ಹೊಸಪೇಟೆ: ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ವಿಸ್ತಾರ ಕನ್ನಡ ಸಂಭ್ರಮ(Vistara News Launch) ಕಾರ್ಯಕ್ರಮ ಶನಿವಾರ ಅದ್ಧೂರಿಯಾಗಿ ನಡೆಯಿತು. ಕುರಗೋಡು ಶಾಖಾ ಮಠದ ನಿರಂಜನ ಪ್ರಭುದೇವರು, ಬಳ್ಳಾರಿಯ ಶ್ರೀಧರ ಗಡ್ಡೆ ಮರಿ ಕೊಟ್ಟೂರು ದೇವರು ಅವರ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಉದ್ಘಾಟಿಸಿದರು.
ಸಚಿವ ಆನಂದ್ ಸಿಂಗ್ ಮಾತನಾಡಿ, ವಿಸ್ತಾರ ಚಾನೆಲ್ ರಾಜ್ಯಾದ್ಯಂತ ಪಸರಿಸಲಿ. ಹೆಚ್ಚು ಹೆಚ್ಚು ವೀಕ್ಷಕರನ್ನು ಪಡೆದು ಎತ್ತರಕ್ಕೆ ಬೆಳೆಯಲಿ. ವಿಜಯನಗರ ಜಿಲ್ಲೆಗೆ ಉತ್ತಮ ವರದಿಗಾರರನ್ನು ವಿಸ್ತಾರ ಚಾನೆಲ್ ನೀಡಿದೆ. ವಾಹಿನಿಗೆ ಪಂಪಾ ವಿರುಪಾಕ್ಷ ಒಳ್ಳೆಯದು ಮಾಡಲಿ ಎಂದು ಶುಭ ಕೋರಿದರು.
ಇದನ್ನೂ ಓದಿ | Vistara News Launch | ಸುದ್ದಿ ಮಾಧ್ಯಮಗಳು ಜನಪರವಾಗಿರಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಶಯ
ಕುರಗೋಡು ಶಾಖಾ ಮಠದ ನಿರಂಜನ ಪ್ರಭುದೇವರು ಮಾತನಾಡಿ, ಕೆಲ ಚಾನೆಲ್‌ಗಳು ಈಗ ಸುದ್ದಿವಾಹಿನಿಗಳಾಗಿ ಉಳಿದಿಲ್ಲ. ಅದೆಲ್ಲದರ ಮಧ್ಯೆ ವಿಸ್ತಾರ ನ್ಯೂಸ್ ಒಳ್ಳೆಯ ಸುದ್ದಿಗಳನ್ನು ಕೊಡುವ ಮೂಲಕ ಮೆಚ್ಚುಗೆ ಪಡೆಯಲಿ ಎಂದರು. ಪದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮ ಮಾತಮಾಡಿ, ರಾಜ್ಯದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಕಲೆ ಬೆಳೆಯಲು ಮುಂಚೂಣಿಯಲ್ಲಿ ನಿಂತು ವಿಸ್ತಾರ ವಾಹಿನಿ ಕೆಲಸ ಮಾಡಲಿ ಎಂದು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ವಿಸ್ತಾರ ಕನ್ನಡ ಪರ ಕೆಲಸ ಮಾಡುವ ಸುದ್ದಿ ವಾಹಿನಿಯಾಗಿ ಬೆಳೆಯಲಿ ಎಂದು ಶುಭ ಕೋರಿದರು. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ವಿಸ್ತಾರ ಸುದ್ದಿ ವಾಹಿನಿ ಮಾಡಲಿ ಎಂದು ಕಾಂಗ್ರೆಸ್ ಮುಖಂಡ ಗುಜ್ಜಲ್ ನಾಗರಾಜ್ ಹೇಳಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಪತ್ರಿಕೋದ್ಯಮದಲ್ಲಿ ಬಹಳ ಪೈಪೋಟಿ ಇದ್ದು, ಅದರ ಮಧ್ಯೆ ಮುನ್ನುಗ್ಗಿ ವಿಸ್ತಾರ ಸುದ್ದಿವಾಹಿನಿ ಗೆಲುವು ಕಾಣಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಭಾಷಣ ಮಾಡಿದ ಹಂಪಿ ವಿಶ್ವವಿದ್ಯಾಲಯ ಡಾ. ವೀರೇಶ್, ಸಾಮಾಜಿಕ ನೆಲೆಗಟ್ಟಿನ ಮೇಲೆ ಯಾರ ಹಂಗಿಲ್ಲದೇ ಇಂದಿನ ಸುದ್ದಿ ವಾಹಿನಿಗಳು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾರುತಿ ರಾವ್ ಹಾಗೂ ಕುಟುಂಬಸ್ಥರು ಸ್ವಾಗತ ಗೀತೆ ಹಾಡಿದರು. ಡ್ಯಾನ್ಸ್ ಮಾಸ್ಟರ್ ಕೊಟ್ರೇಶ್ ನೇತೃತ್ವದ ಪುಟಾಣಿಗಳ ತಂಡ ಹಾಗೂ ಸ್ಕೂಲ್ ಆಫ್ ಡ್ಯಾನ್ಸ್ ಶಾಲಾ ತಂಡ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ ಬೊಂಬೆ ಹೇಳುತೈತೆ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದರು. ಗಾಯಕರಾದ ವೆಂಕಟೇಶ್ ಹಾಗೂ ಬಸವರಾಜ್ ಅದ್ಭುತವಾಗಿ ಸಿನಿಮಾ ಹಾಡುಗಳನ್ನು ಹಾಡಿ ರಂಜಿಸಿದರು. ಕಾರ್ಯಕ್ರಮವನ್ನು ವೀರಮ್ಮ ಹಿರೇಮಠ್ ಹಾಗೂ ಶಿವರಾಜ್ ನಿರೂಪಿಸಿ ವಂದಿಸಿದರು.
ಶಿವಲೀಲಾ ಚಿತ್ರ ತಂಡ, ಶಂಕರ್ ಆನಂದ್ ಸಿಂಗ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಹೊಸಪೇಟೆ ತಾಲೂಕಿನ ಪತ್ರಿಕಾ ಮಿತ್ರರು, ಕುರುಬ ಸಮಾಜದ ಗಣ್ಯವ್ಯಕ್ತಿಗಳು ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು.
ಇದನ್ನೂ ಓದಿ | Vistara News Launch | ಶ್ರೀನಿವಾಸ್ ಹೆಬ್ಬಾರ್ ಅವರ ಸಾಮಾಜಿಕ ಕಾರ್ಯ ಯುವ ಸಮುದಾಯಕ್ಕೆ ಮಾದರಿ