ಹೊಸಪೇಟೆ (ವಿಜಯನಗರ): ಹಂಪಿ ಉತ್ಸವ-2024 ರ (Hampi Utsav 2024) ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿರುವ ಮತ್ಸ್ಯ ಮೇಳವು ವಿಶೇಷ ಆಕರ್ಷಣೆಯನ್ನು ಹೊಂದಿದ್ದು, ಜನರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಜಿಲ್ಲಾಡಳಿತ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಹಮ್ಮಿಕೊಂಡಿರುವ ಈ ಮತ್ಸ್ಯ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Hampi Utsav 2024: ಹಂಪಿ ಉತ್ಸವ; ಗಮನ ಸೆಳೆದ ಸಾವಯವ, ಸಿರಿಧಾನ್ಯಗಳ ವಸ್ತು ಪ್ರದರ್ಶನ
ಮತ್ಸ್ಯ ಮೇಳದಲ್ಲಿ ವಿಶಿಷ್ಟ ಹಾಗೂ ಅಪರೂಪದ ಮೀನುಗಳು, ಬಣ್ಣದ ಅಲಂಕಾರಿಕ ಮೀನುಗಳು ಸೇರಿದಂತೆ 65 ವಿವಿಧ ಬಗೆಯ ಮೀನುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಪ್ರಮುಖವಾಗಿ ಬರಾಕುಡಾ, ಟೈಗರ್, ಬಟರ್ಫಿಶ್, ಹೆರಿಂಗ್, ಸ್ಕ್ಯಾಂಡ್, ಪರ್ಲ್ಸ್ ಸ್ಟಾಟ್, ವೈಟಿಂಗ್, ಯೆಲ್ಲೊಫಿನ್ ಹಾಗೂ ಇತರೆ ಜಾತಿಯ ವಿವಿಧ ಬಗೆಯ ಮೀನುಗಳು ಈ ಮೇಳದ ಕೇಂದ್ರ ಬಿಂದುಗಳಾಗಿವೆ. ಮೀನು ಪ್ರಿಯರು ವಿವಿಧ ಜಾತಿಯ ಬಣ್ಣದ ಮೀನುಗಳನ್ನು ನೋಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಇದನ್ನೂ ಓದಿ: Karnataka Weather: ಈ ಜಿಲ್ಲೆಗಳಲ್ಲಿ ಇರಲಿದೆ ಭಾರಿ ಚಳಿ; ಬೆಂಗಳೂರಲ್ಲಿ ಹೇಗಿದೆ ವಾತಾವರಣ?
ಮೇಳದಲ್ಲಿ ಸಾರ್ವಜನಿಕರಿಗೆ ಮೀನಿನ ಆಹಾರ ಮತ್ತು ಮೀನು ಕೃಷಿಗೆ ಬೇಕಾಗುವ ಇನ್ನಿತರ ವಸ್ತುಗಳ ವಿವರಣೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.