ಹೊಸಪೇಟೆ: ಜಾನಪದ ಕಲೆ (Folk Art) ಮೂಲಕ ಜನಸಾಮಾನ್ಯರಿಗೆ ಆರೋಗ್ಯ ಸೇವೆಗಳ (Health Services) ಕುರಿತು ಅರಿವು ಮೂಡಿಸಲು ಎಲ್ಲಾ ಕಲಾತಂಡಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯ, ಕಮಲಾಪುರ ಇವರ ಸಂಯುಕ್ತಾಶ್ರಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಲಬುರಗಿ ವಿಭಾಗೀಯ ಮಟ್ಟದ ಜಾನಪದ ಕಲಾತಂಡಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಸಾರ್ವಜನಿಕರ ಗಮನಕ್ಕೆ ಬರಲಿ ಎಂಬ ಉದ್ದೇಶದಿಂದ ಜಾಹೀರಾತು, ಆಡಿಯೋ ಜಿಂಗಲ್ಸ್, ಎಲ್.ಇ.ಡಿ ಮೂಲಕ ವಿಡಿಯೋ ಬಿತ್ತರಿಸುವುದು ಹೀಗೆ ವಿವಿಧ ಬಗೆಗಳಲ್ಲಿ ಮಾಹಿತಿ ನೀಡಲಾಗುತ್ತದೆ.
ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಜಾನಪದ ಕಲಾತಂಡಗಳ ಮೂಲಕ ನೀಡುವ ಅರಿವು ಸುಲಭವಾಗಿ ಸಿಗಲಿದ್ದು, ಈ ಹಿನ್ನಲೆಯಲ್ಲಿ ಜಾನಪದಕ್ಕೆ ಒತ್ತು ನೀಡಲಾಗುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಜಾನಪದ ಕಲೆಗೆ ಅತ್ಯಂತ ಪ್ರಾಮುಖ್ಯತೆಯಿದೆ ಎಂದರು.
ಇದನ್ನೂ ಓದಿ: Job Alert: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ
ದೇಶ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ ಮತ್ತು ಆರೋಗ್ಯ ಪ್ರಮುಖ ಪಾತ್ರ ವಹಿಸಲಿವೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳು ಅತ್ಯಂತ ಮಹತ್ವದ್ದಾಗಿವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಮೂಲಕ ಅನುಷ್ಠಾನವಾಗುತ್ತಿರುವ ಸರ್ಕಾರದ ವಿವಿಧ ಯೋಜನೆಗಳು, ಸೇವೆಗಳು, ಕಾರ್ಯಕ್ರಮಗಳ ಸದುಪಯೋಗ, ರೋಗಗಳು ಮತ್ತು ಅವುಗಳ ಜಾಗೃತಿ, ಪರಿಹಾರದ ಬಗ್ಗೆ ಜಾನಪದ ಕಲೆ ಮೂಲಕ ತಿಳಿಸಿದಾಗ ಪ್ರತಿಯೊಬ್ಬ ನಾಗರೀಕರ ಮತ್ತು ವಿಶೇಷವಾಗಿ ಗ್ರಾಮೀಣ ಭಾಗದ ಸಾರ್ವಜನಿಕರ ಗಮನ ಸೆಳೆಯುವಂತಾಗುತ್ತದೆ.
ಈ ಉದ್ದೇಶದಿಂದ ಜಾನಪದ ಕಲಾತಂಡಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಕಲಾತಂಡಗಳ ವಿಭಾಗೀಯ ಮಟ್ಟದ ತರಬೇತಿ ಕಾರ್ಯಾಗಾರವನ್ನು ವಿಜಯನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಎಲ್ಲಾ ಕಲಾತಂಡದವರು ಈ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಆರೋಗ್ಯ ಸೇವೆಗಳು ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಶ್ರಮಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ವಚ್ಛತೆ, ಆರೋಗ್ಯ, ನೈರ್ಮಲ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Netflix Viewer Data: ನೆಟ್‌ಫ್ಲಿಕ್ಸ್‌ನಲ್ಲಿ ಈ ವರ್ಷ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಶೋ ಯಾವುದು?
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಅನಕ್ಷರಸ್ಥರಿಗೆ ಜನಪದ ಕಲೆ ಮೂಲಕ ಆರೋಗ್ಯ ಜಾಗೃತಿ ಮೂಡಿಸಲು ಸರ್ಕಾರ, ಆರೋಗ್ಯ ಇಲಾಖೆಯು ಕಾರ್ಯಕ್ರಮವನ್ನು ರೂಪಿಸಿದೆ. ಅನಕ್ಷರಸ್ಥರಿಗೆ ಲಿಪಿಗಿಂತ ಭಾಷೆ ಹೆಚ್ಚು ಸಂವಹನವನ್ನು ನೀಡುತ್ತದೆ. ಜಾನಪದ ಕಲೆಗಳು ನೋಡುವ ಮತ್ತು ಭಾಷೆಯಲ್ಲಿ ಕೇಳುವ ಕಲಾ ಪ್ರಕಾರಗಳಾಗಿದ್ದು, ಇಂತಹ ಕಲಾ ಪ್ರಕಾರಗಳ ಮೂಲಕ ಅರಿವು ಮೂಡಿಸಲು ಸಾಮಾನ್ಯರಿಗೆ ಪ್ರಭಾವಿಸುತ್ತವೆ.
ಕನ್ನಡ ವಿಶ್ವವಿದ್ಯಾಲಯವು ಆರಂಭಗೊಂಡು ಇಂದಿಗೆ 33 ವರ್ಷಗಳು ಕಳೆದಿವೆ. ಈ ವಿಶ್ವವಿದ್ಯಾಲಯವು ಜನಪದ ಮತ್ತು ಬುಡಕಟ್ಟು ಕಲೆಗಳ ಬಗ್ಗೆ ಉತ್ತಮ ಸಂಶೋಧನೆಗಳನ್ನು ಮಾಡಿ, ಪುಸ್ತಕಗಳನ್ನು ಪ್ರಕಟಿಸಿ, ವಿಚಾರ ಸಂಕಿರಣಗಳು ಹಾಗೂ ಉಪನ್ಯಾಸಗಳನ್ನು ಏರ್ಪಡಿಸಿದೆ. ಜನಪದ ಸಾಹಿತ್ಯದ ಮಹತ್ವವನ್ನು ಜನಸಾಮಾನ್ಯರಿಗೆ ಹಾಗೂ ವಿದ್ಯಾವಂತರಿಗೆ ತಲುಪಿಸುವಲ್ಲಿ ದೊಡ್ಡ ಪ್ರಯತ್ನವನ್ನು ನಮ್ಮ ವಿವಿ ಯಿಂದಾಗಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಬಿ.ಜಂಬಯ್ಯ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಭೀಮಪ್ಪ ಲಾಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಲ್.ಆರ್.ಶಂಕರ್ ನಾಯ್ಕ್, ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಪಾಟೀಲ್ ಹಾಗೂ ವಿಶ್ವನಾಥ ಪಾಟೀಲ್ ಸೇರಿದಂತೆ ಆರೋಗ್ಯಾಧಿಕಾರಿಗಳು, ವಿವಿಧ ಜಿಲ್ಲೆಗಳ ಆರೋಗ್ಯ ಶಿಕ್ಷಣಾಧಿಕಾರಿಗಳು, ಇತರರಿದ್ದರು.
ಇದನ್ನೂ ಓದಿ: Belagavi Winter Session: ಬಾಲ್ಯ ವಿವಾಹ ಪದ್ಧತಿಯನ್ನು ಬೇರು ಸಮೇತ ಕಿತ್ತು ಹಾಕ್ತೇವೆ: ಲಕ್ಷ್ಮಿ ಹೆಬ್ಬಾಳ್ಕರ್
ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಭಾಸ್ಕರ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತರಬೇತಿ ಕಾರ್ಯಕ್ರಮ ನಡೆಯಿತು.