Site icon Vistara News

Vikas Bank: ವಾರಸುದಾರರ ಹುಡುಕಿ ಹಣ ವಾಪಾಸಾತಿಗೆ ಚಾಲನೆ: ವಿಶ್ವನಾಥ ಚ.ಹಿರೇಮಠ

vikas bank president Vishwanath Ch Hiremath

ಹೊಸಪೇಟೆ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಡೆಫ್ (DEAF) ಖಾತೆಗೆ ಜಮೆ ಮಾಡಲಾದ ವಾರಸುದಾರರು ಇಲ್ಲದ 51 ಲಕ್ಷ ರೂ.ಗಳನ್ನು ವಾರಸುದಾರರನ್ನು ಹುಡುಕಿ ಹಣ ಮರಳಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ವಿಕಾಸ ಸೌಹಾರ್ದ ಕೋ- ಆಪರೇಟಿವ್ ಬ್ಯಾಂಕ್ ಲಿ. (Vikas Bank) ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಹೇಳಿದರು.

ವಿಕಾಸ ಸೌಹಾರ್ದ ಕೋ- ಆಪರೇಟಿವ್ ಬ್ಯಾಂಕ್‌ನ 28ನೇ ವಾರ್ಷಿಕೋತ್ಸವ ಅಂಗವಾಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲ ಗ್ರಾಹಕರು ಎಸ್‌ಬಿ, ಎಫ್‌ಡಿ ಹಾಗೂ ಡಿಡಿಯ ಹಣ ಕಳೆದ 10-15 ವರ್ಷಗಳಿಂದ ಹಾಗೇ ಬಿಟ್ಟಿದ್ದು, ಅಂತಹವರ ವಿಳಾಸ ಪತ್ತೆ ಹಚ್ಚಿ ಭಾರತೀಯ ರಿಸರ್ವ್‌ ಬ್ಯಾಂಕಿನಿಂದ ಹಣ ಮರಳಿಸಿ ಕೊಡಲಾಗುವುದು ಎಂದರು.

ಇದನ್ನೂ ಓದಿ | Post office savings : ಅಂಚೆ ಇಲಾಖೆಯ ಉಳಿತಾಯ ಖಾತೆಗಳಲ್ಲಿ 3 ಬದಲಾವಣೆ ಯಾವುದು?

ಬ್ಯಾಂಕಿನ ಸದಸ್ಯರಿಗೆ ಈ ವರ್ಷ ಶೇ.18 ಲಾಭಾಂಶವನ್ನು ನೀಡಲಾಗುವುದು. ಸದ್ಯ ಬ್ಯಾಂಕ್ 8 ಶಾಖೆಗಳನ್ನು ಹೊಂದಿದ್ದು, ಇವುಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತೋರಣಗಲ್ಲು ಶಾಖೆಗೆ ‘ಉತ್ತಮ ಶಾಖೆ’ ಪ್ರಶಸ್ತಿ ನೀಡಲಾಗಿದೆ. ಜತೆಗೆ ವಿಮಾ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ತೋರಣಗಲ್ಲು, ಸಿಂಧನೂರು, ಹೊಸಪೇಟೆ, ಕೊಟ್ಟೂರು, ಗಂಗಾವತಿ, ಬಳ್ಳಾರಿ, ಹುಬ್ಬಳ್ಳಿ ಹಾಗೂ ಬೀದರ್ ಶಾಖೆಗಳಿಗೆ ಇಪ್ಕೋ ಟೋಕಿಯೊ ಕಂಪನಿ ಗೌರವಿಸಿದೆ. ‘ವಿಕಾಸ ಅನ್ವೇಷಣಾ’ ಪುರಸ್ಕಾರ ಪಡೆದ ಬ್ಯಾಂಕಿನ ಸಿಬ್ಬಂದಿ ವಿನುತ ಎಸ್.ಸಿ, ಪ್ರಣತಿ ಎಂ. ಹಾಗೂ ವಾಹಿನಿ ಜೆ. ಅವರನ್ನು ವಾರ್ಷಿಕೋತ್ಸವದಲ್ಲಿ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಸ್ತುತ ವರ್ಷದಿಂದ ತೋರಣಗಲ್ಲು ಶಾಖೆ ಸ್ವಂತ ಕಟ್ಟಡ ಹೊಂದಿದ್ದು ಆಶಾದಾಯಕವಾಗಿದೆ. ಅಲ್ಲದೇ, ವಿಕಾಸ ಬ್ಯಾಂಕ್ ಹೊಸಪೇಟೆಯಲ್ಲಿ ಸ್ವಂತ ಕಟ್ಟಡ ಹೊಂದಲಿದ್ದು, 4.50 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ. ನೂತನ ಸ್ವಂತ ಕಟ್ಟಡದಲ್ಲಿ 365 ದಿನ ಹಾಗೂ ದಿನದ 24 ಗಂಟೆಯೂ ಗ್ರಾಹಕರಿಗೆ ಇ-ಲಾಕರ್ ಬಳಕೆಯ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಇದು ಕರ್ನಾಟಕ ರಾಜ್ಯದ ಮೊದಲ ಪ್ರಯತ್ನವಾಗಿದೆ. ಸದ್ಯ ಈ ವ್ಯವಸ್ಥೆ ಮಹಾರಾಷ್ಟ್ರದ ಪುಣೆ ಮತ್ತು ಮುಂಬಯಿಯಲ್ಲಿದೆ ಎಂದರು.

ವಿಕಾಸ ಬ್ಯಾಂಕ್ ಪ್ರಸ್ತುತ 8 ಶಾಖೆಗಳನ್ನು ಹೊಂದಿದ್ದು, ಹಂತ ಹಂತವಾಗಿ ಒಟ್ಟಾರೆ 2024ರ ಮಾ.31ರೊಳಗೆ ಇನ್ನೂ 9 ಶಾಖೆಗಳು ಆರಂಭಗೊಳ್ಳಲಿವೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಬ್ಯಾಂಕ್ ಸ್ವಂತ ಐಎಫ್‌ಸಿ ಕೋಡ್ ಹೊಂದಿದ್ದು, ಐಎಫ್‌ಸಿ ಪಡೆದ ರಾಜ್ಯದ 6ನೇ ಸಹಕಾರಿ ಬ್ಯಾಂಕ್ ಆಗಿದೆ ಎಂದು ಶ್ಲಾಘಿಸಿದರು.

ಇದನ್ನೂ ಓದಿ | Fixed deposit : ಬ್ಯಾಂಕ್‌ಗಳಲ್ಲಿ ಏರುಗತಿಯಲ್ಲಿದ್ದ ಠೇವಣಿಗಳ ಬಡ್ಡಿ ದರ ಮತ್ತೆ ಇಳಿಕೆಯಾಗಿದ್ದೇಕೆ?

ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಬಿ.ಜಿ.ಕುಲಕರ್ಣಿ, ಬ್ಯಾಂಕ್ ನಿರ್ದೇಶಕರಾದ ಛಾಯಾ ದಿವಾಕರ, ದೊಡ್ಡ ಬೋರಯ್ಯ, ಸಿ.ಎಸ್.ಸೊಪ್ಪಿಮಠ, ರಾಜೇಶ್ ಹಿರೇವ್ಮಠ, ಲಲಿತಾ ಪ್ರಸನ್ನ, ರಮೇಶ ಪುರೋಹಿತ, ಚಂದಾಹುಸೇನ್, ಶ್ರೀಕಾಂತ ಅಗ್ನಿಹೋತ್ರಿ, ಎಂ.ವೆಂಕಪ್ಪ, ಗಂಗಾಧರ ಪತ್ತಾರ, ಮಲ್ಲಿಕಾರ್ಜುನ ಅಕ್ಕಿ, ಕುಮಾರಿ ಪದ್ಮಾವತಿ, ಉಷಾ ಕೆ., ವಿಕಾಸ ಕೆ. ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಇದ್ದರು.

Exit mobile version