಿಕಾರಿಗಳಿಗೆ ಸೂಚಿಸಿದರು.
ಹೊಸಪೇಟೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಶೈಕ್ಷಣಿಕ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಾ ಕ್ಷೇತ್ರಗಳಿಂದ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದ ಹೆಚ್ಚಿನ ದೂರು ಬರುತ್ತಿದ್ದು, ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿನ ಅನೇಕ ಕೊಠಡಿಗಳು ದುರಸ್ತಿಯಿಂದ ಸೋರುತ್ತಿದ್ದು, ಇವುಗಳ ರಿಪೇರಿ ಬಹಳ ಪ್ರಮುಖವಾಗಿದೆ. ಈ ವರ್ಷದ ಡಿಎಂಎಫ್ ನಿಧಿಯಡಿ ಜಿಲ್ಲೆಯಲ್ಲಿನ ಎಲ್ಲ ಶಾಲೆಗಳ ಕೊಠಡಿ ದುರಸ್ತಿ ಮಾಡಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಎಲ್ಲ ಶಾಸಕರು ಸಹಕಾರ ನೀಡಬೇಕೆಂದು ಸಚಿವರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಎಲ್ಲ ಶಾಸಕರು ಒಪ್ಪಿಗೆ ನೀಡಿ ಮಕ್ಕಳ ಶಿಕ್ಷಣ ಬಹಳ ಪ್ರಮುಖವಾಗಿದ್ದು ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ ಎಂದರು.
ಸಭೆಯ ಆರಂಭದಲ್ಲಿ ಬರ ಸ್ಥಿತಿಗತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಜಿಲ್ಲೆಯಲ್ಲಿ ಈ ಬಾರಿ ಶೇ.36ರಷ್ಟು ಮಳೆ ಕೊರತೆಯ ವರದಿಯಾಗಿದ್ದು, ಅದರಲ್ಲಿ ಹೊಸಪೇಟೆಯಲ್ಲಿ ಅತಿ ಹೆಚ್ಚು (ಶೇ.57) ಮಳೆ ಕೊರತೆಯಾಗಿದೆ. ಜಿಲ್ಲೆಯಾದ್ಯಂತ ಆಗಸ್ಟ್ ತಿಂಗಳಲ್ಲಿ ತೀವ್ರ ಮಳೆಯ ಕೊರತೆ ಕಾರಣ ಬಿತ್ತನೆ ಮಾಡಿದ ಪ್ರದೇಶದಲ್ಲಿ ಒಟ್ಟು 2,73,263 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಈಗಾಗಲೇ ಜಿಲ್ಲೆಯಲ್ಲಿ ಬರದಿಂದ ಹಾನಿಯಾದ ಬೆಳೆಗಳ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇದು ಈಗಾಗಲೇ ಕ್ಯಾಬಿನೆಟ್‌ನಲ್ಲಿ ಮಂಡನೆಯಾಗಿ ಕೇಂದ್ರ ಸರ್ಕಾರಕ್ಕೂ ವರದಿ ಸಲ್ಲಿಸಲಾಗಿದೆ ಎಂದರು. ನಂತರ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಮಾತನಾಡಿ, ರಾಜ್ಯದಲ್ಲಿ ವಿಜಯನಗರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬೆಳೆ ನಷ್ಟ ಉಂಟಾಗಿದ್ದು, ಕೇಂದ್ರ ಬರ ಅಧ್ಯಯನ ತಂಡವೂ ಜಿಲ್ಲೆಗೆ ಭೇಟಿ ನೀಡಿದ ವೇಳೆ ಮಾಹಿತಿ ನೀಡಲು ಅಧ್ಯಯನ ಮಾರ್ಗದ ವಿವರವನ್ನು ಸಿದ್ದಪಡಿಸಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಪಾವಗಡ ಯೋಜನೆಗೆ ವೇಗ
ಕೂಡ್ಲಿಗಿ, ಮೊಳಕಾಲ್ಮೂರು, ಚಿತ್ರದುರ್ಗ, ಚಳ್ಳಕೆರೆ ಹಾಗೂ ಪಾವಗಡ ತಾಲೂಕುಗಳಿಗೆ ತುಂಗಭದ್ರಾ ಡ್ಯಾಂನಿಂದ ಕುಡಿಯುವ ನೀರು ಪೂರೈಕೆಗೆ ಬೃಹತ್ 2,200 ಕೋಟಿ ಮೊತ್ತದ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ವಿಷಯಕ್ಕೆ ಸಂಬಂಧಿಸಿದ ಸಭೆಯ ಗಮನಕ್ಕೆ ಕೂಡ್ಲಿಗಿ ಶಾಸಕ ಡಾ.ಎನ್.ಟಿ ಶ್ರೀನಿವಾಸ್, ತಂದಾಗ ಜಿಲ್ಲಾಧಿಕಾರಿಗಳು ಮಾತನಾಡಿ, 2017 ರ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆ ಅವರ ಕನಸಿನ ಕೂಸಾಗಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಜಾಕ್‌ವೆಲ್ ನಿರ್ಮಾಣ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಪೂರೈಸಿ ನೀರೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ನೀರಿನ ಸಮಸ್ಯೆ ಬಗೆಹರಿಸದ ಅಧಿಕಾರಿಗಳ ತರಾಟೆ
ಹರಪನಹಳ್ಳಿ ಕ್ಷೇತ್ರದ ಭಾಗದ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕುರಿತು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು. ಜತೆಗೆ ಕೆಲವೆಡೆ ನೀರು ಸಂಗ್ರಹಿಸಿದ ಒಂದು ದಿನದಲ್ಲಿಯೇ ಪಾಚಿ ಕಟ್ಟುತ್ತಿದೆ ಎಂದಾಗ ಜಿಲ್ಲಾ ಉಸ್ತುವಾರಿ ಸಚಿವರು, ಪರೀಕ್ಷೆಗೆ ನೀರನ್ನು ಏಕೆ ಒಳಪಡಿಸಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ನೀರನ್ನು ಪರೀಕ್ಷೆಗೆ ಒಳಪಡಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ಇದನ್ನೂ ಓದಿ: IND vs AUS: ಅಂತಿಮ ಪಂದ್ಯದಲ್ಲಿ ತಿರುಗಿ ಬಿದ್ದ ಆಸೀಸ್; ಭಾರತಕ್ಕೆ ಬೃಹತ್ ಮೊತ್ತದ ಗುರಿ
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮಿರಾಜ ನಾಯ್ಕ ಮಾತನಾಡಿ, ಕಳೆದ ಸಾಲಿನ 270 ಕೋಟಿ ಡಿಎಂಎಫ್ ಅನುದಾನ ಕ್ಷೇತ್ರಕ್ಕೆ ಬರಬೇಕಿದೆ ಎಂದು ತಿಳಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಒಂದು ವಾರದಲ್ಲಿ ಡಿಎಂಎಫ್ ಅನುದಾನವನ್ನು ಬಿಡುಗಡೆ ಮಾಡಲು ಬಳ್ಳಾರಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ ಎಂದರು.
ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ವಿಜಯನಗರ ಕ್ಷೇತ್ರದ ಶಾಸಕ ಎಚ್.ಆರ್ ಗವಿಯಪ್ಪ ಮಾತನಾಡಿ, ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ, ಜತೆಗೆ ಚರಂಡಿ ಕೊಳಚೆ ನೀರು ಕಾಲುವೆ ಹಾಗೂ ಜಲಾಶಯಕ್ಕೆ ಸೇರುತ್ತದೆ. ಈ ಬಗ್ಗೆ ಹೆಚ್ಚಿನ ಕ್ರಮವಹಿಸಿ ಅಧಿಕಾರಿಗಳು ಯೋಜನೆ ರೂಪಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಭೆಯ ಗಮನಕ್ಕೆ ತಂದರು. ಅದರ ಜತೆಗೆ ನೀರಿನ ಟ್ಯಾಂಕ್‌ಗಳ ದುರಸ್ತಿ, ಮಾರ್ಪಾಡು ಮತ್ತು ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಿಸಬೇಕು ಎಂದು ತಿಳಿಸಿದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪ್ರತ್ಯೇಕ ಸಭೆಯಲ್ಲಿ ಭಾಗಿಯಾಗಿ ಸಮಸ್ಯೆಯ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಸಚಿವರು ಸೂಚಿಸಿದರು.
ಹೊಸಪೇಟೆ ನಗರಸಭೆ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಮಾಹಿತಿ ಬಂದಿದ್ದು, ಮುಂದಿನ ಬಾರಿ ಎಲ್ಲ ವಾರ್ಡ್‌ಗಳಲ್ಲಿ ಭೇಟಿ ನೀಡುತ್ತೇನೆ, ಅಧಿಕಾರಿಗಳು ಸಮಸ್ಯೆಯ ಕುರಿತು ಪರಿಹಾರ ಯೋಜನೆ ರೂಪಿಸಬೇಕು ಎಂದು ಸಚಿವರು ಸೂಚಿಸಿದರು.
ಈ ವೇಳೆ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಹರಪನಹಳ್ಳಿ ನನ್ನದೇ ಗ್ರಾಮ ಅರಸೀಕೆರೆ ಗ್ರಾಮದಲ್ಲಿನ ಶುದ್ದ ಕುಡಿಯುವ ನೀರಿನ ಘಟಕ ದುರಸ್ತಿಯಾಗಿ ಹಲವು ತಿಂಗಳಾದರೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೂ ತಂದರೂ ರಿಪೇರಿಯಾಗಿಲ್ಲ. ಜಿಲ್ಲೆಯಲ್ಲಿ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಇದೇ ಸ್ಥಿತಿಯಲ್ಲಿದ್ದು ಆದಷ್ಟು ಬೇಗ ರಿಪೇರಿ ಮಾಡಿಸಿ ಜನರಿಗೆ ಶುದ್ದ ನೀರು ಒದಗಿಸಲು ತಿಳಿಸಿದರು.
ಇದನ್ನೂ ಓದಿ: Viral News: ಮಗಳ ಮದುವೆಗೆಂದು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ₹18 ಲಕ್ಷ ರೂ. ತಿಂದು ಹಾಕಿದ ಗೆದ್ದಲು! ಮುಂದೇನು?
ಈ ಸಂದರ್ಭದಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್. ಉಪಸ್ಥಿತರಿದ್ದರು.