Site icon Vistara News

Vijayanagara News: ಕೊಳವೆ ಬಾವಿ ಕೊರೆಯಿಸಲು ಸ್ಥಳ ಗುರುತಿಸಿ: ಶಾಸಕ ಎಚ್.ಆರ್. ಗವಿಯಪ್ಪ ಸೂಚನೆ

Vijayanagar MLA H R Gaviyappa meeting with officers in Kamalapur

ಹೊಸಪೇಟೆ: ಹೊಸಪೇಟೆ ತಾಲೂಕಿನಲ್ಲಿ ಕುಡಿಯುವ ನೀರು (Drinking Water) ಪೂರೈಕೆಗೆ ಅವಶ್ಯವಿರುವ ಕಡೆ ಕೊಳವೆ ಬಾವಿ (Borewell) ಕೊರೆಯಿಸಲು ಸ್ಥಳ ಗುರುತಿಸಿ ವಿವರ ಸಲ್ಲಿಸುವಂತೆ ವಿಜಯನಗರ ಶಾಸಕ ಎಚ್.ಆರ್. ಗವಿಯಪ್ಪ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಬರಗಾಲ ಹಿನ್ನಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರು ಮಾತನಾಡಿದರು

ಹೊಸಪೇಟೆ ತಾಲೂಕನ್ನು ಬರ ಪೀಡಿತ ಎಂದು ಈಗಾಗಲೇ ಘೋಷಿಸಿರುವುದರಿಂದ ಹಾಗೂ ಈ ವರ್ಷ ಮಳೆ ಪ್ರಮಾಣ ಕೂಡ ವಾಡಿಕೆಗಿಂತ ಬಹಳ ಕಡಿಮೆ ಆಗಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಅತಿ ಹೆಚ್ಚು ಅಭಾವವಾಗುವ ಸಂಭವವಿದೆ. ಈ ಹಿನ್ನಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಡ ಮಾಡದೆ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವವಾಗುವ ಸಂಭವವಿದೆ. ಅಂತಹ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ, ಅಲ್ಲಿ ಬೋರ್‌ವೆಲ್ ಕೊರೆಯಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Kidney Stones: ಕಿಡ್ನಿ ಕಲ್ಲಿನ ಕುರಿತು ಈ ಸಂಗತಿ ತಿಳಿದಿರಲಿ…

ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯನ್ನು ಕುಡಿಯುವ ನೀರಿನ ಮೂಲಗಳ ಪುನಶ್ಚೇತನಕ್ಕೆ ಆದಷ್ಟು ಬಳಸಿಕೊಳ್ಳಬೇಕು. ಕೊಳವೆಬಾವಿ ಕೊರೆಯಿಸಲು ಜಿಲ್ಲಾಡಳಿತದ ಬಳಿ ಅನುದಾನವಿದ್ದು, ಗ್ರಾಮ ಪಂಚಾಯಿತಿಗಳು ಅವಶ್ಯಕವಿದ್ದಲ್ಲಿ ಕ್ರಿಯಾಯೋಜನೆಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಯಾವ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಇದೆ ಎಂಬುವುದನ್ನು ಪರಿಶೀಲಿಸಿ, ಬೋರ್‌ವೆಲ್‌ಗಳ ಅವಶ್ಯಕತೆ ಕುರಿತು ಎರಡು ದಿನದಲ್ಲಿ ಪಟ್ಟಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬರಗಾಲ ಹಿನ್ನಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ತಿಳಿಸಿದರು.

ಮುಂದಿನ ವಾರ, ದೀಪಾವಳಿ ಹಬ್ಬದ ನಂತರ ‘ನಮ್ಮ ನಡಿಗೆ ಹಳ್ಳಿ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ತಾಲೂಕು ಆಡಳಿತವನ್ನು ಪ್ರತಿ ಗ್ರಾಮ ಪಂಚಾಯಿತಿಗಳ ಕೇಂದ್ರ ಸ್ಥಾನಕ್ಕೆ ಕೊಂಡೊಯ್ಯಲು ಹಾಗೂ ಅಲ್ಲಿ ಗ್ರಾಮ ಸಭೆ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ಹಾಗೂ ಮೂಲಭೂತ ಸೌಕರ್ಯಗಳ ಸ್ಥಿತಿಗತಿಗಳ ಕುರಿತು ಪರಿಶೀಲಿಸಲು ಯೋಜಿಸಲಾಗಿದ್ದು, ಈ ಕುರಿತು ಅಧಿಕಾರಿಗಳು ಸನ್ನದ್ಧರಾಗಿರುವಂತೆ ಸೂಚನೆ ನೀಡಿದರು.

ಇದನ್ನೂ ಓದಿ: Deepavali Festival: ದೀಪಾವಳಿಯ ದೀಪಾಲಂಕಾರಕ್ಕೆ ಬಂತು ವೈವಿಧ್ಯಮಯ ಡಿಸೈನ್‌ನ ದೀಪ

ಸಭೆಯಲ್ಲಿ ಹೊಸಪೇಟೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ ಉಮೇಶ್ ಸೇರಿದಂತೆ ಕಮಲಾಪುರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ, ವಿಜಯನಗರ ಕ್ಷೇತ್ರದ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version