ಕೂಡ್ಲಿಗಿ: ತಾಲೂಕಿನ ನರಸಿಂಹಗಿರಿ ಗ್ರಾಮದ ಪಶುಪಾಲನೆ ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ , ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಸಹಯೋಗದಲ್ಲಿ ಮಂಗಳವಾರ ಕಾಲುಬಾಯಿ ರೋಗ ಲಸಿಕಾ ಅಭಿಯಾನ (Foot and Mouth Disease Vaccination campaign) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೂಡ್ಲಿಗಿ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಶುಪಾಲನೆ ಭಾಗವಾದ ಆಕಳು ಎತ್ತು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಜಾನುವಾರುಗಳ ಆರೋಗ್ಯದ ಸಮಸ್ಯೆ ಕಂಡುಬಂದ ವೇಳೆ ತಾಲೂಕಿನ ರೈತರು ಕರೆ ಮಾಡಿದಾಗ ವೈದ್ಯಕೀಯ ತಂಡ ತಕ್ಷಣ ಭೇಟಿ ನೀಡಿ, ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ: SBI SO Recruitment 2023: ಎಸ್‌ಬಿಐಯಲ್ಲಿದೆ 439 ಹುದ್ದೆ; ಪದವಿ ಹೊಂದಿದವರು ಅರ್ಜಿ ಸಲ್ಲಿಸಿ
ಇದೇ ವೇಳೆ ಕೂಡ್ಲಿಗಿ ತಾಲೂಕಿನ ವೈದ್ಯರ ಸಿಬ್ಬಂದಿ, ಔಷಧಿ ಗುಣಮಟ್ಟ, ವೈದ್ಯಕೀಯ ಸೇವೆ, ಲಸಿಕೆ ವಿಧಾನ, ಆಸ್ಪತ್ರೆ ಕಟ್ಟಡಗಳ ಸ್ಥಿತಿ ಹಾಗೂ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಕಾರ್ಯ ನಿರ್ವಹಣೆ ಇತ್ಯಾದಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಿರಿಗುಂಬಳಗುಂಟೆ ಪಶುವೈದ್ಯಾಧಿಕಾರಿ ಡಾ. ಮಂಜುಶ್ರೀ, ಚಿರತಗುಂಡು ಪಶುವೈದ್ಯಾಧಿಕಾರಿ ಡಾ. ಇಸ್ಮಾಯಿಲ್ ಜಬೀಉಲ್ಲ, ಡಾ. ಲೋಹಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.