ಹಗರಿಬೊಮ್ಮನಹಳ್ಳಿ: ಚಿಕಿತ್ಸೆಗಾಗಿ ಆಸ್ಪತ್ರೆಗೆ (Hospital) ಆಗಮಿಸುವ ರೋಗಿಗಳಿಗೆ (Patients) ಆಸನ ಮತ್ತು ನೆರಳಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ (Infrastructure) ಒದಗಿಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಸಾರ್ವಜನಿಕರ ಆಸ್ಪತ್ರೆ, ವಿವಿಧ ಸರ್ಕಾರಿ ಕಚೇರಿಗಳಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಬಳಿಕ ಅವರು ಮಾತನಾಡಿದರು.
ಚಿಕಿತ್ಸೆ ಪಡೆಯಲು ಬರುವ ರೋಗಿಗಳು ನಿಲ್ಲದಂತೆ ಸೂಕ್ತ ಆಸನ ವ್ಯವಸ್ಥೆ ಹಾಗೂ ಆಸ್ಪತ್ರೆ ಆವರಣದಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲು ಬೇಕಾದ ಅಗತ್ಯ ಸೌಕರ್ಯದ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು.
ಆಸ್ಪತ್ರೆಗೆ ಅವಶ್ಯವಿರುವ ಚಿಕಿತ್ಸಾ ಸಲಕರಣೆಗಳ ಮಾಹಿತಿ ಪಡೆದರು. ನಂತರ ರೋಗಿಗಳಿಗೆ ಆಸ್ಪತ್ರೆಯಿಂದಲೇ ಅಗತ್ಯ ಔಷಧಿ ನೀಡಬೇಕು, ರೋಗಿಗಳಿಂದಲೇ ತರಿಸಿಕೊಳ್ಳುವುದು ಕಂಡುಬಂದಲ್ಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ವೈದ್ಯರ ಕೊರತೆ ಇರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಈಗಾಗಲೇ ವೈದ್ಯರ ನೇಮಕಕ್ಕೆ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಹಗರಿಬೊಮ್ಮನಹಳ್ಳಿ ತಾಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ಅವರು ಭೂಮಿ, ಪಹಣಿ ಸೇರಿದಂತೆ ಇತರ ಸರ್ಕಾರಿ ಸೇವೆಗಳು ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ನಂತರ ಸರ್ಕಾರದ ಸೇವೆ ಪಡೆಯಲು ಬಂದಿದ್ದ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡರು.
ನಂತರ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ಸೌಲಭ್ಯ ಹಾಗೂ ಊಟೋಪಚಾರದ ಬಗ್ಗೆ ಮಾಹಿತಿ ಪಡೆದರು.
ನಂತರ ಹಗರಿಬೊಮ್ಮನಹಳ್ಳಿ ಪುರಸಭೆ ಕಚೇರಿಗೆ ಭೇಟಿ ನೀಡಿ, ನಗರೋತ್ಥಾನ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ವರದಿ, ದಾಖಲೆಗಳನ್ನು ಪರಿಶೀಲಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳು ಹೆಚ್ಚಿದ್ದು, ಸಂಬಂಧಪಟ್ಟ ಮಾಲೀಕರಿಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಗೋಶಾಲೆಗೆ ರವಾನಿಸಲು ಕ್ರಮಕೈಗೊಳ್ಳಲು ಡಿಸಿ ಸೂಚಿಸಿದರು.
ಇದನ್ನೂ ಓದಿ: Sirsi News:ಅಕ್ರಮ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ ಶ್ರೀಗಂಧ ವಶ
ನಂತರ ರಾಮನಗರದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕಾಲಕಳೆದು ನಂತರ ಶಾಲೆಗೆ ಒದಗಿಸಬೇಕಾದ ಮೂಲ ಸೌಕರ್ಯದ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿದರು.